ಚಾ.ನಗರ ನಗರಸಭಾ ಸದಸ್ಯನಿಗೆ ಜೈಲು ಶಿಕ್ಷೆ
ಚಾಮರಾಜನಗರ

ಚಾ.ನಗರ ನಗರಸಭಾ ಸದಸ್ಯನಿಗೆ ಜೈಲು ಶಿಕ್ಷೆ

March 26, 2022

ಚಾಮರಾಜನಗರ, ಮಾ.25(ಎಸ್‍ಎಸ್)-ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ನಗರಸಭಾ ಆಯುಕ್ತರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ನಗರಸಭಾ ಸದಸ್ಯನೊಬ್ಬನಿಗೆ ನಗರದ ಪ್ರಧಾನ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾ ಲಯವು 1 ವರ್ಷ ಸಾದ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ. ಹಾಲಿ ಚಾಮರಾಜನಗರದ 15ನೇ ವಾರ್ಡ್‍ನ ಕಾಂಗ್ರೆಸ್ ಸದಸ್ಯ ಆರ್.ಪಿ.ನಂಜುಂಡ ಸ್ವಾಮಿ ಶಿಕ್ಷೆÀ್ಷಗೆ ಗುರಿಯಾದವರು.
ಪ್ರಕರಣದ ಹಿನ್ನೆಲೆ: 2010ರ ನ.10ರಂದು ಯಡಬೆಟ್ಟದ ಸರ್ಕಾರಿ ಜಾಗದಲ್ಲಿ ನಗರಸಭಾ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಗೆ ಗುದ್ದಲಿಪೂಜೆ ಹಮ್ಮಿ ಕೊಳ್ಳಲಾಗಿತ್ತು. ಈ ವೇಳೆ ನಗರಸಭೆ ಆಯುಕ್ತರಾಗಿದ್ದ ಎಸ್.ಪ್ರಕಾಶ್ ಅವರ ಜೊತೆ ಅಂದು 27ನೇ ವಾರ್ಡ್‍ನ ಬಿಎಸ್ಪಿ ಸದಸ್ಯರಾಗಿದ್ದ ಆರ್.ಪಿ.ನಂಜುಂಡಸ್ವಾಮಿ ಹಳೆ ಕಾಮಗಾರಿಗಳ ಲೆಕ್ಕಗಳನ್ನು ಕೇಳುವ ನೆಪದಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಯಂಟು ಮಾಡಿದ್ದಲ್ಲದೆ, ಎಸ್.ಪ್ರಕಾಶ್ ಅವರ ಜೊತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿತ್ತು. ಈ ಬಗ್ಗೆ ತನಿಖೆ ನಡೆದು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರು, ನಂಜುಂಡಸ್ವಾಮಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಸಿ.ಮಹೇಶ್ ವಾದ ಮಂಡಿಸಿದ್ದರು. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಂದಿನ ಆರಕ್ಷಕ ಉಪನಿರೀಕ್ಷಕ ಬಿ.ಜಿ.ಕುಮಾರ್ ಅವರು ಈ ಬಗ್ಗೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Translate »