ರೈತರಿಗೆ ಅಧಿಕ ಪರಿಹಾರ
News

ರೈತರಿಗೆ ಅಧಿಕ ಪರಿಹಾರ

March 26, 2022

ಬೆಂಗಳೂರು, ಮಾ.25(ಕೆಎಂಶಿ)-ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎ ಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ನು ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಎನ್.ಎ.ಹ್ಯಾರಿಸ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು, ಇತ್ತೀಚೆಗೆ ಹಾಲಿ ಇದ್ದ ಕೆಐಎ ಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗದಂತೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಹೊಸ ಭೂಸ್ವಾಧೀನ ಕಾಯ್ದೆ 2013ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬಂಧ ಕೆಐಎ ಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ನಾವು ಯಾವುದೇ ವಿಳಂಬವಾಗದಂತೆ ಪರಿಹಾರ ವನ್ನು ವಿತರಣೆ ಮಾಡಲಿದ್ದೇವೆ ಎಂದರು.

ಕೆಐಎಡಿಬಿ ಕಾಯ್ದೆ ಕಾಲಂ 28/4 ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ದರ ನಿಗದಿ ಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧಾರಣಾ ಸಲಹಾ ಸಮಿತಿ ಸಭೆಯಲ್ಲಿ ಭೂಮಾಲೀಕರೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರವನ್ನು ನಿಗದಿಪಡಿಸು ತ್ತಾರೆ ಎಂದರು. ಕೆಐಎಡಿಬಿಯಿಂದ ಭೂಸ್ವಾಧೀನಪಡಿಸಿದ ಜಮೀನಿಗೆ ಪಡೆಯುವ ಪರಿಹಾರ ಮೊತ್ತಕ್ಕೆ ಮೀರದ ಮೊತ್ತದಲ್ಲಿ ರೈತರು ಕೃಷಿ ಜಮೀನನ್ನು ಖರೀದಿಸಿದ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ರಿಯಾಯ್ತಿ ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಕೆಐಎಡಿಬಿಯಿಂದ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಕೈಗಾರಿಕಾ ಪ್ರದೇಶದ ಜಮೀನುಗಳಿಗೆ ಭೂ ಪರಿ ಹಾರದ ಬದಲಾಗಿ ಪ್ರತಿ ಎಕರೆ ಜಮೀನಿಗೆ ನೀಡುತ್ತಿರುವ ಅಭಿವೃದ್ಧಿಪಡಿಸಿದ 9,583 ಚದರಡಿ ಜಾಗವನ್ನು 10,781 ಚದರಡಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಅಭಿವೃದ್ಧಿಪಡಿಸಿದ ಜಮೀನನ್ನು ನೀಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ಇರುತ್ತದೆ ಎಂದರು.

ಜಮೀನುಗಳಿಗೆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಖಾತೆದಾರರು, ಹಿತಾಸಕ್ತಿದಾರರಿಗೆ ಆರ್‍ಟಿಜಿಎಸ್ ಮುಖಾಂತರ ಭೂಮಾಲೀಕರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು.

Translate »