ವೀಕೆಂಡ್ ಕಫ್ರ್ಯೂನಿಂದ ಹೋಟೆಲ್,  ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು
ಮೈಸೂರು

ವೀಕೆಂಡ್ ಕಫ್ರ್ಯೂನಿಂದ ಹೋಟೆಲ್, ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು

January 9, 2022

ಮೈಸೂರು, ಜ.8(ಆರ್‍ಕೆ)-ಮಹಾಮಾರಿ ಕೊರೊನಾ ಸೋಂಕಿ ನಿಂದಾಗಿ ಹಲವರು ಪ್ರಾಣವನ್ನೇ ಕಳೆದುಕೊಂಡು ಅವಲಂಬಿ ತರು ತಬ್ಬಲಿಗಳಾದರೆ, ಕೆಲವರ ಜೀವನವೇ ಸರ್ವನಾಶವಾಯಿತು.

ಸೋಂಕು ಹರಡದಂತೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‍ಡೌನ್, ನೈಟ್ ಕಫ್ರ್ಯೂ, ವಾರಾಂತ್ಯ ಕಫ್ರ್ಯೂ, ಜನತಾ ಕಫ್ರ್ಯೂಗಳಂತಹ ನಿರ್ಬಂಧಗಳನ್ನು ಹೇರಿದ್ದರಿಂದ ಕಳೆದ ಎರಡು ವರ್ಷಗಳಿಂದ ಜನರು ವ್ಯಾಪಾರ-ವಹಿವಾಟು, ಚಟುವಟಿಕೆಗಳಿಲ್ಲದೇ ಆರ್ಥಿಕವಾಗಿ ಹಿಂದೆ ಬಿದ್ದಿದ್ದರಲ್ಲದೆ, ಮಾನಸಿಕವಾಗಿಯೂ ಜರ್ಝರಿತರಾಗಿದ್ದಾರೆ.

ಮೊದಲು ಮತ್ತು ಎರಡನೇ ಅಲೆಯಿಂದ ತತ್ತರಿಸಿದ ಜನರಿಗೆ ಇದೀಗ ಮೂರನೇ ಅಲೆಯಲ್ಲಿ ರೂಪಾಂತರಿ ಒಮಿಕ್ರಾನ್ ವೈರಸ್ ಸಹ ತನ್ನ ಅಟ್ಟಹಾಸ ಪ್ರದರ್ಶಿಸಲಾರಂಭಿಸಿರುವುದರಿಂದ ರಾಜ್ಯ ಸರ್ಕಾರವು ರಾತ್ರಿ ಕಫ್ರ್ಯೂ ಮತ್ತು ವೀಕೆಂಡ್ ಕಫ್ರ್ಯೂನಂತಹ ನಿರ್ಬಂಧಗಳನ್ನು ಹೇರುವುದು ಜನ ಜೀವನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 2ನೇ ಕೊರೊನಾ ಅಲೆ ಮುಗಿದು ಈಗ ತಾನೇ ಅದರ ಕರಿನೆರಳಿನಿಂದ ಹೊರ ಬಂದು ನಿಧಾನವಾಗಿ ವಾಣಿಜ್ಯ ವಹಿವಾಟುಗಳು ಗರಿಗೆದರುತ್ತಿದ್ದು, ಒಂದಿಷ್ಟು ಆತ್ಮವಿಶ್ವಾಸ ಮೂಡುತ್ತಿರುವಾಗಲೇ ಒಮಿಕ್ರಾನ್ ರೂಪಾಂತರಿ ವೈರಸ್ ವಕ್ಕರಿಸಿರುವುದು ಜನರ ಜೀವನದ ಮೇಲೆ ಜಿಗುಪ್ಸೆ ಮೂಡುತ್ತಿದೆ.

ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದ ಆರೋಗ್ಯ ಸೇವೆ ಒದಗಿ ಸುವ ಆಸ್ಪತ್ರೆ, ಡಯಾಗ್ನೋಸ್ಟಿಕ್ ಸೆಂಟರ್, ಲ್ಯಾಬೊರೇಟರಿಗಳು, ಔಷಧಿ ಅಂಗಡಿ, ಔಷಧ ಪೂರೈಕೆ ಮಾಡುವ ಏಜೆಂಟರುಗಳು, ಔಷಧಿ ತಯಾರಿಕಾ ಕಂಪನಿಗಳು, ಸಗಟು ದಾಸ್ತಾನುದಾರರಿಗೆ ವರದಾನವಾಯಿತು. ಅಗತ್ಯ ಸೇವೆ ಒದಗಿಸುವವರಿಗೂ ಅನುಕೂಲವಾಗಿದ್ದನ್ನು ಹೊರತುಪಡಿಸಿದರೆ, ಸಮಾಜದ ಉಳಿದ ಎಲ್ಲಾ ವಲಯದವರಿಗೆ ಶಾಪವಾಗಿ ಪರಿಣಮಿಸಿದೆ.
ಅದರಲ್ಲೂ ರಾತ್ರಿ ಕಫ್ರ್ಯೂ ಮತ್ತು ವೀಕೆಂಡ್ ಕಫ್ರ್ಯೂ ಹೇರಿ ರುವುದು ಹೋಟೆಲ್, ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಂತಾಗಿದೆ. ಸಾಮಾನ್ಯವಾಗಿ ಶನಿವಾರ, ಭಾನುವಾರಗಳಂದು ರಜಾ ಇರುವ ಕಾರಣ ಪ್ರವಾಸಿಗರು ಮೈಸೂ ರಿನತ್ತ ಧಾವಿಸಿ ಒಂದೆರಡು ದಿನಗಳ ಕಾಲ ವಾಸ್ತವ್ಯ ಹೂಡುವುದ ರಿಂದ ಹೋಟೆಲ್, ಲಾಡ್ಜ್ ಮಾಲೀಕರಿಗೆ ಅನುಕೂಲವಾಗುತ್ತಿತ್ತು.

ದೇವಾಲಯ, ಪ್ರವಾಸಿ ತಾಣ, ವಸ್ತುಪ್ರದರ್ಶನ, ನಿಸರ್ಗ ತಾಣ ಗಳಿಗೆ ಸಾಮಾನ್ಯವಾಗಿ ಪ್ರವಾಸಿಗರು ಶನಿವಾರ, ಭಾನುವಾರ ಗಳಂದು ಭೇಟಿ ನೀಡುತ್ತಾರೆ. ಆದರೆ, ಹೆಚ್ಚು ಆದಾಯ ತರುವ ವಾರಾಂತ್ಯದ ದಿನಗಳಲ್ಲೇ ನಿರ್ಬಂಧ ವಿಧಿಸಿರುವುದು ಹೋಟೆಲ್, ಲಾಡ್ಜ್‍ಗಳಂತಹ ಆತಿಥ್ಯ ಕ್ಷೇತ್ರಕ್ಕೆ ತೀವ್ರ ನಷ್ಟ ಉಂಟಾಗುತ್ತಿದೆ.

ಅದೇ ರೀತಿ ಚಾಮುಂಡಿಬೆಟ್ಟ, ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ, ದಸರಾ ವಸ್ತುಪ್ರದರ್ಶನ, ಉತ್ತನಹಳ್ಳಿಯ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇ ಶ್ವರ ದೇವಸ್ಥಾನ, ಕೃಷ್ಣರಾಜ ಸಾಗರ (ಕೆಆರ್‍ಎಸ್) ಬೃಂದಾವನ, ಎಡಮುರಿ, ಬಲಮುರಿ, ರಂಗನತಿಟ್ಟು, ಪಕ್ಷಿಧಾಮ, ಶ್ರೀರಂಗ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನ, ಟಿಪ್ಪು ಸುಲ್ತಾನ್, ದರಿಯಾ ದೌಲತ್, ಶ್ರೀ ನಿಮಿಷಾಂಬ ಟೆಂಪಲ್, ಮೇಲುಕೋಟೆ, ತೊಣ್ಣೂರುಕೆರೆಯಂತಹ ಪ್ರವಾಸಿ ಕೇಂದ್ರಗಳ ಆದಾಯಕ್ಕೂ ವಾರಾಂತ್ಯ ಕಫ್ರ್ಯೂ ನಿರ್ಬಂಧವು ಮುಳುವಾಗಿದೆ ಎನ್ನಬಹುದು.

Translate »