ಸಂವಿಧಾನ ಸುಟ್ಟವರ  ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಸಂವಿಧಾನ ಸುಟ್ಟವರ  ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

August 19, 2018

ಮೈಸೂರು: ನವದೆಹಲಿಯ ಜಂತರ್-ಮಂತರ್ ಮೈದಾನದಲ್ಲಿ ಭಾರತದ ಸಂವಿಧಾನದ ಪ್ರತಿಗಳನ್ನು ಸುಟ್ಟ ದುಷ್ಕರ್ಮಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಪುರಭವನದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜಂತರ್ ಮಂತರ್ ಮೈದಾನದಲ್ಲಿ ದೇಶದ ಸಂವಿಧಾನದ ಪ್ರತಿಗಳನ್ನು ಸುಟ್ಟು ಕಿಡಿಗೇಡಿಗಳು ಸಂವಿಧಾನ ಬಗ್ಗೆ ತಮ್ಮ ಅಗೌರವ ತೊರಿದ್ದಾರೆ. ಇದು ದೇಶದ್ರೋಹದ ಕೃತ್ಯವಾಗಿದ್ದು, ಇವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸೇನೆ ರಾಜ್ಯಾಧ್ಯಕ್ಷ ಮೂರ್ತಿ, ದೇಶದ ಸಂವಿಧಾನದ ಪ್ರತಿ ಗಳನ್ನು ಸುಟ್ಟು ಹಾಕಿ ಭಾರತ ದೇಶದ ಅಖಂಡತೆ ಹಾಗೂ ಸಾರ್ವಬೌಮಕ್ಕೆ ಧಕ್ಕೆ ತರುವಂತಹ ಕೃತ್ಯವನ್ನು ದುಷ್ಕರ್ಮಿಗಳು ಎಸಗಿದ್ದಾರೆ. ಸಂವಿಧಾನ ಹಾಗೂ ಡಾ.ಅಂಬೇಡ್ಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ರಾಷ್ಟ್ರನಾಯಕ ಹಾಗೂ ಆಧುನಿಕ ಭಾರತದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಇದನ್ನು ಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದು ಕಿಡಿಕಾರಿದರು. ಸೇನೆಯ ನಾಗೇಂದ್ರ ಬಸವಟ್ಟಿಗೆ, ಕಾಂತರಾಜು, ಮಹೇಶ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »