ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ `ಖಚಿತ’
ಮೈಸೂರು

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ `ಖಚಿತ’

September 25, 2020

ಮೈಸೂರು, ಸೆ.24(ವೈಡಿಎಸ್)- ಮೈಸೂರು ಜಿಲ್ಲೆ ಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸೋಂಕು ಮತ್ತು ಸಾವಿನ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಬಿ.ಶರತ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲಾದ್ಯಂತ ಈವರೆಗೆ ಮಾಸ್ಕ್ ಧರಿಸದೆ, ನಿಯಮ ಉಲ್ಲಂಘಿಸಿದ 4,675 ಜನರಿಂದ ಒಟ್ಟು 7,84,900 ರೂ. ವಸೂಲಿ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ರೂ. ಮತ್ತು ಗ್ರಾಮೀಣ ಪ್ರದೇಶ ದಲ್ಲಿ 100 ರೂ. ದಂಡ ವಿಧಿಸಲಾಗುವುದು ಎಂದರು.

ತಿಂಗಳಲ್ಲಿ ಹತೋಟಿಗೆ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮರು ಚಾಲನೆ ನೀಡಿದ್ದು, ಇನ್ನು ಒಂದು ತಿಂಗಳಿನಲ್ಲಿ ಕೊರೊನಾ ಹತೋಟಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವತಃ ಪರೀಕ್ಷೆ ಮಾಡಿಸಿ: ಸೋಂಕಿನ ಲಕ್ಷಣವಿಲ್ಲದಿ ದ್ದರೂ ಎಲ್ಲರೂ ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ನಿಯಂತ್ರಣಕ್ಕಾಗಿ ಆರ್‍ಟಿ- ಪಿಸಿಆರ್ ಪರೀಕ್ಷೆ ಮತ್ತು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಪ್ರಮಾಣ ಹೆಚ್ಚು ಮಾಡಬೇಕಿದೆ. ಈವರೆಗೆ ಬೆಳಗ್ಗೆಯಷ್ಟೇ ಕೊರೊನಾ ಪರೀಕ್ಷೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಮಧ್ಯಾಹ್ನದ ವೇಳೆಯೂ ಪರೀಕ್ಷೆ ಮಾಡಲಾಗುವುದು ಎಂದರು.

ಮಾಸ್ಕ್‍ಧಾರಣೆ ಉತ್ತಮ: ವಿಶ್ವ ಆರೋಗ್ಯ ಸಂಸ್ಥೆಯೂ ಕೊರೊನಾ ತಡೆಯಲು ಮಾಸ್ಕ್ ಧರಿಸುವುದು ಉತ್ತಮ ಎಂದು ಹೇಳಿದೆ. ಯಾರೊಬ್ಬರೂ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬಾರದು, ಕಾರ್ಯ ಕ್ರಮಗಳಲ್ಲಿ ಭಾಗವಹಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಐಎಲ್‍ಐ, ಎಸ್‍ಎಆರ್‍ಐ (ಸರಿ) ಪ್ರಕರಣ ಗಳು ವರದಿ ಆಗದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ತಪಾಸಣೆ ಮಾಡುವ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಂಥವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಸರ್ವೆ ಕಾರ್ಯ: ಕೊರೊನಾ ಸೋಂಕನ್ನು ಮುಂಚಿತ ವಾಗಿ ಪತ್ತೆ ಹಚ್ಚಿದಾಗಲಷ್ಟೇ ಅದರ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ. ಮಧುಮೇಹ ಮತ್ತಿತರೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ

ಬಳಲುತ್ತಿರುವವರು ಕೊರೊನಾದಿಂದ ಹೆಚ್ಚು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ಸರ್ವೆ ನಡೆಸಿದ್ದು, ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ತೆರಳಿ, ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ. ಇದು ಸೋಂಕಿತರು, ಸೋಂಕಿನ ಕುರಿತು ಶಂಕೆ ಇರುವವರ ಪತ್ತೆಗೆ ಸಹಕಾರಿಯಾಗಲಿದೆ ಎಂದರು.

ತಾಲೂಕುಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅಲ್ಲಿ ಮುಂದಿನ ದಿನಗಳಲ್ಲಿ ಆಕ್ಸಿಜೆನ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಸೇವೆ ಶೀಘ್ರವೇ ಲಭ್ಯವಾಗಲಿದೆ ಎಂದ ಜಿಲ್ಲಾಧಿಕಾರಿ ಶರತ್, ವೈದ್ಯರ ಸಂಘದ ಸಹಕಾರದಿಂದ ನಗರದ ಟ್ರಾಮಾ ಕೇರ್ ಸೆಂಟರ್‍ನಲ್ಲಿ 82 ಹಾಸಿಗೆಗಳ ಐಸಿಯು ಘಟಕ ತೆರೆಯಲಾಗುವುದು ಎಂದರು.

ಈ ಹಿಂದೆ ಮೈಸೂರಿನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಇಂಥ ದುಸ್ಸಾಹಸಕ್ಕೆ ಕೈಹಾಕಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದರು. ತುಂಬಾ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತನನ್ನು ಕೊನೆಕ್ಷಣದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದು ಸಹ ಮೈಸೂರು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಲು ಮುಖ್ಯ ಕಾರಣ. ಮುಂಚಿತವಾಗಿ ರೋಗ ಪತ್ತೆ ಮಾಡಲು ಮನೆಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ಮನೆ ಬಾಗಿಲಿಗೆ ಬರುವ ಆರೋಗ್ಯ ಕಾರ್ಯಕರ್ತರಿಗೆ ಜನರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಸಾರ್ವಜನಿಕರಲ್ಲಿ ಕೋರಿದರು.

ಕೊರೊನಾ ಪರೀಕ್ಷೆ ಅಗತ್ಯ: ಜಿಪಂ ಸಿಇಒ ಡಿ.ಭಾರತಿ ಮಾತನಾಡಿ, ಕೊರೊನಾ ಪಾಸಿಟಿವ್ ಬಂದರೆ ಐಸೊಲೇಟ್ ಮಾಡಿ, ಕೋವಿಡ್ ಆಸ್ಪತ್ರೆಗೆ ದಾಖಲಿಸುತ್ತಾರೆಂಬ ಭಯಬೇಡ. ಮನೆಯಲ್ಲೇ ಚಿಕಿತ್ಸೆ ಪಡೆಯಲು ಅವಕಾಶವಿದೆ. `ವಿದ್ಯಾಗಮ’ ಮೂಲಕ ಶಿಕ್ಷಕರು ಮನೆ ಬಾಗಿಲಿಗೇ ತೆರಳಿ ಪಾಠ ಮಾಡುತ್ತಿದ್ದಾರೆ. ಹಾಗಾಗಿ ಶಿಕ್ಷಕರು ಮತ್ತು ಇತರೆ ಇಲಾಖೆ ಸಿಬ್ಬಂದಿ, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆ ಮಾಡಿಸಲು ನಿರ್ದೇಶಿಸಲಾಗಿದೆ ಎಂದರು. ಕೋವಿಡ್ ಪರೀಕ್ಷೆ ಕೇಂದ್ರ ತಾಲೂಕು ಕೇಂದ್ರದಲ್ಲಿತ್ತು. ಕೊರೊನಾ ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿರುವುದರಿಂದ ಹೋಬಳಿ, ಗ್ರಾಪಂ ಮಟ್ಟದಲ್ಲಿಯೂ ಕೋವಿಡ್-19 ಪರೀಕ್ಷೆ ಮಾಡುತ್ತಿದ್ದೇವೆ. ಇದು ಜಿಲ್ಲಾಧಿಕಾರಿ ನೇತೃತ್ವದಲ್ಲಿಯೇ ನಡೆಯುತ್ತಿದೆ. ಗ್ರಾಮೀಣ ಜನರು ಸ್ವಯಂಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿ ಕೊಳ್ಳುವಂತೆ ಮನವಿ ಮಾಡಿದರು. ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಹಾಜರಿದ್ದರು.

 

ದಂಡ ವಿಧಿಸಿಯಾದರೂ ಅರಿವು ಮೂಡಿಸಬೇಕಿದೆ: ಎಸ್‍ಪಿ
ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕೆಂಬುದು ನಮ್ಮ ಉದ್ದೇಶ ನಮ್ಮದಲ್ಲ. ಆದರೆ, ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಮಾಸ್ಕ್ ಧರಿಸದೇ ಓಡಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಈವರೆಗೂ ಎಲ್ಲ ರೀತಿ ಪ್ರಯತ್ನ ಕೈಗೊಂಡು ಜನರಲ್ಲಿ ಅರಿವು ಮೂಡಿಸಲೆತ್ನಿಸಿದ್ದೇವೆ. ಇನ್ನು ಮುಂದೆ ದಂಡÀ ವಿಧಿಸಿಯಾದರೂ ಸೋಂಕು ತಡೆಯಬೇಕಿದೆ ಎಂದರು. ಕೋವಿಡ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. `ಕೊರೊನಾ ಪರೀಕ್ಷೆಯ ಅವಶ್ಯಕತೆಯಿಲ್ಲ. ಮನೆಯಲ್ಲೇ ಇದ್ದು ಕಷಾಯ ಕುಡಿಯಿರಿ’ ಎಂಬ ರೀತಿಯ ಸಂದೇಶಗಳನ್ನು ಹಾಕಲಾ ಗುತ್ತಿದೆ. ಇದೂ ಒಳ್ಳೆಯದೇ. ಆದರೆ, ಕೊರೊನಾ ಸೋಂಕು ಹರಡುವುದು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಲು ಕೋವಿಡ್ ಪರೀಕ್ಷೆ ಬಹಳ ಮುಖ್ಯ ಎಂದರು.

Translate »