ರಾಜ್ಯ ಸರ್ಕಾರದ ಆದೇಶದಂತೆ ಮೈಸೂರಲ್ಲಿ ಹುಕ್ಕಾ ಬಾರ್ ಬಂದ್
ಮೈಸೂರು

ರಾಜ್ಯ ಸರ್ಕಾರದ ಆದೇಶದಂತೆ ಮೈಸೂರಲ್ಲಿ ಹುಕ್ಕಾ ಬಾರ್ ಬಂದ್

December 10, 2020

ಮೈಸೂರು, ಡಿ. 9(ಆರ್‍ಕೆ)- ಸರ್ಕಾರದ ಆದೇಶದಂತೆ ಮೈಸೂರು ನಗರದ ಹುಕ್ಕಾ ಬಾರ್‍ಗಳನ್ನು ಬಂದ್ ಮಾಡಿಸಲಾಗುವುದು ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಾ.ಎ.ಎನ್.ಪ್ರಕಾಶ್‍ಗೌಡ ತಿಳಿಸಿದ್ದಾರೆ.

ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿರುವ ಹುಕ್ಕಾ ಬಾರ್ ಮತ್ತು ರಿಕ್ರಿಯೇಷನ್ ಕ್ಲಬ್‍ಗಳನ್ನು ಮುಚ್ಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಆ ಕುರಿತು ನಮಗೆ ಸರ್ಕಾರದಿಂದ ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಮೈಸೂರು ನಗರದಲ್ಲಿ 6 ಹುಕ್ಕಾ ಬಾರ್ ಗಳಿವೆ. ಯುವಕರ ಆರೋಗ್ಯದ ದೃಷ್ಟಿಯಿಂದ ಇಂತಹ ಕೇಂದ್ರಗಳನ್ನು ಮುಚ್ಚಿಸಲು ಸರ್ಕಾರ ಆದೇಶ ನೀಡಿದರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತವಾಗಿ ನಡೆಯುತ್ತಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ, ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಇಂತಹ ಕೇಂದ್ರಗಳಿಂದ ಕಾಲೇಜು ವಿದ್ಯಾರ್ಥಿಗಳು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಮಾದಕ ವಸ್ತು ಮಾರಾಟ, ಸಾಗಣೆ ಹಾಗೂ ಸೇವನೆಯನ್ನು ನಿಯಂತ್ರಿಸಲೆಂದೇ ಪ್ರತ್ಯೇಕ ಕಾಯ್ದೆ ಇದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಪೊಲೀಸ್ ಇಲಾಖೆ ಹಿಂದೆ ಸರಿಯುವುದಿಲ್ಲ ಎಂದು ಡಾ.ಪ್ರಕಾಶ್‍ಗೌಡ ತಿಳಿಸಿದರು.

ಮಂಗಳವಾರವಷ್ಟೇ ಗೃಹ ಸಚಿವರು ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿಯಿತು. ಆದರೆ ಹುಕ್ಕಾ ಬಾರ್ ಮತ್ತು ರಿಕ್ರಿಯೇಷನ್ ಕ್ಲಬ್‍ಗಳನ್ನು ಮುಚ್ಚಿಸುವ ಸಂಬಂಧ ಆದೇಶ ಬಂದಿಲ್ಲ. ಈ ಕುರಿತು ಸಮಾಲೋಚನೆ ಮಾಡಿ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದು ತಿಳಿಸಿದರು. ಅಲ್ಲಲ್ಲಿ ಮನರಂಜನಾ ಕ್ಲಬ್‍ಗಳು ಆರಂಭವಾಗಿ ಇಸ್ಪೀಟ್, ಜೂಜು ಮತ್ತಿತರ ದಂಧೆ ನಡೆಯುತ್ತಿವೆ ಎಂಬ ದೂರುಗಳು ಬಂದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಪ್ರಕಾಶ್‍ಗೌಡ ತಿಳಿಸಿದರು.

Translate »