ಚುನಾವಣಾ ಸುಧಾರಣೆ ಬಗ್ಗೆ ಎರಡು ದಿನ ಚರ್ಚೆ: ಕಾಗೇರಿ
News

ಚುನಾವಣಾ ಸುಧಾರಣೆ ಬಗ್ಗೆ ಎರಡು ದಿನ ಚರ್ಚೆ: ಕಾಗೇರಿ

February 14, 2022

ಬೆಂಗಳೂರು, ಫೆ.13-ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿ ವೇಶನ ಆರಂಭವಾಗಲಿದ್ದು, ಶಿಷ್ಟಾಚಾರದಂತೆ ರಾಜ್ಯಪಾಲರಾದ ತಾವರ್ ಚಂದ್ ಗೆಲ್ಹೋಟ್ ಅವರು 11 ಗಂಟೆಗೆ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಅಧಿವೇಶನದಲ್ಲಿ ಬಿಟ್ ಕಾಯಿನ್, ಮೇಕೆದಾಟು ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲು ಹೆಚ್ಚಿನ ಸಮಯ ನಿಗದಿಪಡಿಸುವಂತೆ ವಿರೋಧ ಪಕ್ಷಗಳು ಒತ್ತಾ ಯಿಸಿವೆ. ಚುನಾವಣಾ ಸುಧಾರಣೆಗಳ ಬಗ್ಗೆ ಚರ್ಚಿಸಲು ಪ್ರಸ್ತುತ ಅಧಿವೇಶನದಲ್ಲಿ 2 ದಿನಗಳನ್ನು ಮೀಸಲಿಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಚುನಾವಣಾ ಸುಧಾರಣೆಗಳು ಪ್ರಜಾಪ್ರಭುತ್ವಕ್ಕೆ ಪ್ರಮುಖವಾದ ವಿಷಯವಾಗಿದೆ, ಬುದ್ಧಿಜೀವಿಗಳು, ವಿಶ್ಲೇಷಕರಿಂದ ಚರ್ಚೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಂಟಿ ಅಧಿವೇಶನವನ್ನು ವ್ಯವಸ್ಥಿತವಾಗಿ ನಡೆಸಲು ಪೂರ್ವ ಸಿದ್ಧತೆ ಮಾಡಲಾಗಿದೆ. ಸದನ ನಡೆಯುವ ಹಾಲ್‍ನ್ನು ಸ್ಯಾನಿಟೈಸ್ ಮಾಡಲಾಗಿದೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾದ ಕಾರಣ ಈ ಹಿಂದಿನ ಅಧಿವೇಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕೊಟ್ಟಿಲ್ಲ. ಈ ಬಾರಿ ಅವಕಾಶ ಮಾಡಿಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು. ಸದನದಲ್ಲಿ ದೃಢವಾದ ಚರ್ಚೆ ನಡೆಸಬೇಕೆಂದು ನಾನು ಬಯಸುತ್ತೇನೆ. ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಸರ್ವಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಚರ್ಚೆಗೆ ದಿನಾಂಕಗಳನ್ನು ಅಂತಿಮಗೊಳಿಸುವುದಾಗಿ ಅವರು ಹೇಳಿದರು. ಈ ವಿಷಯವನ್ನು ಮೇಲ್ಮನೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ವಿಧಾನಪರಿಷತ್ ಸಭಾಪತಿಯವರಿಗೂ ಮನವಿ ಮಾಡಿದ್ದೇನೆ ಎಂದರು. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉಪಕುಲಪತಿಗಳಿಗೆ ಪತ್ರ ಬರೆದು ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಯನ್ನು ಆರಂಭಿಸುವಂತೆ ಮನವಿ ಮಾಡಿರುವುದಾಗಿ ಸ್ಪೀಕರ್ ತಿಳಿಸಿದರು.

ವಿಧಾನ ಪರಿಷತ್: ಈ ಬಾರಿ ವಿಧಾನಪರಿಷತ್ತಿನ ಕಲಾಪಗಳು ಫೆ.14ಕ್ಕೆ ಪ್ರಾರಂಭವಾಗಿ 10 ದಿನಗಳ ಕಾಲ ನಡೆಯಲಿದ್ದು, ಹಲವು ಮಹತ್ವದ ವಿಷಯಗಳು ಕಲಾಪದ ವೇಳೆ ಚರ್ಚೆಯಾಗಲಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಈ ಬಾರಿ ಕಲಾಪದ ವೇಳೆ ಅಂದಿನ ರಾಜಕಾರಣ ಅಂದಿನ ಚುನಾವಣೆ- ಇಂದಿನ ರಾಜಕಾರಣ ಇಂದಿನ ಚುನಾವಣೆ ಎಂಬ ವಿಷಯದ ಬಗ್ಗೆ ವ್ಯವಹಾರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಯ ಪಡೆದುಕೊಂಡು ಸದನದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ 60 ದಿನಗಳ ಕಲಾಪ ನಡೆಸಲು ಅವಕಾಶ ಒದಗಿಸುವಂತೆ ಸರ್ಕಾರಕ್ಕೆ ತಿಳಿಸಲಾಗುವುದು, ಇನ್ನೂ ಮುಂದೆ ರಾಜ್ಯಸಭೆ ಮಾದರಿಯಲ್ಲಿಯೇ ಮೇಲ್ನನೆ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರಾಜ್ಯಸಭೆ ಅಧಿವೇಶನ ನಡೆಯುವ ವೇಳೆ ದೆಹಲಿಗೆ ತೆರಳಿ ಅಲ್ಲಿನ ಕಾರ್ಯಕಲಾಪಗಳನ್ನು ವೀಕ್ಷಿಸಿ, ಅಲ್ಲಿ ಅನುಸರಿಸುವ ನಿಯಮ ಗಳು, ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದಿದ್ದೇವೆ ಎಂದು ಸಭಾಪತಿ ತಿಳಿಸಿದರು.

 

Translate »