ಆಶ್ರಯ ಮನೆ ಜಾಗದಲ್ಲಿ ಗುಡಿಸಲು: ಮುಡಾದಿಂದ ತೆರವು ಕಾರ್ಯಾಚರಣೆ
ಮೈಸೂರು

ಆಶ್ರಯ ಮನೆ ಜಾಗದಲ್ಲಿ ಗುಡಿಸಲು: ಮುಡಾದಿಂದ ತೆರವು ಕಾರ್ಯಾಚರಣೆ

September 2, 2020

ಮೈಸೂರು, ಸೆ.1(ಎಂಕೆ)- ಮೈಸೂರು ತಾಲೂಕಿನ ಲಲಿತಾದ್ರಿಪುರ ಗ್ರಾಮದ ವ್ಯಾಪ್ತಿಯಲ್ಲಿ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಸ್ವಾಧೀನಪಡಿಸಿಕೊಂಡು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 15ಕ್ಕೂ ಹೆಚ್ಚು ಸಣ್ಣ ಗುಡಿಸಲು ಮತ್ತು ಶೆಡ್‍ಗಳನ್ನು ಮಂಗಳವಾರ ತೆರವುಗೊಳಿಸಲಾಯಿತು.

ಲಲಿತಾದ್ರಿಪುರ ಗ್ರಾಮದ ಸರ್ವೆ ನಂ 16/1, 16/2, 16/3, 17, 18/2, 18/3 ಮತ್ತು 18/4 ರಲ್ಲಿ ಒಟ್ಟು 15.19 ಎಕರೆ ಭೂಮಿಯನ್ನು ಭೂ ಸ್ವಾಧೀನಪಡಿಸಿಕೊಂಡು ನಗರ ಆಶ್ರಯ ಮನೆಗಳನ್ನು ನಿರ್ಮಿಸಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಆ ಜಾಗದಲ್ಲಿ ಕೆಲವರು ಅಕ್ರಮವಾಗಿ 15ಕ್ಕೂ ಹೆಚ್ಚು ಗುಡಿಸಲು ಮತ್ತು ಶೆಡ್ಡುಗಳನ್ನು ಹಾಕಿಕೊಂಡಿದ್ದರು.

ಆ ಗುಡಿಸಲು, ಶೆಡ್‍ಗಳನ್ನು ತೆರವುಗೊಳಿಸಿಕೊಡುವಂತೆ ರಾಜೀವ್ ಗಾಂಧಿ ವಸತಿ ನಿಗಮವು ಮನವಿ ಮಾಡಿದ್ದರಿಂದ ಮೈಸೂರು ಗ್ರಾಮಾಂತರ ಠಾಣೆಯ ಪೊಲೀಸರ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮುಡಾ ಅಧೀಕ್ಷಕ ಇಂಜಿನಿಯರ್ ಶಂಕರ್, ಕಾರ್ಯಪಾಲಕ ಇಂಜಿನಿಯರ್‍ಗಳು, ವಲಯ ಅಧಿಕಾರಿ, ಸಿಬ್ಬಂದಿ ವರ್ಗದವರು ತೆರವು ಕಾರ್ಯಾಚರಣೆಯಲ್ಲಿದ್ದರು.

Translate »