ಕತ್ತಲಾವರಿಸಿದರೆ ಸಾಕು ಮೈಸೂರಿನ ಪಾರ್ಕ್‍ಗಳು ಬಯಲು ಬಾರ್‍ಗಳು!
ಮೈಸೂರು

ಕತ್ತಲಾವರಿಸಿದರೆ ಸಾಕು ಮೈಸೂರಿನ ಪಾರ್ಕ್‍ಗಳು ಬಯಲು ಬಾರ್‍ಗಳು!

March 26, 2022

ಮೈಸೂರು,ಮಾ.25(ಆರ್‍ಕೆ)-ಹಗಲಿನಲ್ಲಿ ವಾಯುವಿಹಾರ ತಾಣವಾಗಿ ರುವ ಮೈಸೂರಿನ ಉದ್ಯಾನವನಗಳು ಕತ್ತಲಾವರಿಸುತ್ತಿದ್ದಂತೆ ಕುಡುಕರ, ಡ್ರಗ್ಸ್ ವ್ಯಸನಿಗಳು ಹಾಗೂ ಸಮಾಜಘಾತುಕರ ತಾಣವಾಗಿ ಪರಿವರ್ತನೆಯಾಗುತ್ತಿವೆ.

ಪುಂಡ-ಪೋಕರಿಗಳು ತಮ್ಮ ತೆವಲು ತೀರಿಸಿಕೊಂಡ ನಂತರ ಮದ್ಯದ, ನೀರಿನ ಬಾಟಲಿಗಳು, ಪಾರ್ಸಲ್ ತರುವ ಪ್ಲಾಸ್ಟಿಕ್ ಇನ್ನಿತರೆ ಪರಿಸರ ಹಾನಿ ಕಾರಕ ಪೊಟ್ಟಣಗಳನ್ನು ಅಲ್ಲೇ ಬಿಸಾಡುತ್ತಿರುವುದು ಮೈಸೂರಿನ ಬಹುತೇಕ ಉದ್ಯಾನಗಳಲ್ಲಿ ಕಣ್ಣಿಗೆ ರಾಚುತ್ತಿದೆ. ರಾತ್ರಿ ಸುಮಾರು 7.30 ಗಂಟೆಯವ ರೆಗೂ ಪಾರ್ಕುಗಳಲ್ಲಿ ವಾಯುವಿಹಾರ ಮಾಡುವ ಹಿರಿಯ ನಾಗರಿಕರೂ ಮದ್ಯದ ಬಾಟಲಿಗಳು ಕಣ್ಣಿಗೆ ಬಿದ್ದರೂ, ಅಥವಾ ಪುಂಡ ಪೋಕರಿಗಳು ಮದ್ಯಪಾನ ಮಾಡುತ್ತಿರುವುದು ನೋಡಿಯೂ ನೋಡದಂತೆ ಹೋಗುವ ಭಯದ ವಾತಾವರಣವಿದೆ. ಇದನ್ನು ಪ್ರಶ್ನಿಸಿದರೆ ಜೀವಕ್ಕೆ ಕುತ್ತು ತಂದಾರೂ ಎಂಬ ಕಾರಣಕ್ಕೆ ಯಾರೂ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಅದೇ ರೀತಿ ಮುಂಜಾನೆಯಿಂದ ಬೆಳಗ್ಗೆ 9ರವರೆಗೂ ವಾಕಿಂಗ್, ಜಾಗಿಂಗ್, ಜಿಮ್ ಮಾಡುವವರಿಗೂ ಪಾರ್ಕಿನಲ್ಲಿ ಖಾಲಿ ಮದ್ಯದ ಬಾಟಲಿಗಳ ದರ್ಶನವಾದರೂ ಕೆಲವು ಹಿರಿಯ ನಾಗರಿಕರನ್ನು ಹೊರತುಪಡಿಸಿದರೆ ಉಳಿದವರು ಇದು ನಮಗೆ ಸಂಬಂಧಪಟ್ಟ ವಿಚಾರವಲ್ಲ ಎಂಬಂತೆ ಸಂಬಂಧಪಟ್ಟ ಅಧಿಕಾರಿಗಳಿಗಾಗಲಿ, ಪೊಲೀಸರಿಗಾಗಲೀ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಪಾರ್ಕ್‍ಗಳಲ್ಲಿ ಸಿಗರೇಟ್ ಪ್ಯಾಕ್, ಮದ್ಯದ ಖಾಲಿ ಬಾಟಲಿ, ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ್, ಪೇಪರ್, ಅಳಿದುಳಿದ ಆಹಾರ ಪದಾರ್ಥಗಳು ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸದೇ ಇರುವುದರಿಂದ ಉದ್ಯಾನವನಗಳ ನೈಸರ್ಗಿಕ ವಾತಾವರಣ ಹಾಳಾಗುತ್ತಿದೆ ಎಂಬ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾರ್ವಜನಿಕ ಆಸ್ತಿಯಾಗಿರುವುದರಿಂದ ಉದ್ಯಾನವನಗಳಿಗೆ ಗೇಟ್ ಹಾಕಿ ಬೀಗದಿಂದ ಬಂದ್ ಮಾಡಲು ಸಾಧ್ಯವಿಲ್ಲದಿರುವ ಕಾರಣ ಯಾರು ಬೇಕಾದರೂ ಹೋಗಬಹುದು. ಇವುಗಳನ್ನು ಬಳಸಿಕೊಳ್ಳಬಹುದು. ಕೆಲವೆಡೆ ಅಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಗಳೇ ಇಲ್ಲ, ಅವುಗಳನ್ನು ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವುದು ಅನೈತಿಕ ಚಟುವಟಿಕೆ ನಡೆಸುವವರಿಗೆ ಪ್ರಶಸ್ತ ಸ್ಥಳಗಳಾಗಿ ಮಾರ್ಪಾಡಾಗುತ್ತಿವೆ. ಕೆÀಲವು ಪಾರ್ಕ್‍ಗಳಿಗೆ ಸುತ್ತ ಕಾಂಪೌಂಡ್ ಇದ್ದರೆ, ಮತ್ತೆ ಕೆಲವನ್ನು ಮುಳ್ಳು ತಂತಿ ಬೇಲಿಗಳಿಂದ ರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಪುಂಡರು, ಕಳ್ಳಕಾಕರು ಇವುಗಳನ್ನು ಭೇದಿಸಿ ಒಳನುಗ್ಗುತ್ತಿ ದ್ದಾರೆ. ಇನ್ನೂ ಅನೇಕ ಪಾರ್ಕ್‍ಗಳಿಗೆ ಯಾವುದೇ ರಕ್ಷಣೆ ಇಲ್ಲದೇ ಇವುಗಳು ತರಕಾರಿ, ಹಣ್ಣು ಹಂಪಲು ಸಸ್ಯಾಹಾರಿ- ಮಾಂಸಾಹಾರಿ ಆಹಾರ ಪದಾರ್ಥಗಳ ಮಾರಾಟ ಕೇಂದ್ರ ಗಳಾಗುತ್ತಿವೆ. ಪಾರ್ಕ್‍ಗಳಿಗೆ ಸೆಕ್ಯೂರಿಟಿ ವ್ಯವಸ್ಥೆ ಮೊದಲೇ ಇಲ್ಲ, ಸುತ್ತಲಿನ ನಿವಾಸಿಗಳು ಅತ್ತ ತಲೆಕೆಡಿಸಿಕೊಳ್ಳುವುದಿಲ್ಲ. ಸ್ವಚ್ಛತೆ, ಗಿಡ ಬೆಳೆಸುವುದು, ನಿರ್ವಹಣೆ ಮಾಡದೇ ಇರುವುದು ಪಾರ್ಕ್‍ಗಳು ಅನೈತಿಕ ಚಟುವಟಿಕೆಯ ತಾಣವಾಗಲು ಪ್ರಮುಖ ಕಾರಣವಾಗಿದೆ.

ಎನ್.ಆರ್. ಮೊಹಲ್ಲಾದ 15ನೇ ವಾರ್ಡ್‍ಗೆ ಸೇರಿದ ರಾಜೇಂದ್ರ ನಗರ ಪಾರ್ಕ್‍ನಲ್ಲಿ ರಾತ್ರಿ 7 ಗಂಟೆ ನಂತರ ಯುವಕರು ಮದ್ಯಪಾನ ಮಾಡುತ್ತಾರೆ. ಆಗಾಗ ಜಗಳ, ಗಲಾಟೆಗಳೂ ಆಗಿದ್ದುಂಟು ಎಂದು ಸ್ಥಳೀಯ ನಿವಾಸಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮಕ್ಕಳು ಆಟವಾಡಲು, ಮಹಿಳೆಯರು, ನಾಗರಿಕರು ವಾಯುವಿಹಾರ ಹಾಗೂ ಹಿರಿಯ ನಾಗರಿಕರು ವಿಶ್ರಾಂತಿಗೆ ಅನುಕೂಲವಾಗುವಂತೆ ಅಳವಡಿಸಿರುವ ಕಲ್ಲಿನ ಬೆಂಚ್‍ಗಳನ್ನು ಮುರಿದು ಹಾಕಲಾಗಿದೆ. ಪುಂಡರ ಕೃತ್ಯಗಳಿಂದಾಗಿ ಅಲ್ಲಿನ ನೈಸರ್ಗಿಕ ವಾತಾವರಣವೇ ಹಾಳಾಗಿ ಭಯದಲ್ಲೇ ಬದುಕಬೇಕಾಗಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿ ದ್ದಾರೆ. ಅದರ ಬಗ್ಗೆ ಪೊಲೀಸರು, ಕಾರ್ಪೊರೇಟರ್‍ಗೆ ಹಲವು ಬಾರಿ ದೂರು ನೀಡಿದರೂ ಯಾರೂ ಏನೂ ಕ್ರಮ ಕೈಗೊಂಡಿಲ್ಲ, ಪಾಲಿಕೆ ಅಧಿಕಾರಿಗಳು ನಿತ್ಯ ಇಲ್ಲೇ ಓಡಾಡುತ್ತಿದ್ದರೂ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ದೂರಿದರು.

11ನೇ ವಾರ್ಡಿನ ರಾಜೀವ ನಗರದÀ ಉದ್ಯಾನವನವನ್ನು ಅಭಿವೃದ್ಧಿಪಡಿಸಿ, ಅದರಲ್ಲಿ ವಾಕಿಂಗ್ ಪಾತ್, ಮಕ್ಕಳ ಆಟಿಕೆ ಸಲಕರಣೆ, ವಯಸ್ಕರು ಜಿಮ್ ಮಾಡಲು ಅಗತ್ಯ ಸಲಕರಣೆಗಳನ್ನು ವ್ಯವಸ್ಥೆ ಮಾಡಿದ್ದರೂ ದುಷ್ಕರ್ಮಿಗಳು ಹಾಳು ಮಾಡುತ್ತಿದ್ದಾರೆ.

ಅದೇ ರೀತಿ ಮೈಸೂರಿನ ಹೃದಯ ಭಾಗದಲ್ಲಿರುವ ಮಹಾಜನ ಪಿಯು ಕಾಲೇಜು ಆವರಣ, ಅಲ್ಲಿರುವ ಮೈದಾನದಲ್ಲೂ ಇದೇ ಪರಿಸ್ಥಿತಿ ಇದೆ. ತಡ ರಾತ್ರಿಯ ವರೆಗೂ ಅಲ್ಲಿನ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರೂ ಮದ್ಯ ಪ್ರಿಯರು ಕುಡಿದು ಖಾಲಿ ಬಾಟಲಿ ಅಲ್ಲೇ ಬಿಸಾಡುತ್ತಿರುವುದು ಮಾಮೂಲಾಗಿದೆ. ವಿಜಯನಗರ ವಾಟರ್ ಟ್ಯಾಂಕ್ ಬಳಿ ಹೈಟೆನ್ಷನ್ ಮಾರ್ಗದಡಿ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಪಶ್ಚಿಮ ದ್ವಾರದೆದು ರಿನ ಪಾರ್ಕ್‍ನಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಕುಡುಕರ ಹಾವಳಿ ಆರಂಭವಾಗುತ್ತದೆ. ವಿದ್ಯುತ್ ದೀಪಗಳಿಲ್ಲದಿರುವುದರಿಂದ ಎದುರಿನಲ್ಲಿರುವ ಲಿಕ್ಕರ್ ಶಾಪ್‍ನಿಂದ ಮದ್ಯ ಖರೀದಿಸಿ ಪಾರ್ಕಿನ ಮಧ್ಯ ಕುಳಿತು ಕುಡಿಯುವುದು ನಿತ್ಯ ಸಾಮಾನ್ಯ ದೃಶ್ಯವಾಗಿದೆ.

ಮದ್ಯಪಾನ ಮಾಡಲು ಈ ಪಾರ್ಕಿನ ಸುತ್ತ ಅಳವಡಿಸಿರುವ ಕಬ್ಬಿಣದ ಜಾಲರಿಯನ್ನು ಕತ್ತರಿಸಿ ಪ್ರವೇಶದ್ವಾರ ಮಾಡಿಕೊಂಡು ಒಳಗೆ ನುಸುಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಮೈಸೂರಿನ ಬಹುತೇಕ ಉದ್ಯಾನಗಳಲ್ಲಿ ಕಂಡು ಬರುತ್ತಿದ್ದರೂ ಸುತ್ತಲಿನ ವಾಸಿಗಳಾ ಗಲೀ, ಜನಪ್ರತಿನಿಧಿಗಳಾಗಲೀ, ಪಾಲಿಕೆ, ಮುಡಾ ಅಧಿಕಾರಿಗಳಾಗಲೀ ಪರಿಹಾರೋ ಪಾಯ ಕಂಡುಕೊಳ್ಳಲು ಮುಂದಾಗುತ್ತಿಲ್ಲ ಎಂಬುದು ಶೊಚನೀಯ ಸಂಗತಿ.

Translate »