ಚಾ.ನಗರದಲ್ಲಿ ಕಫ್ರ್ಯೂ ವೇಳೆ  ಅಡ್ಡಾದಿಡ್ಡಿ ವಾಹನ ಸಂಚಾರ
ಚಾಮರಾಜನಗರ

ಚಾ.ನಗರದಲ್ಲಿ ಕಫ್ರ್ಯೂ ವೇಳೆ ಅಡ್ಡಾದಿಡ್ಡಿ ವಾಹನ ಸಂಚಾರ

May 1, 2021

ಚಾಮರಾಜನಗರ, ಏ. 30(ಎಸ್‍ಎಸ್)- ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಕಫ್ರ್ಯೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ಶುಕ್ರವಾರ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಬೈಕ್, ಕಾರುಗಳನ್ನು ನೋಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲೂ ಜಾರಿಯಲ್ಲಿರುವ ಕೊರೊನಾ ಕಫ್ರ್ಯೂ ವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ರಸ್ತೆಗೆ ಇಳಿದಿದ್ದರು. ನಗರದ ಭುವನೇಶ್ವರಿ ವೃತ್ತಕ್ಕೆ ಆಗಮಿಸಿದ ಅವರು, ವಾಹನಗಳ ಓಡಾಟ ಹಾಗೂ ಜನ ಸಂಚಾರವನ್ನು ಕಂಡು ಕೆಂಡಮಂಡಲವಾದರು. ಸ್ಥಳದಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರಿಗೆ ಮೊಬೈಲ್ ಕರೆ ಮಾಡಿದ ಜಿಲ್ಲಾಧಿಕಾರಿಗಳು, ಕಫ್ರ್ಯೂ ಉಲ್ಲಂಘನೆ ಆಗುತ್ತಿರುವು ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪ್ರಮುಖ ವೃತ್ತಕ್ಕೆ ಬಂದು ನೋಡಿ, ಯಾವ ರೀತಿ ಕಫ್ರ್ಯೂ ಉಲ್ಲಂಘನೆ ಆಗ್ತಾ ಇದೆ ಅಂತ. ಸ್ಥಳದಲ್ಲಿ ಯಾವ ಹಿರಿಯ ಪೊಲೀಸ್ ಅಧಿಕಾರಿಯೂ ಇಲ್ಲ. ಕೇವಲ ಮೂರು ಮಂದಿ ಪೇದೆಗಳಿದ್ದಾರಷ್ಟೇ ಎಂದ ಅವರು, ಸಂಬಂಧಪಟ್ಟ ಸಬ್ ಇನ್ಸ್‍ಪೆಕ್ಟರ್‍ಗೆ ಷೋಕಾಸ್ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್‍ಪೆಕ್ಟರನ್ನು ತರಾಟೆಗೆ ತೆಗೆದುಕೊಂಡರು. ಇದೇನಾ ಕಫ್ರ್ಯೂ? ಮಾತು ಕಡಿಮೆ ಮಾಡಿ ಕೆಲಸ ಮಾಡಿ. ನಿಮಗೆ ಅರ್ಥ ಆಗ್ತಾ ಇಲ್ವಾ? ನಿಮಗೆ ಯಾವ ಭಾಷೇಲಿ ಹೇಳ್ಬೇಕು ಇಷ್ಟೊಂದು ಜನರನ್ನು ಸಂಚರಿಸಲು ಬಿಟ್ರೆ ಏನ್ ಪ್ರಯೋಜನ? ಅನಗತ್ಯವಾಗಿ ಸಂಚರಿಸುತ್ತಿರುವ ವಾಹನಗಳನ್ನು ಕೂಡಲೇ ಸೀಜ್ ಮಾಡಿ, ಕೇಸ್ ಹಾಕಿ ಎಂದು ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಖಡಕ್ ಸೂಚನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್ ರಸ್ತೆಗಿಳಿದು ಅನಗತ್ಯವಾಗಿ ಸಂಚರಿಸು ತ್ತಿದ್ದ ವಾಹನಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡರು.
ಜೋಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಕಡಿಮೆ ಮಾಡಲು ಮುಂದಾದ ಪೊಲೀಸರು, ಡಿವೈಎಸ್ಪಿ ಕಚೇರಿ ಮುಂದೆ ಜೋಡಿ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ರಸ್ತೆಯನ್ನು ಬಂದ್ ಮಾಡಿದರು. ಸ್ಥಳದಲ್ಲಿ ಪಟ್ಟಣ ಠಾಣೆಯ ಇನ್ಸ್‍ಪೆಕ್ಟರ್ ಮಹೇಶ್ ಚಂದ್ರ ಹಾಜರಿದ್ದು, ಯಾವುದೇ ವಾಹನ ಜೋಡಿ ರಸ್ತೆಗೆ ತೆರಳದಂತೆ ನೋಡಿಕೊಂಡರು.

ಈ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮಹೇಶ್, ಜೋಡಿ ರಸ್ತೆಯಲ್ಲಿ ವಾಹನಗಳ ಓಡಾಟ ತುಂಬಾ ಜಾಸ್ತಿ ಆಗುತ್ತಿದೆ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅನಿವಾರ್ಯವಾಗಿ ಸಂಚರಿಸಲೇ ಬೇಕಾದವರು ಮಾತ್ರ ಸಂಚರಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.
ಇದಾದ ಸ್ವಲ್ಪ ಸಮಯದ ನಂತರ ತಮ್ಮ ಬಡಾ ವಣೆಯಲ್ಲಿ ವಾಹನಗಳ ಸಂಚಾರ ಹೆಚ್ಚಾದ ಕಾರಣ, ಡಾ.ಬಾಬು ಜಗಜೀವನರಾಂ ಬಡಾವಣೆಗಯ ನಿವಾಸಿ ಗಳು ಪ್ರಮುಖ ರಸ್ತೆಗೆ ಮರದ ದಿಮ್ಮಿಗಳನ್ನು ಹಾಕಿದರು. ಬಳಿಕ ಪೊಲೀಸರು ಡಿವೈಎಸ್ಪಿ ಕಚೇರಿ ಬಳಿ ಹಾಕ ಲಾಗಿದ್ದ ಬ್ಯಾರಿಕೇಡ್‍ಗಳನ್ನು ಸ್ವಲ್ಪ ಸರಿಸಿ, ಅಗತ್ಯ ಸಂಚಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದರು.

ಲಾಠಿ ರುಚಿ: ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಕೆಲವರಿಗೆ ದಂಡ ಹಾಕಿದರೆ, ಕೆಲವು ಬೈಕ್‍ಗಳನ್ನು ಸೀಜ್ ಮಾಡುವ ಮೂಲಕ ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಎಚ್ಚರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಿಲ್ಲೆಯಲ್ಲಿ 30 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನ ಪಾಸಿಟಿವ್ ಆಗಿದೆ. ಹಾಗಾಗಿ ಸಿಬ್ಬಂದಿ ಕೊರತೆ ಇದ್ದು, ಹೆಚ್ಚಿನ ಸಂಖ್ಯೆಯ ಹೋಂಗಾರ್ಡ್ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಕೇಳಲಾಗಿದೆ ಎಂದರು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 22 ಚೆಕ್‍ಪೋಸ್ಟ್ ತೆರೆಯಲಾಗಿದೆ. ಇದಕ್ಕೆ ಕಂದಾಯ ಮತ್ತು ಆರೋಗ್ಯ ಇಲಾಖೆ ಸಹಕಾರವೂ ಬೇಕು. ಕಫ್ರ್ಯೂ ನಿಯಮ ಉಲ್ಲಂಘಿಸಿದ 80 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಅನಗತ್ಯವಾಗಿ ಸಂಚರಿ ಸುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ವಾಹನಗಳನ್ನು ಸೀಜ್ ಮಾಡುವಂತೆ ಸೂಚಿಸಲಾಗಿದೆ ಎಂದರು.

Translate »