ಮುಂಬೈ, ಮಾ.25- ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಚುಟುಕು ಮಹಾಸಮರಕ್ಕೆ ಕ್ಷಣಗಣನೆ ಆರಂಭ ವಾಗಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ದೇಸಿ ಕ್ರಿಕೆಟ್ ಸಂಭ್ರಮಕ್ಕೆ ಶನಿವಾರ(ಮಾ.26) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.
ಶನಿವಾರ ಸಂಜೆ 7.30ಕ್ಕೆ ಆರಂಭ ವಾಗುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿ ರನ್ನರ್-ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಟಿ20 ಜಾತ್ರೆ ಆರಂಭವಾಗಲಿದ್ದು, ಮೇ29ಕ್ಕೆ ಮುಕ್ತಾಯವಾಗಲಿದೆ.
65 ದಿನ, 74 ಪಂದ್ಯಗಳು: ಈ ಸಾಲಿನಲ್ಲಿ ಹೊಸ ತಂಡಗಳಾಗಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಸ್ಪರ್ಧಿಸುವುದರಿಂದ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿ ರುವುದರಿಂದ ಪಂದ್ಯ ಹಾಗೂ ಪಂದ್ಯ ನಡೆಯುವ ದಿನಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ವರ್ಷ ಒಟ್ಟು 65 ದಿನ ಟೂರ್ನಿ ನಡೆಯಲಿದ್ದು, ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ಹಾಗೂ ಪ್ಲೇ-ಆಫ್ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಪ್ರತೀ ತಂಡಗಳು ಕಳೆದ ಬಾರಿಯಂತೆ ಲೀಗ್ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ.