ವರಿಷ್ಠರು ನಿರ್ಧರಿಸಿದರೆ ವರುಣಾದಲ್ಲೇ ಸ್ಪರ್ಧಿಸುತ್ತೇನೆ
ಮೈಸೂರು

ವರಿಷ್ಠರು ನಿರ್ಧರಿಸಿದರೆ ವರುಣಾದಲ್ಲೇ ಸ್ಪರ್ಧಿಸುತ್ತೇನೆ

December 10, 2022

ನಂಜನಗೂಡು/ತಿ.ನರಸೀಪುರ, ಡಿ. 9-ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ಹಳೆಯ ಕ್ಷೇತ್ರವಾದ ವರುಣಾದಲ್ಲಿ ಮಿಂಚಿನ ಸಂಚಾರ ಮಾಡಿದರು.

ಕ್ಷೇತ್ರದಲ್ಲಿ ಮೂರು ಕಾರ್ಯಕ್ರಮಗಳಿಗೆ ಹಾಜ ರಾದ ಅವರು, ತಾವು ಮುಖ್ಯಮಂತ್ರಿ ಆಗಿದ್ದಾಗ ಮಂಜೂರು ಮಾಡಿದ್ದು, ಈಗ ಪೂರ್ಣಗೊಂಡಿರುವ ಯೋಜನೆಗಳನ್ನು ಉದ್ಘಾಟಿಸಿದರು.ಅವರು ಹೋದೆ ಡೆಯೆಲ್ಲಾ ಅಭೂತಪೂರ್ವ ಸ್ವಾಗತ ದೊರಕಿದ್ದು, “ಮುಂದಿನ ಸಿಎಂ ಸಿದ್ದರಾಮಯ್ಯ” ಎಂಬ ಘೋಷಣೆ ಜೊತೆಗೆ ವರುಣಾದಲ್ಲೇ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದು ಕಂಡುಬಂತು. ಎಲ್ಲಾ ಕಡೆಯೂ ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ಹೇಳು ತ್ತಿದ್ದ ಸಿದ್ದರಾಮಯ್ಯ, ತಿ.ನರಸೀಪುರ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಕಾರ್ಯಕರ್ತರು ಭಾರೀ ಒತ್ತಡ ಹೇರಿದಾಗ, ಕ್ಷೇತ್ರದ ಜನರ ಭಾವನೆಗಳನ್ನು ಹೈಕಮಾಂಡ್‍ಗೆ ತಿಳಿಸುತ್ತೇನೆ ಎಂದು ಹೇಳುವುದರ ಮೂಲಕ ಅವರು ವರುಣಾದಲ್ಲೇ ಸ್ಪರ್ಧಿಸಬಹುದು ಎಂಬ ಸೂಚನೆಯನ್ನೂ ಸೂಚ್ಯವಾಗಿ ನೀಡಿದರು.

ಇಂಡುವಾಳು ಗ್ರಾಮದಲ್ಲಿ ಅಂಬೇಡ್ಕರ್ ಭವನ ಉದ್ಘಾ ಟಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಕಳೆದ ಚುನಾ ವಣೆಯಲ್ಲಿ ನಾನು ವರುಣಾದಲ್ಲಿ ಸ್ಪರ್ಧಿಸಲಿಲ್ಲ. ಸ್ಪರ್ಧಿಸಿ ದ್ದರೆ ನೀವು ನನ್ನನ್ನು ಗೆಲ್ಲಿಸುತ್ತಿದ್ದೀರಿ ಎಂದಾಗ ಕಾರ್ಯ ಕರ್ತರು 100ಕ್ಕೆ ನೂರು ಗೆಲ್ಲಿಸುತ್ತೇವೆ, ಇಲ್ಲೇ ನಿಲ್ಲಿ ಎಂದು ಒತ್ತಾಯಿಸಿದರು. ಆಗ ಸಿದ್ದರಾಮಯ್ಯ ಅದನ್ನು ಹೈಕಮಾಂಡ್‍ನವರಿಗೆ ಬಿಟ್ಟಿದ್ದೇನೆ ಎಂಬ ಮಾಮೂಲಿ ಡೈಲಾಗ್ ಹೊಡೆದಾಗ ಕಾರ್ಯಕರ್ತರು, ಮತದಾರರೇ ಹೈಕಮಾಂಡ್, ನಾವು ನಿಮ್ಮನ್ನು ಗೆಲ್ಲಿಸುತ್ತೇವೆ, ಬೇಕಾ ದರೆ ನಿಮ್ಮ ಹೈಕಮಾಂಡ್‍ಗೂ ಹೇಳುತ್ತೇವೆ ಎಂದು ಒಕ್ಕೋರಲಿನಿಂದ ಒತ್ತಾಯ ಮಾಡಿದರು. ಅದೇ ವೇಳೆ ಸಿದ್ದರಾಮಯ್ಯ ವರುಣಾದಲ್ಲೇ ಸ್ಪರ್ಧಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ತಿ.ನರಸೀಪುರ ಕಸಬಾ ಹೋಬಳಿ ದಲಿತ ಮುಖಂಡರ ಒತ್ತಾಯ ಪತ್ರವನ್ನು ಎಐಸಿಸಿ ಅಧ್ಯಕ್ಷರಿಗೆ ರವಾನಿಸಿರುವುದಾಗಿ ದಸಂಸ ಸಂಚಾಲಕ ಆಲಗೂಡು ಶಿವಕುಮಾರ್ ಘೋಷಿಸಿದಾಗ ನೆರೆದಿದ್ದ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು. ಈ ವೇಳೆ ಸ್ವಲ್ಪ ಒತ್ತಡಕ್ಕೆ ಮಣಿದವರಂತೆ ಕಂಡುಬಂದ ಸಿದ್ದರಾಮಯ್ಯ, ಹೌದು, ಮತದಾರರೇ ಹೈಕಮಾಂಡ್. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಹೀಗಾಗಿ ನಿಮ್ಮ ಒತ್ತಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಹೈಕಮಾಂಡ್‍ಗೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನಪಡಿಸಿ ಭಾಷಣ ಮುಂದುವರೆಸಿದರು.

ಇಂಡುವಾಳು ಗ್ರಾಮದ ಅಂಬೇಡ್ಕರ್ ಭವನಕ್ಕೆ ನಾನೇ ಜಾಗ ಕೊಡಿಸಿದ್ದೆ. ನಿರ್ಮಾಣ ವಾಗಿರುವ ಭವನವನ್ನು ಉದ್ಘಾಟಿಸುತ್ತಿರುವುದು ಸಂತೋಷವಾಗುತ್ತಿದೆ ಎಂದರಲ್ಲದೇ, ರಾಜ್ಯದಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನತೆಯ ಕನಸನ್ನು ಸಾಕಾರಗೊಳಿಸಲು ಎಸ್‍ಸಿ/ಎಸ್‍ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ವಿಶೇಷ ಘಟಕ ಯೋಜನೆ ಮೂಲಕ ಅನುದಾನ ಮೀಸಲಿಟ್ಟಿದ್ದೆವು. ಕುತ್ತಿಗೆ ಯಲ್ಲೂ ಮೀಸಲಾತಿ ಕಲ್ಪಿಸಿದ್ದೆವು ಎಂಬುದು ಸೇರಿದಂತೆ ತಾವು ಮುಖ್ಯಮಂತ್ರಿ ಆಗಿದ್ದಾಗ ದಲಿತರಿಗಾಗಿ ಕೈಗೊಂಡಿದ್ದ ಯೋಜನೆಗಳ ಬಗ್ಗೆ ವಿವರಿಸಿದ್ದಲ್ಲದೇ ದಲಿತರು ಮಾತ್ರವ ಲ್ಲದೆ ಎಲ್ಲಾ ಶೂದ್ರ ಸಮುದಾಯಗಳು ಶಿಕ್ಷಣ ಪಡೆಯುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಸೇತುವೆ ಉದ್ಘಾಟನೆ: ಸಿದ್ದರಾಮಯ್ಯ ಇಂದು ವರುಣಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ನಂಜನಗೂಡು ತಾಲೂಕಿನ ಮರಳೂರು ಗೊದ್ದನಪುರ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಉದ್ಘಾಟಿಸಿದರು. ಈ ಸೇತುವೆ ನಿರ್ಮಾಣಕ್ಕೆ ತಾವು ಮುಖ್ಯಮಂತ್ರಿ ಆಗಿದ್ದಾಗ ಮಂಜೂರಾತಿ ನೀಡಿ, ಭೂಮಿ ಪೂಜೆ ಮಾಡಿದ್ದನ್ನು ಹಾಗೂ ಹಣ ಬಿಡುಗಡೆ ಮಾಡಿದ್ದನ್ನು ಉಲ್ಲೇಖಿಸಿದರು. ಈ ಕಾರ್ಯಕ್ರಮವನ್ನು ಸಚಿವರನ್ನಿಟ್ಟುಕೊಂಡು ಮಾಡಬೇಕು ಎಂದ ಅವರು, ತಾವೇ ಸ್ವತಃ ದೂರವಾಣಿ ಕರೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಆಹ್ವಾನಿಸಿದ್ದಾಗಿಯೂ, ಅವರು ಕೂಡ ಬರುವುದಾಗಿ ತಿಳಿಸಿದ್ದರು. ಅದ್ಯಾಕೋ ಬರಲಿಲ್ಲ. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ಈ ಹಿಂದೆ ಈ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಿದ್ದಾಗ ಕರೆದಿದ್ದೆ. ಆಗ ಕಾರ್ಯಕ್ರಮ ಮಾಡಲಿಲ್ಲ. ಈಗ ನನಗೆ ಹುಷಾರಿಲ್ಲದೇ ಇದ್ದುದ್ದರಿಂದ ಕರೆಯಲು ಮೆರೆತುಬಿಟ್ಟೆ ಎಂದು ತಿಳಿಸಿದರು. ನಂತರ ತಿ.ನರಸೀಪುರ ತಾಲೂಕು ಇಂಡುವಾಳು ಗ್ರಾಮದಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿ ನಂತರ ತಮ್ಮ ಸ್ವಗ್ರಾಮವಾದ ಸಿದ್ದರಾಮನಹುಂಡಿಯಲ್ಲಿ ಹಾಗೂ ಶೀಥಲಿಕರಣ ಕೇಂದ್ರವನ್ನು ಉದ್ಘಾಟಿಸಿದರು.

ಇಂದು ಸಿದ್ದರಾಮಯ್ಯ ಭಾಗವಹಿಸಿದ್ದ ಎಲ್ಲಾ ಕಾರ್ಯಕ್ರಮಗಳಲ್ಲೂ “ಮುಂದಿನ ಸಿಎಂ ಸಿದರಾಮಯ್ಯ” ಘೋಷಣೆ ಮೊಳಗಿತು. ವರುಣಾದಲ್ಲೇ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂತು. ಅಲ್ಲದೇ, ಮೂರೂ ಕಾರ್ಯಕ್ರಗಳಲ್ಲಿ ಸಿದ್ದರಾಮಯ್ಯ ಭಾಗವಹಿಸಿದಾಗ ಅವರಿಗೆ ಬೃಹತ್ ಸೇಬಿನ ಹಾರವನ್ನು ಜೆಸಿಬಿ ಮೂಲಕ ಹಾಕಲಾಯಿತು. ಜೊತೆಗೆ ರೋಡ್ ಶೋ ನಡೆಸಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಮುಖಂಡರಾದ ಸುನಿಲ್ ಬೋಸ್, ಬಸವರಾಜು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಒಟ್ಟಾರೆ ಇಂದು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹವಾ ಎದ್ದು ಕಾಣುತ್ತಿತ್ತು.

Translate »