ಮೈಸೂರು, ಆ.17 (ವೈಡಿಎಸ್)- `ಕೊರೊನಾ ಭಯ ಪಡುವ ಖಾಯಿಲೆಯೇ ಅಲ್ಲ. ಧೈರ್ಯದಿಂದ ಇರಬೇಕು. ನಾನು ಗುಣಮುಖಳಾಗಿ ಮನೆಗೆ ಹೋದಾಗ ನೆರೆಯ ನಿವಾಸಿಗಳು ಇನ್ನೂ ಸೋಂಕಿತರಂತೆಯೇ ನೋಡು ತ್ತಿದ್ದುದು ಬೇಸರ ತರಿಸಿತು’… ಕೊರೊನಾದಿಂದ ಗುಣಮುಖರಾದ ಬೋಗಾದಿ ಮಹಿಳೆ ಯೊಬ್ಬರ(ರೋಗಿ ಸಂಖ್ಯೆ 2087) ಬೇಸರದ ನುಡಿ ಇದು.
`ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ವಿಷಯ ತಿಳಿದ ದಿನವೇ ಅಕ್ಕ-ಪಕ್ಕದ ನಿವಾಸಿಗಳು ಮನೆಗೆ ಬೀಗ ಹಾಕಿಕೊಂಡು ಹೋದವರು ಇನ್ನೂ ಮನೆಗೆ ವಾಪಸ್ ಬಂದಿಲ್ಲ. ಸುತ್ತಲಿನ ಜನ ಇಂದಿಗೂ ನಮ್ಮನ್ನು ಸೋಂಕಿತರಂತೆಯೇ ನೋಡುತ್ತಿದ್ದಾರೆ’.
ಕೊರೊನಾ ಬಂದಾಗಿನಿಂದ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದರೂ ಅದು ಹೇಗೆ ಸೋಂಕು ಬಂತು ಎಂದು ತಿಳಿಯುತ್ತಿಲ್ಲ. ಜು.9ರಂದು ಜ್ವರ ಬಂತು. ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಮಾಡಿಸಿಕೊಂಡೆ. ಜ್ವರ ಕಡಿಮೆಯಾಯಿತು. 3 ದಿನದ ನಂತರ ಕೊರೊನಾ ಭಯ ಕಾಡಿದ್ದರಿಂದ ಜು.12 ರಂದು ಆಸ್ಪತ್ರೆಗೆ ತೆರಳಿ ಗಂಟಲುದ್ರವದ ಪರೀಕ್ಷೆ ಮಾಡಿಸಿದೆ. ಮರುದಿನವೇ ವೈದ್ಯರು ಕರೆ ಮಾಡಿ `ಪಾಸಿಟಿವ್ ಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿ’ ಎಂದು ತಿಳಿಸಿದರು.
`ಇಲ್ಲ ಸಾರ್ ನಾನೀಗ ಆರೋಗ್ಯವಾಗಿದ್ದೇನೆ’ ಎಂದು ಹೇಳಿದರೂ ಕೇಳಲಿಲ್ಲ. ಆಂಬುಲೆನ್ಸ್‍ನಲ್ಲಿ ಮನೆಗೆ ಬಂದು ಕೆಆರ್‍ಎಸ್ ರಸ್ತೆಯಲ್ಲಿರುವ ಇಎಸ್‍ಐ ಆಸ್ಪತ್ರೆಗೆ ಕರೆದು ಕೊಂಡು ಹೋದರು. ಆಸ್ಪತ್ರೆಯಲ್ಲಿ ವೈದ್ಯರು ಬೆಳಗ್ಗೆ, ಸಂಜೆ ಆರೋಗ್ಯ ವಿಚಾರಿಸುತ್ತಿದ್ದರು. ಊಟದ ವ್ಯವಸ್ಥೆಯೂ ಚೆನ್ನಾಗಿತ್ತು. ಐದು ದಿನ ಚಿಕಿತ್ಸೆ ಪಡೆದು ಜು.16ರಂದು ಡಿಸ್ಚಾರ್ಜ್ ಆದಾಗ ಆಂಬುಲೆನ್ಸ್‍ನಲ್ಲಿ ಮನೆಗೆ ಕರೆದುಕೊಂಡು ಬಂದುಬಿಟ್ಟರು. ವೈದ್ಯರ ಸಲಹೆಯಂತೆ 14 ದಿನ ಹೋಂ ಕ್ವಾರಂಟೈನ್‍ನಲ್ಲಿದ್ದೆ. ಜು.30ಕ್ಕೆ ಅದು ಮುಕ್ತಾಯವಾಯಿತು.
ತವರಿನಿಂದ ದಿನಸಿ: ನನಗೆ ಪಾಸಿಟಿವ್ ಬಂದು ಆಸ್ಪತ್ರೆಗೆ ಹೋದಾಗ ಮನೆಯನ್ನು ಸೀಲ್‍ಡೌನ್ ಮಾಡಿ ಕುಟುಂಬದ ಇತರರನ್ನು ಕ್ವಾರಂಟೈನ್‍ನಲ್ಲಿರಿಸಿದ್ದರು. ಈ ವೇಳೆ ಜನತಾ ನಗರದಲ್ಲಿರುವ ತವರು ಮನೆಯವರು ದಿನಸಿ ಪದಾರ್ಥ, ಹಾಲು, ತರಕಾರಿಗಳನ್ನು ತಂದು ಕೊಡುತ್ತಿದ್ದರು ಎಂದು ಸಕಾಲಿಕ ಸಹಾಯವನ್ನು ಸ್ಮರಿಸಿದರು.