ಇದು ಆಕಾಶವಾಣಿ ಬೆಂಗಳೂರು ನಿಲಯ
ಸಿನಿಮಾ

ಇದು ಆಕಾಶವಾಣಿ ಬೆಂಗಳೂರು ನಿಲಯ

July 10, 2020

ಇತ್ತೀಚೆಗೆ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ಆಕರ್ಷಕವಾಗಿರುತ್ತವೆ. ಅಂಥದೇ ಮತ್ತೊಂದು ಚಿತ್ರ ಸೆಟ್ಟೇರಲು ರೆಡಿಯಾಗಿದೆ. ಅದರ ಹೆಸರು ಇದು ಆಕಾಶವಾಣಿ ಬೆಂಗಳೂರು ನಿಲಯ. ಕಮಲಾನಂದ ಚಿತ್ರಾಲಯ ಸಂಸ್ಥೆಯಡಿ ಶಿವಾನಂದಪ್ಪ ಬಳ್ಳಾರಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು. ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ನಂತರ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ಶಿವಾನಂದಪ್ಪ ಅವರು ತಿಳಿಸಿದ್ದಾರೆ. ಈ ಹಿಂದೆ ನಾವೇ ಭಾಗ್ಯವಂತರು ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಹರಿಕೃಷ್ಣ ಅವರ ನಿರ್ದೇಶನದ ಎರಡನೇ ಚಿತ್ರವಿದು.

ವಿಭಿನ್ನವಾದ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸುಮ್ ಸುಮ್ನೆ ವಿಜಯಕುಮಾರ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು ಎ.ಟ. ರವೀಶ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಆಂಟೋನಿ ಎಂ. ಅವರ ಸಾಹಿತ್ಯ, ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್‍ಗೌಡ ಅವರ ಸಂಕಲನ, ಕಂಬಿರಾಜು ನೃತ್ಯನಿರ್ದೇಶನ, ಆರ್.ಪ್ರಭಾಕರ್ ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಅಲ್ಲದೆ ವಿನೋದ್ ಪಾಟೀಲ್, ನಿಖಿತ ಸ್ವಾಮಿ, ಎಸ್. ನಾರಾಯಣಸ್ವಾಮಿ, ದಿವ್ಯಶ್ರೀ(ಕಾಮಿಡಿ ಕಿಲಾಡಿಗಳು), ವಿಲಾಸ್‍ಗೌಡ ಮುಂತಾದವರ ತಾರಾಬಳಗವಿರುವ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ನೊಣವಿನಕೆರೆ ಸುತ್ತಮುತ್ತ ನಡೆಸುವ ಯೋಜನೆಯಿದೆ