ಆಸ್ಟ್ರೇಲಿಯಾಗೆ ಹಾಕಿ ಚಾಂಪಿಯನ್ಸ್ ಟ್ರೋಫಿ ಭಾರತ ರನ್ನರ್ ಅಪ್
ದೇಶ-ವಿದೇಶ

ಆಸ್ಟ್ರೇಲಿಯಾಗೆ ಹಾಕಿ ಚಾಂಪಿಯನ್ಸ್ ಟ್ರೋಫಿ ಭಾರತ ರನ್ನರ್ ಅಪ್

July 2, 2018

ಬ್ರೆಡ: ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಫೈನಲ್ ಪಂದ್ಯ 1-1 ಅಂತರದಲ್ಲಿ ಸಮಬಲಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್‍ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಆಸ್ಟ್ರೇಲಿಯಾ 3 ಗೋಲು ಸಿಡಿಸಿ ಮುನ್ನಡೆ ಪಡೆದರೆ, ಭಾರತ 1 ಗೋಲು ಗಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಉಳಿಸಿಕೊಂಡರೆ, ಭಾರತ ವೀರೋಚಿತ ಸೋಲು ಕಂಡಿತು.

ಪಂದ್ಯದ ಆರಂಭದಲ್ಲೇ ಭಾರತ ಅವಕಾಶವನ್ನು ಕಳೆದುಕೊಂಡಿತು. 7ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗೆದ್ದ ಭಾರತ, ಗೋಲಾಗಿ ಪರಿವರ್ತಿಸಲಿಲ್ಲ. ಆಸ್ಟ್ರೇಲಿಯಾ ಆಕ್ರಮಣಕಾರಿ ಆಟಕ್ಕೆ ಗೋಲು ಕೀಪರ್ ಹಾಗೂ ನಾಯಕ ಶ್ರೀಜೇಶ್ ಅಷ್ಟೇ ಸಮರ್ಥವಾಗಿ ಉತ್ತರ ನೀಡಿದರು.

24ನೇ ನಿಮಿಷದಲ್ಲಿ ಬ್ಲೇಕ್ ಗೋವರ್ಸ್ ಸಿಡಿಸಿದ ಗೋಲಿನಿಂದ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿತು. ಈ ಮೂಲಕ ಮೊದಲಾರ್ಧದಲ್ಲಿ ಆಸ್ಟ್ರೇಲಿಯಾ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲಿ ಭಾರತ ಕಮ್‍ಬ್ಯಾಕ್ ಮಾಡಿತು. 42ನೇ ನಿಮಿಷದಲ್ಲಿ ವಿವೇಕ್ ಪ್ರಸಾದ್ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಬಲಗೊಳಿಸಿದರು. 45ನೇ ನಿಮಿಷದಲ್ಲಿ ಭಾರತ ಆಕ್ರಮಣ ತಡೆದ ಆಸ್ಟ್ರೇಲಿಯಾ ಮುನ್ನಡೆಗೆ ಅವಕಾಶ ನೀಡಲಿಲ್ಲ.

Translate »