ಇಂದಿನಿಂದ ಪ್ರೌಢಶಾಲೆ ಆರಂಭ
ಮೈಸೂರು

ಇಂದಿನಿಂದ ಪ್ರೌಢಶಾಲೆ ಆರಂಭ

February 14, 2022

ಮೈಸೂರು,ಫೆ.13(ಎಸ್‍ಬಿಡಿ, ಎಸ್‍ಪಿಎನ್)- ಮೈಸೂರು ನಗರ ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಪ್ರೌಢ ಶಾಲೆ(9&10) ಪುನಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದ್ದು, ನ್ಯಾಯಾ ಲಯದ ಆದೇಶ ಉಲ್ಲಂಘಿಸಲು ಯತ್ನಿ ಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಹೈಕೋರ್ಟ್ ಮೌಖಿಕ ಆದೇಶ ದನ್ವಯ ಸೋಮವಾರದಿಂದ ಪ್ರೌಢಶಾಲೆ ಆರಂಭಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿಕ್ಷಣ, ಪೊಲೀಸ್ ಹಾಗೂ ಕಂದಾಯ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿ ಕಾರಿಗಳು ತಮ್ಮ ವ್ಯಾಪ್ತಿಯ ಜವಾಬ್ದಾರಿ ನಿರ್ವಹಣೆಗೆ ಸೂಕ್ತ ಕ್ರಮ ವಹಿಸಿದ್ದಾರೆ. ಯಾವುದೇ ರೀತಿಯಲ್ಲೂ ನ್ಯಾಯಾ ಲಯದ ಆದೇಶ ಉಲ್ಲಂಘನೆಗೆ ಅವಕಾಶ ಮಾಡಿಕೊಡದ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮ ನ್ವಯತೆಯೊಂದಿಗೆ ಸಜ್ಜಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಾಲೆಗೆ ಸಂಬಂಧಿಸಿದವರ ಹೊರತು ಯಾರೂ ಶಾಲೆ ಬಳಿ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಡಿಡಿಪಿಐ) ರಾಮಚಂದ್ರರಾಜೇ ಅರಸ್ ಸೂಚನೆಯಂತೆ ಇಂದು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ)ಗಳೂ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರೊಂದಿಗೆ ವರ್ಚುವಲ್ ಸಭೆ ನಡೆಸಿ, ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳೂ ತಮ್ಮ ಠಾಣಾ ವ್ಯಾಪ್ತಿಯ ಮುಖ್ಯಶಿಕ್ಷಕರೊಂದಿಗೆ ಸಭೆ ನಡೆಸಿ, ಕಾನೂನು-ಸುವ್ಯವಸ್ಥೆ ಸಂಬಂಧ ಕೆಲ ಸಲಹೆ-ಸೂಚನೆ ನೀಡಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರೂ ಶಾಲಾ-ಕಾಲೇಜುಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿ, ಆದೇಶಿಸಿದ್ದಾರೆ. ಶಾಲೆ ಪುನಾರಂಭದ ಮುನ್ನಾ ದಿನವಾದ ಇಂದು ಯಾವ ಶಾಲೆಗಳ ವ್ಯಾಪ್ತಿಯಲ್ಲಿ ಏನೆಲ್ಲಾ ಬೆಳವಣಿಗೆಯಾಗಿದೆ ಎಂಬ ಮಾಹಿತಿಯನ್ನು ಬಿಇಓಗಳಿಂದ ಸಂಗ್ರಹಿಸಿರುವ ಡಿಡಿಪಿಐ, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿನ ಸೂಕ್ಷ್ಮ ಪ್ರದೇಶದ ಶಾಲೆಗಳ ಬಳಿ ಪೊಲೀಸರು ಹೆಚ್ಚಿನ ನಿಗಾ ವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಏನಾದರೂ ತೊಂದರೆ ಯಾದರೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಬಿಆರ್‍ಸಿ, ಸಿಆರ್‍ಸಿಗಳು ಬೆಳಗ್ಗೆ 8.30ರೊಳಗೆ ಕ್ಷೇತ್ರದಲ್ಲಿದ್ದು ಪರಿಸ್ಥಿತಿ ಅವಲೋಕಿಸಿ, ಏನಾದರೂ ಬೆಳವಣಿಗೆ ಕಂಡುಬಂದರೆ ತಹಸೀಲ್ದಾರ್, ಪೊಲೀಸ್ ಇನ್‍ಸ್ಪೆಕ್ಟರ್ ಹಾಗೂ ಬಿಇಓಗಳಿಗೆ ಮಾಹಿತಿ ನೀಡಲಿದ್ದಾರೆ.

ಶಾಲೆಗಳ ಪಟ್ಟಿ, ಮಕ್ಕಳ ಸಂಖ್ಯೆ, ಗುರುತಿಸಲಾಗಿರುವ ಕೆಲವೊಂದು ಶಾಲೆಗಳ ಶಿಕ್ಷಕರ ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಮೈಸೂರು ಉತ್ತರ ಹಾಗೂ ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾಹಿತಿ ಮೇರೆಗೆ ಕೆಲವು ಶಾಲೆಗಳ ಬಳಿ ಹೆಚ್ಚಿನ ನಿಗಾ ವಹಿಸಲು ವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಂತಹ ಶಾಲೆಗಳ ಬಗ್ಗೆ ಬಿಇಓಗಳು ತಹಸೀ ಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಅವರೂ ಮುಂಜಾ ಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.

ಯಾರ ಒತ್ತಡದಿಂದಲೋ ಅಥವಾ ಸ್ವಇಚ್ಛೆಯಿಂದಲೋ ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ವಸ್ತ್ರ ಧರಿಸಿ ಬಂದರೆ, ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸದೆ ಒಂದು ಕೊಠಡಿಯಲ್ಲಿ ಕೂರಿಸಬೇಕು. ನಂತರ ಅವರೊಂದಿಗೆ ಶಿಕ್ಷಕರು ಸಮಾಲೋಚನೆ ನಡೆಸಬೇಕು. ಈ ವೇಳೆ ವಿದ್ಯಾರ್ಥಿಗಳು ವ್ಯತಿರಿಕ್ತವಾಗಿ ವರ್ತಿಸಿದರೆ ತಹಸೀಲ್ದಾರ್, ಬಿಇಓ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು ಎಂದು ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ.

200 ಮೀ. ನಿಷೇಧಾಜ್ಞೆ: ಮುಂಜಾಗ್ರತಾ ಕ್ರಮವಾಗಿ ಫೆ.14ರ ಬೆಳಗ್ಗೆ 6ರಿಂದ ಫೆ.28ರ ರಾತ್ರಿ 10ರವರೆಗೆ ಮೈಸೂರು ನಗರ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳ ಆವರಣದ ಸುತ್ತಲಿನ 200 ಮೀ. ವ್ಯಾಪ್ತಿಯವರೆಗೆ ಸಿಆರ್‍ಪಿಸಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇಂದು ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿ, ಶಾಲಾ-ಕಾಲೇಜು ಸುತ್ತಲಿನ 200 ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಗುಂಪು ಸೇರುವುದು, ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಪೂರ್ವ ಸಿದ್ಧತಾ ಪರೀಕ್ಷೆ: 10ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಬಾಕಿ 2 ಪತ್ರಿಕೆಗಳ ಪರೀಕ್ಷೆಯನ್ನು ಸೋಮವಾರ ನಡೆಸಲಾಗುವುದು. ಫೆ.21ರಂದು ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಪರೀಕ್ಷೆ ನಡೆಸಲಾಗುತ್ತಿದ್ದು, ಆತಂಕಗೊಳ್ಳದೆ ವಿದ್ಯಾರ್ಥಿಗಳು ಹಾಜರಾಗುವಂತೆ ಇದೇ ವೇಳೆ ತಿಳಿಸಿದ್ದಾರೆ. ಒಟ್ಟಾರೆ ಸೋಮವಾರ ಬೆಳಗ್ಗೆ 8.30ರಿಂದಲೇ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ಷೇತ್ರದಲ್ಲಿ ಕಾರ್ಯಾರಂಭಿಸಲಿದ್ದಾರೆ. ಏನಾದರೂ ಗೊಂದಲ ಉಂಟಾದರೆ ಪೂರ್ವ ಯೋಜನೆಯಂತೆ ಸಂಬಂಧಪಟ್ಟ ಅಧಿಕಾರಿಗಳು ಸಮಾಲೋಚನೆ ನಡೆಸಿ, ತಕ್ಷಣ ಕ್ರಮ ವಹಿಸಲು ನಿರ್ಧರಿಸಲಾಗಿದೆ.

Translate »