ಸರ್ವೆ ನಂ.4 ಸಮಸ್ಯೆ ಬಗೆಹರಿಸಿದ್ದು ನಾನೇ :ಈ ವಿಚಾರದಲ್ಲಿ ಶಾಸಕ ಎಸ್.ಎ.ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪ
ಮೈಸೂರು

ಸರ್ವೆ ನಂ.4 ಸಮಸ್ಯೆ ಬಗೆಹರಿಸಿದ್ದು ನಾನೇ :ಈ ವಿಚಾರದಲ್ಲಿ ಶಾಸಕ ಎಸ್.ಎ.ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪ

August 19, 2018

ಮೈಸೂರು: ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಕುರುಬಾರಹಳ್ಳಿ ಸರ್ವೆ ನಂ.4ರ ವ್ಯಾಪ್ತಿಯ ಸಿದ್ದಾರ್ಥನಗರ, ಜೆ.ಸಿ.ನಗರ, ಕೆ.ಸಿ.ಲೇಔಟ್‍ನ ಸಮಸ್ಯೆಯನ್ನು ಬಗೆಹರಿಸಿದ್ದು ತಾವೇ. ಆದರೆ, ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರು ಸಮಸ್ಯೆಯನ್ನು ಬಗೆಹರಿಸಿದ್ದು ತಾವು ಎಂದು ಸುಳ್ಳು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದಿಲ್ಲಿ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಖರಾಬು ಎಂದು ಘೋಷಣೆಯಾಗಿದ್ದರಿಂದ ಈ ಬಡಾವಣೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಅವರ ಮನೆ ಮತ್ತು ನಿವೇಶನಗಳು ಅಸ್ತಿತ್ವ ಇಲ್ಲದಂತಾಗಿತ್ತು. ನಗರಪಾಲಿಕೆಯಿಂದ ನಿವೇಶನದಲ್ಲಿ ಅನುಮತಿ ಪಡೆದು ಮನೆಗಳನ್ನು ಕಟ್ಟಲಾಗದ ಪರಿಸ್ಥಿತಿ ಎದುರಾಗಿತ್ತು. ಬಡಾವಣೆಯ ನಿವಾಸಿಗಳು ತಮ್ಮ ಸ್ವಂತ ಉಪಯೋಗಗಳಾದ ಮದುವೆ, ವಿದ್ಯಾಭ್ಯಾಸ, ವ್ಯಾಪಾರ ಮತ್ತು ಅನಾರೋಗ್ಯ ಪರಿಸ್ಥಿತಿಗೂ ಮನೆಯ ಮೇಲೆ ಸಾಲ ತೆಗೆದುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಅರಿತ ತಾವು ಶಾಸಕರಾಗಿ, ಒಂದೂವರೆ ವರ್ಷಗಳಿಂದ ಮುಡಾ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಕಡತವನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ದು 3 ಬಾರಿ ಜಿಲ್ಲಾಧಿಕಾರಿಗಳಿಂದ ರೆವಿನ್ಯೂ ಇಲಾಖೆ ಹಾಗೂ ಕಾನೂನು ಇಲಾಖೆ ಹೀಗೆ ಹಲವು ಬಾರಿ ಕಡತ ಸರ್ಕಾರಕ್ಕೆ, ನಂತರ ಮುಖ್ಯಮಂತ್ರಿಗಳ ಮುಂದೆ 2 ಬಾರಿ ಸಭೆ ನಡೆಸಿ, ಚರ್ಚಿಸಿ, ಹೈಕೋರ್ಟ್ ಅಡ್ವೊಕೇಟ್ ಜನರಲ್ ಅವರಿಂದ ಸಲಹೆ ಪಡೆದು ನಂತರ ಈ ಕಡತವನ್ನು ಮಂತ್ರಿಮಂಡಲದ ಸಭೆಗೆ ಮಂಡಿಸುವಂತೆ ಮಾಡಿ, ಬಿ.ಖರಾಬಿನಿಂದ ಕೈಬಿಡಲು ಆದೇಶ ಮಾಡಿಸುವ ಮೂಲಕ ಬಡಾವಣೆಯ ನಿವಾಸಿಗಳ ಆತಂಕ ದೂರ ಮಾಡಿದ್ದೇನೆ. ಇದರಿಂದ ಈ ಭಾಗದ 26 ಸಾವಿರ ಜನರಿಗೂ ಅನುಕೂಲವಾಗಿದ್ದು, ಬಡಾವಣೆಯ ನಿವೇಶನಗಳು ಮತ್ತು ಮನೆಗಳು ಪುನಃ ಅಸ್ತಿತ್ವ ಪಡೆದಿವೆ. ಇದು ನನ್ನ ಪ್ರಯತ್ನದ ಫಲ ಎಂದು ಹೇಳಿದರು.

ಈ ಬಗ್ಗೆ ಎಲ್ಲಾ ತೀರ್ಮಾನವಾದ ನಂತರವೇ ಇದಕ್ಕೆ ಸರ್ಕಾರದ ಮಂತ್ರಿಮಂಡಲದ ಅನುಮೋದನೆ ದೊರೆತಿದ್ದು, ಇದರ ಆದೇಶ ಪ್ರತಿ ನ್ಯಾಯಾಲಯಕ್ಕೆ ಸಲ್ಲಿಸುವುದಷ್ಟೇ ಬಾಕಿ ಇದೆ. ಜೊತೆಗೆ ಸದ್ಯದಲ್ಲೇ ಸರ್ಕಾರಿ ಆದೇಶವೂ ಹೊರ ಬೀಳಲಿದೆ. ಆದರೆ ಇಷ್ಟೆಲ್ಲವನ್ನೂ ನಾನು ಮಾಡಿದ್ದರೂ ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರು, ತಾವು ಮಾಡಿಸಿದ್ದು ಎಂದು ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದರು.

ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮಾತನಾಡಿ, ಸರ್ವೆ 4ರ ಕುರುಬಾರಹಳ್ಳಿ ವ್ಯಾಪ್ತಿಯ ಸಿದ್ದಾರ್ಥನಗರ, ಕೆ.ಸಿ.ಲೇಔಟ್, ಜೆ.ಸಿ.ನಗರ ಜನರ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ ಶಾಸಕ ಎಂ.ಕೆ.ಸೋಮಶೇಖರ್ ಈ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ರಾಮದಾಸ್ ಅವರ ಕೊಡುಗೆ ಏನು? ಇದಕ್ಕೆ ಯಾರು ಕಾರಣರು, ಮುಕ್ತಿ ದೊರಕಿಸಿದ್ದು ಯಾರು? ಎಂಬ ಬಹಿರಂಗ ಚರ್ಚೆ ಆಗಲಿ ಎಂದು ಸವಾಲು ಹಾಕಿದರು.
ಶಾಸಕ ರಾಮದಾಸ್ ಅವರ ಜನಪರ ಕೆಲಸಗಳಿಗೆ ತಮ್ಮ ಅಭ್ಯಂತರವಿಲ್ಲ. ಆದರೆ ಎಂ.ಕೆ.ಸೋಮಶೇಖರ್ ಮಾಡಿದ ಕೆಲಸಗಳನ್ನೇ ತಾವು ಮಾಡಿದ್ದು ಎಂದು ಹೇಳುವುದು ಅವರ ಘನತೆಗೆ ತಕ್ಕುದಲ್ಲ. ಇನ್ನಾದರೂ ಅವರು ಇಂತಹ ಪ್ರಯತ್ನ ಬಿಡಲಿ. ಬಡಾವಣೆಯ ಜನತೆಯ ಮುಂದೆ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಿ ಎಂದು ಸಲಹೆ ನೀಡಿದರು.

Translate »