ಕನ್ನಡಿಗರ ಮಹಾ ಮೈತ್ರಿಕೂಟ ರಚನೆ
News

ಕನ್ನಡಿಗರ ಮಹಾ ಮೈತ್ರಿಕೂಟ ರಚನೆ

February 14, 2022

ಬೆಂಗಳೂರು, ಫೆ.13- ವಿಧಾನಸಭೆ ಚುನಾವಣೆಗೆ ಇನ್ನೂ ವರ್ಷ ಇರುವಾಗಲೇ ಸದ್ದಿಲ್ಲದೆ ಸಿದ್ಧತೆ ಗಳನ್ನು ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕನ್ನಡ ಸಂಘಟನೆಗಳು, ರೈತ ಮುಖಂಡರು, ನೀರಾವರಿ ಹೋರಾಟಗಾರರು, ದಲಿತ ನಾಯಕರು ಒಳಗೊಂಡ ‘ಕನ್ನಡಿಗರ ಮಹಾಮೈತ್ರಿಕೂಟ’ ರಚನೆ ಮಾಡುವ ಸುಳಿವು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚುನಾವಣೆಗೆ ಇನ್ನೂ 14 ತಿಂಗಳ ಸಮಯವಿದೆ. ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇನೆ. ಈಗಾಗಲೇ ಕನ್ನಡಪರ ಸಂಘ ಟನೆಗಳ ಮುಖಂಡರ ಸಭೆ ಮಾಡಿದ್ದೇನೆ. ಅದೇ ರೀತಿ ರೈತರು, ದಲಿತ ಮುಖಂಡರು, ನೀರಾವರಿ ಹೋರಾಟಗಾರರನ್ನು ಕೂಡ ಸದ್ಯದಲ್ಲೇ ಭೇಟಿ ಮಾಡಲಿದ್ದೇನೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ತರಬೇಕು. ಕನ್ನಡಿಗರದ್ದೇ ಸರಕಾರ ತರಲು ‘ಕನ್ನಡಿಗರ ಮಹಾಮೈತ್ರಿಕೂಟ’ವನ್ನು ಚುನಾ ವಣೆಗೆ ಮುನ್ನವೇ ರಚನೆ ಮಾಡಲು ಸಿದ್ಧತೆ ನಡೆಸಿದ್ದೇನೆ. ಇನ್ನೆರಡು ತಿಂಗ ಳಲ್ಲಿ ಅದರ ರೂಪುರೇಷೆ ಜನತೆಗೆ ತಿಳಿಯಲಿದೆ ಎಂದು ತಿಳಿಸಿದರು.

ರಾಜ್ಯವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿದ್ದು ಸಾಕು. ಕನ್ನಡಿಗರ ಹಿತಾಸಕ್ತಿಗಳನ್ನು ಅವರು ಕಡೆಗಣಿಸಿ ರಾಜ್ಯವನ್ನು ದುಃಸ್ಥಿತಿಗೆ ದೂಡಿದ್ದೂ ಸಾಕು. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರಕಾರ ಬರುತ್ತದೆ ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ನೀಡಿ ರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈಗಿನ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇವೇ ಗೌಡರು ಹಾಗೆ ಹೇಳಿದ್ದಾರೆ.

ನಾನು ಸಹ ಮೊನ್ನೆ ಒಂದು ಕಡೆ ಹೇಳಿದ್ದೆ. ಜೆಡಿಎಸ್ ಬಿಟ್ಟು ಯಾರೂ ಸರಕಾರ ಮಾಡಲಿಕ್ಕೆ ಆಗಲ್ಲ ಎಂದಿದ್ದೆ. ಹಾಗೆಂದ ಮಾತ್ರಕ್ಕೆ 123 ಸ್ಥಾನಕ್ಕಿಂತ ಕೆಳಗೆ ಬರುತ್ತೇವೆ ಎಂದಲ್ಲ. ನಮ್ಮ ಗುರಿ 123 ಸ್ಥಾನ ಗೆಲ್ಲುವುದು. ಮುಂದಿನ ಚುನಾವಣೆಗೆ ಈ ಗುರಿ ಇಟ್ಟುಕೊಂಡೇ ಹೊರಟಿದ್ದೇವೆ ಎಂದರು. ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸಿ, ಪ್ರಾದೇಶಿಕ ಹಿನ್ನೆಲೆಯುಳ್ಳ ಕನ್ನಡಿಗರ ಸರಕಾರ ತರುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳನ್ನು ಒಂದು ಗೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

Translate »