ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ
News

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ

January 12, 2023

ಬೆಂಗಳೂರು, ಜ.11(ಕೆಎಂಶಿ) – ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಗೂಡಿ ಪ್ರಜಾಧ್ವನಿ (ಬಸ್) ಯಾತ್ರೆ ಪ್ರಾರಂಭಿಸಿ ಮಾತನಾ ಡಿದ ಶಿವಕುಮಾರ್, ಮೊದಲ ಚುನಾವಣಾ ಭಾಷಣದಲ್ಲೇ ಮತದಾರರ ಓಲೈಕೆಗೆ ದೊಡ್ಡ ಭರವಸೆಯನ್ನೇ ಇತ್ತಿದ್ದಾರೆ.

ದೆಹಲಿ ಹಾಗೂ ಪಂಜಾಬ್ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಚುನಾವಣಾ ಪೂರ್ವ ಮತದಾರರಿಗೆ ನೀಡಿದ ಭರವಸೆಯಂತೆ ಕಾಂಗ್ರೆಸ್ ನಾಲ್ಕು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರಲು ಮುಂದಾಗಿದೆ. ಅದರ ಮೊದಲ ಭಾಗ ವಾಗಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವು ದಾಗಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಚಿಕ್ಕೋಡಿಯಲ್ಲಿ ಇಂದು ನಡೆದ ಸಮಾವೇಶದಲ್ಲಿ ಮಾತನಾಡಿದ ಶಿವಕುಮಾರ್, ಬೆಲೆ ಏರಿಕೆಯಿಂದ ತತ್ತರಿ ಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಪಕ್ಷ ಈ ನಿರ್ಧಾರಕ್ಕೆ ಬಂದಿದೆ ಎಂದರು. ‘ಇದೊಂದು ಐತಿಹಾಸಿಕ ದಿನ.

ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶ. ನಿಮ್ಮ ಮನೆಯಲ್ಲಿ ಕತ್ತಲು ಕಳೆದು ಬೆಳಕು ನೀಡಲು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಈ ಯಾತ್ರೆಯಲ್ಲಿ ಐದು ಭರವಸೆ ನೀಡುತ್ತಿದ್ದೇವೆ. ಅದರ ಪೈಕಿ ಮೊದಲ ಖಚಿತ ಭರವಸೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದು. ಮಹಿಳೆಯರು, ಯುವಕರು, ರೈತರು 200 ಯೂನಿಟ್ ವರೆಗೂ ವಿದ್ಯುತ್ ದರ ಕಟ್ಟುವಂತಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ನಡೆಯುತ್ತೇವೆ. ನಾಡಿನ ಜನರ ಭವಿಷ್ಯಕ್ಕಾಗಿ ನಾವು ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ.

ಅಡುಗೆ ಅನಿಲದ ಬೆಲೆ 400 ರಿಂದ 1100 ರೂ. ಆಗಿದೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಮೋದಿ ಸರ್ಕಾರ ವಚನ ನೀಡಿತ್ತು. ಯಾವುದಾದರೂ ರೈತನ ಆದಾಯ ಡಬಲ್ ಆಗಿದೆಯಾ, ಕಳೆದ ಚುನಾವಣೆ ಸಮಯದಲ್ಲಿ ನಿಮ್ಮ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದರು. ಸಾಲ ಮನ್ನಾ ಆಗಿದೆಯಾ? 10 ಹೆಚ್‍ಪಿ 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದರು. ನೀಡಿದರಾ, ಬಂಗಾರಪ್ಪ ಅವರ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಉಚಿತ ವಿದ್ಯುತ್ ನೀಡಲು ಆರಂಭಿಸಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾನು ಇಂಧನ ಸಚಿವನಾಗಿದ್ದಾಗ ರೈತರಿಗೆ ವಿದ್ಯುತ್ ನೀಡುವ ಸಮಯವನ್ನು 6 ರಿಂದ 7 ಗಂಟೆಗೆ ಹೆಚ್ಚಿಸಿದೆವು.

ಈ ಸರ್ಕಾರದಲ್ಲಿ ಕೊಟ್ಟ ಮಾತು ಈಡೇರಿಸಿದರಾ, ನಿಮ್ಮ ಬದುಕಿನಲ್ಲಿ ಬೆಳಕು ಕೊಟ್ಟರಾ. ಹೀಗಾಗಿ ನಾವು ಬಿಜೆಪಿ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ. ಬಿಜೆಪಿಯ ಲಂಚಾವತಾರ, ಮಂಚಾವತಾರ ಬಿಡುಗಡೆ ಮಾಡಿದ್ದೇವೆ. ಈ ಸರ್ಕಾರ ಬಿ ರಿಪೋರ್ಟ್ ಸರ್ಕಾರ. ಮಂತ್ರಿಗಳು ಯಾವುದೇ ಪ್ರಕರಣದಲ್ಲಿ ಸಿಕ್ಕಿಬಿದ್ದರೂ ಅವರಿಗೆ ಬಿ ರಿಪೋರ್ಟ್ ಕೊಟ್ಟು, ಅವರು ಯಾವುದೇ ತಪ್ಪು ಕೆಲಸ ಮಾಡಿಲ್ಲ, ನಿರ್ದೋಷಿಯಾಗುತ್ತಾರೆ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಸಂದೇಶ ನೀಡುತ್ತಾರೆ. ಈ ಸರ್ಕಾರ ಬೇಕಾ ಎಂದು ನೀವು ಆಲೋಚಿಸಿ. ಈ 40% ಕಮಿಷನ್ ಸರ್ಕಾರ ಈ ರಾಜ್ಯದಲ್ಲಿ ಕೋಮು ದ್ವೇಷದ ವಿಷ ಬೀಜವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ಈ ಸರ್ಕಾರ ಹೊಟೇಲಿನಲ್ಲಿ ಮೆನು ಕಾರ್ಡ್ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್ ಕಾರ್ಡ್ ಹಾಕಿದ್ದಾರೆ. ಇದನ್ನು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ, ಆಯುಕ್ತರಿಗೆ 15 ಕೋಟಿ, ಕೋವಿಡ್ ಪೂರೈಕೆಗೆ ಶೇ.75, ಪಿಡಬ್ಲ್ಯೂಡಿ ಕಾಮಗಾರಿಗೆ 40%, ಮಠಗಳ ಅನುದಾನಕ್ಕೆ 40%, ಮೊಟ್ಟೆ ಪೂರೈಕೆಗೆ 30% ಕಮಿಷನ್ ನಿಗದಿ ಮಾಡಿದ್ದಾರೆ. ಈ ಬಗ್ಗೆ ಎರಡು ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಫೆಬ್ರವರಿ 17ರಂದು ಬಜೆಟ್ ಮಂಡಿಸಿ ಆಗ ಇನ್ನಷ್ಟು ಆಶ್ವಾಸನೆ ನೀಡಲು ಹೊರಟಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರಿಗೆ ಕೊಡುಗೆ ನೀಡಲು ಆಗಿಲ್ಲ.
ನಿಮಗಾಗಿ ನಾವು ಕೆಲವು ಸಂಕಲ್ಪ ಮಾಡಿದ್ದೇವೆ. ಅದರ ಪೈಕಿ ಮೊದಲನೇ ಗ್ಯಾರಂಟಿ ಘೋಷಣೆಯನ್ನು ಪ್ರಕಟಿಸಿದ್ದೇವೆ. ನಿಮ್ಮ ಸೇವೆ ಮಾಡಲು, ನಿಮಗೆ ಬಲಿಷ್ಠ ಸರ್ಕಾರ ನೀಡಲು ಅಭಿವೃದ್ಧಿ ಕರ್ನಾಟಕ ನಿರ್ಮಾಣಕ್ಕೆ, ರಾಜ್ಯದ ಕಳಂಕ ತೊಳೆಯಲು ನೀವೆಲ್ಲರೂ ನಮಗೆ ಸಹಕಾರ ನೀಡಬೇಕು.

Translate »