ಮೈಸೂರು: ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಹಂದನಹಳ್ಳಿ ಗ್ರಾಮದಲ್ಲಿ ಮೇಲ್ಜಾತಿಯವರು ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮದ ಪರಿಶಿಷ್ಟ ವರ್ಗದ ನಾಯಕ ಸಮುದಾಯದ ಕುಟುಂಬವೊಂದು ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ಆಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೊಂದ ಕುಟುಂಬ ದವರು, ಗ್ರಾಮ ಮುಖಂಡರೊಬ್ಬರ ಹಣಬಲ ಹಾಗೂ ರಾಜಕೀಯ ಬಲದಿಂದ ನಾಯಕ ಸಮುದಾಯದ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಇದರ ಪರಿಣಾಮ ಕಳೆದ ಮೂರು ತಿಂಗಳಿಂದ ಯಾತನೆ ಅನುಭವಿಸುವಂತೆ ಆಗಿದೆ ಎಂದು ನೋಂದ ಕುಟುಂಬದ ಸದಸ್ಯರಾದ ಶಿವಣ್ಣನಾಯಕ, ಬಸವನಾಯಕ, ರಾಜನಾಯಕ ಹಾಗೂ ಕೃಷ್ಣನಾಯಕ ಆಪಾದಿಸಿದರು.
ನಮ್ಮ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ನೀಡದಂತೆ ಗ್ರಾಮದ ಅಂಗಡಿ-ಮುಂಗಟ್ಟು ಗಳಿಗೆ ಸೂಚನೆ ನೀಡಲಾಗಿದೆ. ನಮಗೆ ನೆರವಾದವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ನಮಗೆ ಸೇರಿದ ಗ್ರಾಮದ ಸರ್ವೇ ನಂ.127ರಲ್ಲಿರುವ 2 ಎಕರೆ 12 ಗುಂಟೆ ಜಮೀನನ್ನು ಗ್ರಾಮಕ್ಕೆ ಬರೆದುಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ. ಈ ರೀತಿ ದೌರ್ಜನ್ಯ ನಡೆಸುತ್ತಿರುವ ಗ್ರಾಮದ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಪಡುವರಹಳ್ಳಿ ಎಂ.ರಾಮಕೃಷ್ಣ, ರಾಜು ಮಾರ್ಕೇಟ್, ವಿನೋದ್ ನಾಗವಾಲ, ಪ್ರಕಾಶ ಸೋಮೇಶ್ವರಪುರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.