ವಿಜಯೇಂದ್ರರಿಗೆ ಹಾನಗಲ್ ಉಸ್ತುವಾರಿ
News

ವಿಜಯೇಂದ್ರರಿಗೆ ಹಾನಗಲ್ ಉಸ್ತುವಾರಿ

October 5, 2021

ಬೆಂಗಳೂರು, ಅ. 4(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಪರದೆ ಹಿಂದಕ್ಕೆ ತಳ್ಳಲು ಬಿಜೆಪಿ ಮುಂದಾಗಿದೆ. ರಾಜ್ಯದ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾ ವಣಾ ಉಸ್ತುವಾರಿ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದ ವರಿಷ್ಠರು ಜಾಗ ನೀಡಿರಲಿಲ್ಲ.

ಯಡಿಯೂರಪ್ಪ ಅವರು, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಪಟ್ಟಿಯಲ್ಲಿ ಸೇರ್ಪಡಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಅವರನ್ನು ಕೈಬಿಡಲಾಗಿತ್ತು. ಇದರಿಂದ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೋಪೋದ್ರಿಕ್ತಗೊಂಡಿದ್ದರು.

ವಿಜಯೇಂದ್ರ ತಮ್ಮ ಕೋಪವನ್ನು ಪರೋಕ್ಷವಾಗಿ ಟ್ವೀಟ್ ಮೂಲಕ, ಕಿಡಿಕಾರಿಕೊಂಡಿ ದ್ದಲ್ಲದೆ, ತಮ್ಮನ್ನು ಉಸ್ತುವಾರಿ ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ಅಭಿಮಾನಿಗಳು ಆತಂಕ ಗೊಳ್ಳುವುದು ಬೇಡ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ ಎಂದಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ನಡೆದ 18ಕ್ಕೂ ಹೆಚ್ಚು ವಿಧಾನಸಭೆಯ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಪಕ್ಷ ಪ್ರಾಮುಖ್ಯತೆ ನೀಡಿತ್ತು. ಕೆ.ಆರ್. ಪೇಟೆ, ಹಾಗೂ ಶಿರಾ ಸೇರಿದಂತೆ ಕೆಲವು ಕೇಂದ್ರಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಬಾವುಟ ಹಾರಿಸಿದೆ. ಅದರ ಕೀರ್ತಿ ವಿಜಯೇಂದ್ರರಿಗೆ ಸಲ್ಲುತ್ತದೆ ಎಂದು ಬಿಂಬಿಸಲಾಗಿತ್ತು. ಎರಡೂ ಕ್ಷೇತ್ರಗಳಲ್ಲಷ್ಟೇ ಅಲ್ಲ, ಬಹುತೇಕ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ವಿಜಯೇಂದ್ರ ರೂವಾರಿ, ಯಡಿಯೂರಪ್ಪ ನಂತರ ಬಿಜೆಪಿಗೆ ಇವರೇ ಸಾರಥಿ ಎಂಬ ಮಾತು ಕೇಳಿ ಬಂದಿತ್ತು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ ನಡೆಯುತ್ತಿರುವ ಎರಡು ವಿಧಾನಸಭಾ ಉಪಚುನಾವಣೆಯ ಉಸ್ತುವಾರಿ ಪಟ್ಟಿಯಲ್ಲಿ ಅವರನ್ನು ದೂರವಿಡಲಾಗಿತ್ತು. ನಂತರ ಒತ್ತಡಕ್ಕೆ ಮಣಿದು, ಪಟ್ಟಿ ಪರಿಷ್ಕರಿಸಿರುವ ಪಕ್ಷ ವಿಜಯೇಂದ್ರ ಅವರ ಹೆಸರನ್ನು ಕೊನೆಯಲ್ಲಿ ಸೇರಿಸಲಾಗಿದೆ.

ಕುಟುಂಬ ರಾಜಕೀಯದಿಂದಲೇ ಕರ್ನಾಟಕದಲ್ಲಿ ಬಿಜೆಪಿ ನೆಲೆ ಇದೆ ಎಂಬುದನ್ನು ದೂರಮಾಡುವುದು ಮತ್ತು ಬೊಮ್ಮಾಯಿ ನಾಯಕತ್ವದಲ್ಲಿ ಪಕ್ಷ ಗೆಲ್ಲಲಿದೆ ಎಂಬುದನ್ನು ತೋರ್ಪಡಿಸುವ ಉದ್ದೇಶದಿಂದ ವರಿಷ್ಠರು ಇಂತಹ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಅವರ ಜಾಗಕ್ಕೆ ಬರಲು ವಿಜಯೇಂದ್ರ ಕಸರತ್ತು ನಡೆಸುತ್ತಿದ್ದಾರೆ ಎಂದು ದೂರಿ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲ ಶಾಸಕರು ಹಿಂದೆ ವರಿಷ್ಠರ ಬಳಿ ದೂರು ಕೊಂಡೊಯ್ದಿದ್ದರು. ಅಂತಹ ದೂರುಗಳಿಗೆ ಉತ್ತರ ನೀಡುವ ಕಾರ್ಯ ಹೈಕಮಾಂಡ್ ವರಿಷ್ಠರಿಂದ ಶುರುವಾಗಿದ್ದು, ಬೊಮ್ಮಾಯಿ ಸಿಎಂ ಆದ ನಂತರ ಅವರ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ತಳ್ಳಿ ಹಾಕಿತ್ತು.

Translate »