ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅಭಿಮತ
ಮೈಸೂರು, ಜು. 7 (ಆರ್‍ಕೆ)- ಕೋವಿಡ್-19 ಸೋಂಕು ದೃಢಪಟ್ಟವರಿಗೆ ಮನೆ ಯಲ್ಲೇ ಪ್ರತ್ಯೇಕವಾಗಿರಿಸಿ, ಶುಶ್ರೂಷೆ ನಡೆಸುವ ಸಂಬಂಧ ಸರ್ಕಾರ ಆದೇಶಿಸಲಾಗಿದ್ದರೂ, ಗ್ರಾಮಾಂತರ ಪ್ರದೇಶದಲ್ಲಿ ಅದು ಸಾಧ್ಯವಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ವೆಂಕಟೇಶ್ ತಿಳಿಸಿದ್ದಾರೆ. ಗ್ರಾಮಗಳಲ್ಲಿ ಒಂದು ಮನೆಯಲ್ಲಿ ಹೆಚ್ಚು ಮಂದಿ ಕುಟುಂಬ ಸದಸ್ಯರು ವಾಸವಾಗಿರುತ್ತಾರೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು, ವಯಸ್ಸಾದವರೂ ಇರುವ ಕಾರಣ, ಒಬ್ಬರು ಸೋಂಕಿತರಿದ್ದರೆ ಇತರರಿಗೂ ವೈರಸ್ ಹರಡುವ ಸಾಧ್ಯತೆ ಇರುತ್ತದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.
ಜೊತೆಗೆ ಗ್ರಾಮೀಣ ಭಾಗದ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯಗಳಿರುವುದಿಲ್ಲ. ಹೋಂ ಕ್ವಾರಂಟೈನ್ ಮಾರ್ಗಸೂಚಿಗಳನ್ನು ಅನುಸರಿಸಲು ಸೌಲಭ್ಯದ ಕೊರತೆಗಳಿರು ತ್ತವೆ. ಆದ್ದರಿಂದ ಕೊರೊನಾ ವೈರಸ್ ಸೋಂಕು ದೃಢಪಟ್ಟವರನ್ನು ಮೈಸೂರಿಗೆ ಕರೆತಂದು ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಸೌಮ್ಯ ಸ್ವರೂಪದ ಹಾಗೂ ಯಾವುದೇ ಇನ್ನಿತರ ರೋಗ ಲಕ್ಷಣಗಳಿಲ್ಲದ ನಗರ ಪ್ರದೇಶದ ಕೋವಿಡ್-19 ಸೋಂಕು ದೃಢಪಟ್ಟವರು ಮಾತ್ರ ತಮ್ಮ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ 17 ದಿನಗಳ ಕಾಲ ಇರಲು ಅವಕಾಶವಿದೆ ಎಂದ ಡಾ. ವೆಂಕಟೇಶ್, ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಗಳನ್ನು ಅವರು ಕಡ್ಡಾಯವಾಗಿ ಅನುಸರಿಸಬೇಕು ಎಂದರು. ಮೈಸೂರಲ್ಲಿ ಈಗಾಗಲೇ ನಾಲ್ವರು ಸೋಂಕಿತರ ಮನೆಯಲ್ಲೇ ಶುಶ್ರೂಷೆಗೆ ಅನುಮತಿ ನೀಡಲಾಗಿದೆ. ನಮ್ಮ ಸಿಬ್ಬಂದಿ ಆಗಿಂದಾಗ್ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದರು.