ಹುಬ್ಬಳ್ಳಿ-ಧಾರವಾಡದಲ್ಲಿ ಇಂದು ರಾಷ್ಟ್ರೀಯ ಯುವಜನೋತ್ಸವ: ಪ್ರಧಾನಿ ಮೋದಿ ಚಾಲನೆ
News

ಹುಬ್ಬಳ್ಳಿ-ಧಾರವಾಡದಲ್ಲಿ ಇಂದು ರಾಷ್ಟ್ರೀಯ ಯುವಜನೋತ್ಸವ: ಪ್ರಧಾನಿ ಮೋದಿ ಚಾಲನೆ

January 12, 2023

ಹುಬ್ಬಳ್ಳಿ, ಜ.11- ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಐದು ದಿನ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ನಗರದ ರೈಲ್ವೆ ಮೈದಾನದಲ್ಲಿ ಗುರುವಾರ ಸಂಜೆ 4ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಗುರುವಾರ ಮಧ್ಯಾಹ್ನ 3.40ಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಏಳು ಕಿ.ಮೀ. ದೂರದಲ್ಲಿರುವ ರೈಲ್ವೆ ಮೈದಾನಕ್ಕೆ ಝಡ್‍ಪ್ಲಸ್ ಭದ್ರತೆಯೊಂದಿಗೆ ತೆರಳಲಿದ್ದಾರೆ. ಸಂಜೆ 4ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಿ ಸಂಜೆ 5.15ಕ್ಕೆ ಮುಕ್ತಾಯವಾಗಲಿದ್ದು, ಪ್ರಧಾನಿಯವರು ಅರ್ಧ ಗಂಟೆ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಲಾವಿದರ ತಾಲೀಮು ನಡೆಯಿತು.

ರಾಜ್ಯಪಾಲ ಥಾವರಚಂದ್ ಗೆಲ್ಹೋತ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ನಾರಾಯಣ ಗೌಡ, ಶಂಕರಪಾಟೀಲ ಮುನೇನಕೊಪ್ಪ, ಮೇಯರ್ ಈರೇಶ ಅಂಚಟಗೇರಿ ಹಾಗೂ ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿ ವೇದಿಕೆ ಮೇಲೆ 25 ಗಣ್ಯರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹಾವೇರಿಯಲ್ಲಿ ಸಿದ್ಧಪಡಿಸುವ ‘ಏಲಕ್ಕಿ ಹಾರ’ ಮತ್ತು ‘ಏಲಕ್ಕಿ ಪೇಟ’ ಹಾಕಿ, ಕಸೂತಿ ಕಲೆಯ ಹ್ಯಾಂಡ್‍ಲೂಮ್ ಶಾಲು ಹೊದಿಸಿ, ಬೀದರ್‍ನ ಬಿದಿರಿ ಕಲೆಯ ಸ್ವಾಮಿ ವಿವೇಕಾನಂದರ ಮೂರ್ತಿ ಹಾಗೂ ತೇಗದ ಚೌಕಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಾದ ರಾಷ್ಟ್ರಧ್ವಜವನ್ನು ಪ್ರಧಾನಿಗೆ ನೀಡಿ ಜಿಲ್ಲಾಡಳಿತ ಸನ್ಮಾನಿಸಲಿದೆ. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೆÇಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ನಗರದ ಎಲ್ಲ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.

Translate »