ಮೈಸೂರು ಹೊರವಲಯದಲ್ಲಿ ಬೃಹತ್   ಕೈಗಾರಿಕಾ ಪ್ರದೇಶ ಅಭಿವೃದ್ಧಿ
News

ಮೈಸೂರು ಹೊರವಲಯದಲ್ಲಿ ಬೃಹತ್ ಕೈಗಾರಿಕಾ ಪ್ರದೇಶ ಅಭಿವೃದ್ಧಿ

February 22, 2022

ಬೆಂಗಳೂರು, ಫೆ.21(ಕೆಎಂಶಿ)-ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮೈಸೂರು ಹೊರವಲಯದಲ್ಲಿ ಬೃಹತ್ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ರಾಜಧಾನಿ ಬೆಂಗಳೂರಿಗೆ ಸಮೀಪ ಇರುವ ಈ ನಗರದಲ್ಲಿ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಯಾಗಲಿದ್ದು, ಇದಕ್ಕೆ ಅಗತ್ಯ ಭೂಸ್ವಾಧೀನ ಕಾರ್ಯಕೈಗೊಳ್ಳುವಂತೆ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 2022ರ ನವೆಂಬರ್‍ನಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ಕೈಗಾರಿಕಾ ವಸಾಹತು ನಿರ್ಮಾಣವಾಗ ಲಿದೆ. ಮೈಸೂರು ನಗರದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ದೊಡ್ಡ-ದೊಡ್ಡ ಉದ್ದಿಮೆದಾರರು ಮುಂದೆಬಂದಿದ್ದಾರೆ, ಆದರೆ ಅವರಿಗೆ ಭೂಮಿ ಮತ್ತು ಮೂಲಸೌಕರ್ಯದ ಅವಶ್ಯಕತೆ ಇದೆ. ಸಾವಿರಾರು ಕೋಟಿ ರೂ. ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವವರಿಗೆ ಉತ್ತೇಜನ ನೀಡಿ ಮೈಸೂರು ವಿಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಿಸಲು ಸ್ಥಳ ಪರಿಶೀಲನೆಗೆ ಸಚಿವರೇ ಎರಡು ದಿನಗಳ ಕಾಲ ಮೈಸೂರಿನಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಇಲ್ಲಿನ ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ನೂರಾರು ಎಕರೆ ಭೂಮಿ ಕಾನೂನು ಕಟ್ಟಳೆಯಿಂದ ನೆನೆಗುದಿಗೆ ಬಿದ್ದಿದೆ.

ಕಳೆದ ಮೂರ್ನಾಲ್ಕು ದಶಕಗಳ ಹಿಂದೆಯೇ ಭೂಸ್ವಾಧೀನ ಮಾಡಿಕೊಂಡು ನಂತರ ಹಂಚಿಕೆ ಸಂದರ್ಭದಲ್ಲಿ ಕಾನೂನು ತಕರಾರಿಂದ ಯಾವುದೇ ಕೈಗಾರಿಕೆಗಳು ತಲೆ ಎತ್ತಲು ಸಾಧ್ಯವಾಗಿಲ್ಲ. ಕೋಟ್ಯಾಂತರ ರೂ. ಬೆಲೆ ಬಾಳುವ ಈ ಜಾಗಗಳ ತಕರಾರನ್ನು ಬಗೆಹರಿಸಿ ಉದ್ಯಮಗಳ ಸ್ಥಾಪನೆಗೆ ಅನುವು ಮಾಡುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಬೆಂಗಳೂರು-ಮೈಸೂರು ನಡುವೆ ವಿಶ್ವ ದರ್ಜೆ ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಈ ನಗರಗಳ ನಡುವಿನ ಸಂಚಾರ ಸಮಯ 90 ನಿಮಿಷಕ್ಕೆ ಇಳಿಕೆಯಾಗಲಿದೆ. ಅಲ್ಲದೆ, ಈ ರಸ್ತೆ ಚೆನ್ನೈ ಕೈಗಾರಿಕಾ ಕಾರಿಡಾರ್ ರಸ್ತೆಗೂ ಸಂಪರ್ಕ ಕಲ್ಪಿಸುತ್ತದೆ. ಸಾಂಸ್ಕøತಿಕ ನಗರಿ ಮೈಸೂರಿಗೆ ಉತ್ತಮ ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕ ಇರುವುದರಿಂದ ಬೃಹತ್ ಉದ್ದಿಮೆದಾರರು ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಸಕ್ತಿ ತೋರಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದರಿಂದ ಬೆಂಗಳೂರು ನಂತರ ಮೈಸೂರಿನಲ್ಲಿ ಎರಡನೇ ಬೃಹತ್ ಕೈಗಾರಿಕಾ ವಲಯ ಸ್ಥಾಪಿಸಲು ಸಚಿವರು ಮುಂದಾಗಿದ್ದಾರೆ.

Translate »