ರಾಜ್ಯವ್ಯಾಪಿ ಆರೋಗ್ಯ ಕಾರ್ಯಕರ್ತರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಮೈಸೂರು

ರಾಜ್ಯವ್ಯಾಪಿ ಆರೋಗ್ಯ ಕಾರ್ಯಕರ್ತರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

September 25, 2020

ಮೈಸೂರು,ಸೆ.24(ಆರ್‍ಕೆ)-ವೇತನ ಪರಿಷ್ಕರಣೆ, ಸೇವಾ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‍ಎಚ್‍ಎಂ)ದಡಿ ಕಾರ್ಯನಿರ್ವಹಿಸು ತ್ತಿರುವ ಆರೋಗ್ಯ ಕಾರ್ಯಕರ್ತರು ಇಂದಿನಿಂದ ಕರ್ತವ್ಯ ಸ್ಥಗಿತ ಗೊಳಿಸಿ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಕೋವಿಡ್-19 ನಿರ್ವಹಣೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್ಸ್, ಮೇಲ್ ವರ್ಕರ್ಸ್, ಕೌನ್ಸಿಲರ್ಸ್, ಟಿಬಿ ಹೆಲ್ತ್ ವರ್ಕರ್ಸ್, ಟ್ರೀಟ್‍ಮೆಂಟ್ ಸೂಪರ್ ವೈಸರ್ಸ್, ಲ್ಯಾಬ್ ಸೂಪರ್‍ವೈಸರ್ಸ್, ನಾನ್ ಕ್ಲಿನಿಕಲ್ ಸಿಬ್ಬಂದಿಗಳಾದ ಡೇಟಾ ಎಂಟ್ರಿ ಆಪರೇಟರ್ಸ್, ಡ್ರೈವರ್ಸ್ ಹಾಗೂ ಡಿ ಗ್ರೂಪ್ ನೌಕರರು ಇಂದಿನಿಂದ ಸೇವೆಗಳಿಗೆ ಹಾಜರಾಗದೆ ಮುಷ್ಕರದಲ್ಲಿ ನಿರತರಾಗಿದ್ದಾರೆ.

ಭಾರತೀಯ ಮಜ್ದೂರ್ ಸಂಘ (ಐಎಂಎಸ್)ದ ಸಹಾಯದೊಂದಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸೂಚನೆಯನ್ವಯ ಮೈಸೂರು ಜಿಲ್ಲೆಯ ಸುಮಾರು 927 ನೌಕರರು ಸೇರಿದಂತೆ ರಾಜ್ಯದ ಒಟ್ಟು 30,000 ಮಂದಿ ಆರೋಗ್ಯ ಕಾರ್ಯಕರ್ತರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಪರಿಣಾಮ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿನ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾಗಿದೆ.

ಸೆ.22ರಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅಲ್ಲಲ್ಲಿ ಪ್ರತಿಭಟನೆ ನಡೆಸಿದ ಆರೋಗ್ಯ ಕಾರ್ಯಕರ್ತರು ಬುಧವಾರದವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಇಂದಿನಿಂದ ತಮ್ಮ ಬೇಡಿಕೆ ಈಡೇರು ವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘದ ಜಿಲ್ಲಾ ಪದಾ ಧಿಕಾರಿ ಚಂದ್ರಶೇಖರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೋವಿಡ್-19 ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ನಾವು ಕೆಲಸಕ್ಕೆ ಹಾಜ ರಾಗದೇ ಮನೆಯಲ್ಲೇ ಇದ್ದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದೇವೆಯೇ ಹೊರತು ಎಲ್ಲಿಯೂ ಬೀದಿಗಿಳಿದು ಹೋರಾಟ ನಡೆಸುತ್ತಿಲ್ಲ ಎಂದು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಮೈಸೂರು ಜಿಲ್ಲೆಯ 927 ಮಂದಿ ಸೇವೆಗೆ ಹಾಜರಾಗದಿರುವು ದರಿಂದ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಹಾಗೂ ಕೋವಿಡ್ ಸೋಂಕಿತರ ಆರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಭರವಸೆ ನೀಡುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ನಮ್ಮ ಹೋರಾಟ ಇದೇ ರೀತಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

 

 

Translate »