ಕೋರ್ಟ್ ಆದೇಶ ಜಾರಿಗೆ ಹೋದ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ದಂಪತಿ ಧಮ್ಕಿ
ಮೈಸೂರು

ಕೋರ್ಟ್ ಆದೇಶ ಜಾರಿಗೆ ಹೋದ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ದಂಪತಿ ಧಮ್ಕಿ

December 13, 2022

ಮೈಸೂರು, ಡಿ. 12- ಕೆಎಸ್‍ಆರ್‍ಟಿಸಿಗೆ ಸೇರಿದ ವಾಣಿಜ್ಯ ಸಂಕೀರ್ಣವನ್ನು ಗುತ್ತಿಗೆ ಪಡೆದಿದ್ದವನಿಗೆ ನ್ಯಾಯಾಲಯದ ಆದೇಶ ವನ್ನು ಜಾರಿ ಮಾಡಲು ತೆರಳಿದ ಕೆಎಸ್ ಆರ್‍ಟಿಸಿ ಅಧಿಕಾರಿಗಳಿಗೆ ದಂಪತಿ ರಾಜಾ ರೋಷವಾಗಿ ಧಮ್ಕಿ ಹಾಕಿದ್ದಾರೆ. ಅದ ರಲ್ಲೂ ಮಹಿಳೆಯೊಬ್ಬಳು ಸಾರ್ವಜನಿಕರ ಎದುರಲ್ಲೇ ಮಚ್ಚು ತೋರಿಸಿ, ಬೆದರಿಕೆ ಹಾಕಿದರೆ, ಆಕೆಯ ಪತಿ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ಹರಿಹಾಯ್ದ ಘಟನೆ ಮೈಸೂರಿನ ಸಾತಗಳ್ಳಿ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ವಾಣಿಜ್ಯ ಸಂಕೀರ್ಣ ಗುತ್ತಿಗೆ ಪಡೆದಿದ್ದ ಬನ್ನಿಮಂಟಪ ಸಿ ಲೇಔಟ್ ನಿವಾಸಿ ಶಫೀಕ್ ಅಹಮದ್ ಪತ್ನಿ, ಸೈಯ್ಯದ್ ಮುನ್ನೀಸಾ ಎಂಬಾಕೆಯೇ ಅಧಿಕಾರಿಗ ಳಿಗೆ ಲಾಂಗ್ ತೋರಿಸಿ, ಬೆದರಿಕೆ ಹಾಕಿ ದವಳಾಗಿದ್ದು, ಅದೇ ವೇಳೆ ಶಫೀಕ್ ಅಹಮದ್ ಕೂಡ
ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾನೆ.

ವಿವರ: ಸಾತಗಳ್ಳಿ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣವನ್ನು 12 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ, ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಆತ ಕೆಎಸ್‍ಆರ್‍ಟಿಸಿಗೆ ಪರವಾನಗಿ ಶುಲ್ಕ, ಜಿಎಸ್‍ಟಿ, ವಿದ್ಯುಚ್ಛಕ್ತಿ ಶುಲ್ಕವನ್ನು ಸರಿಯಾಗಿ ಪಾವತಿಸದೇ 1.89 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದ. ಅಲ್ಲದೇ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಪಡೆದಿದ್ದ. ಡಿಸೆಂಬರ್ 10ರಂದು ನ್ಯಾಯಾಲಯವು ಆತ ಹೂಡಿದ್ದ ದಾವೆಯನ್ನು ರದ್ದುಪಡಿಸಿ, ಆದೇಶ ಹೊರಡಿಸಿತ್ತು. ಈ ಆದೇಶವನ್ನು ಜಾರಿ ಮಾಡಲು ವಾಣಿಜ್ಯ ಸಂಕೀರ್ಣಕ್ಕೆ ಕೆಎಸ್‍ಆರ್‍ಟಿಸಿ ಡಿಟಿಓ ಮರೀಗೌಡ, ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕ ಶಂಕರ್, ಸಹಾಯಕ ಸಂಚಾರ ವ್ಯವಸ್ಥಾಪಕಿ ಕಲಾಶ್ರೀ, ಸಹಾಯಕ ಸಂಚಾರ ಅಧೀಕ್ಷಕ ಚೇತನ್ ಮತ್ತಿತರರು ತೆರಳಿದಾಗ ಶಫೀಕ್ ಅಹಮದ್ ಪತ್ನಿ ಸೈಯ್ಯದ್ ಮುನ್ನೀಸಾ ಕೈಯ್ಯಲ್ಲಿ ಲಾಂಗ್ ಹಿಡಿದು ಝಳಪಿಸುತ್ತಾ, ಅವಾಚ್ಯ ಪದಗಳಿಂದ ನಿಂದಿಸುತ್ತಾ ಸಾರಿಗೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾಳೆ. ಅಲ್ಲದೇ ಶಫೀಕ್ ಅಹಮದ್ ಕೂಡ ಸಾರಿಗೆ ಅಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ನೆರೆದಿದ್ದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಭಯ-ಭೀತಿಯಿಂದ ಈ ದೃಶ್ಯವನ್ನು ನೋಡಿದ್ದಾರೆ. ಈ ಘಟನಾವಳಿಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಎಸ್‍ಆರ್‍ಟಿಸಿಯಿಂದ ವಾಣಿಜ್ಯ ಸಂಕೀರ್ಣವನ್ನು ಗುತ್ತಿಗೆ ಪಡೆದಿದ್ದ ಶಫೀಕ್ ಅಹಮದ್ ಅದನ್ನು ಖಾಸಗಿ ಕಾಲೇಜಿಗೆ ಉಪಗುತ್ತಿಗೆ ನೀಡಿದ್ದಾನೆ ಎಂದು ಹೇಳಲಾಗಿದೆ. ನ್ಯಾಯಾಲಯದಲ್ಲಿ ಶಫೀಕ್ ಅಹಮದ್ ಹೂಡಿದ್ದ ದಾವೆ ವಜಾಗೊಂಡಿರುವಾಗ ಸದರಿ ಕಟ್ಟಡವನ್ನು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ವಶಕ್ಕೆ ಪಡೆಯಬೇಕಾಗಿತ್ತು. ಆದರೆ, ಅಲ್ಲಿ ಕಾಲೇಜು ನಡೆಯುತ್ತಿದ್ದರಿಂದ ಅಧಿಕಾರಿಗಳು ಕಟ್ಟಡವನ್ನು ವಶಕ್ಕೆ ಪಡೆದಿಲ್ಲ ಎಂದು ಹೇಳಲಾಗಿದೆ.

ಈ ಸಂಬಂಧ ಕೆಎಸ್‍ಆರ್‍ಟಿಸಿ ಡಿಟಿಓ ಮರೀಗೌಡರು ನೀಡಿದ ದೂರನ್ನು ಭಾರತೀಯ ದಂಡ ಸಂಹಿತೆ 353, 504, 506, 34ರಡಿ ದಾಖಲಿಸಿಕೊಂಡಿರುವ ಉದಯಗಿರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲೇ ಹಾಡಹಗಲೇ ಬಸ್ ನಿಲ್ದಾಣದಲ್ಲಿ ಲಾಂಗ್ ಹಿಡಿದು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಲಾಂಗ್ ಹಿಡಿದು ಬೆದರಿಕೆ ಹಾಕಿರುವುದು ಕೊಲೆ ಯತ್ನ ಅಪರಾಧವಾಗಿದ್ದರೂ ಪೊಲೀಸರು ಆ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ 307 ಅನ್ನು ಎಫ್‍ಐಆರ್‍ನಲ್ಲಿ ದಾಖಲಿಸದೇ ಇರುವುದು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನೇ ಲಾಂಗ್ ತೋರಿಸಿ, ಸಾರ್ವಜನಿಕವಾಗಿ ಬೆದರಿಸಿರುವ ಆರೋಪಿಗಳ ವಿರುದ್ಧ ಕಠಿಣವಾದ ಸೆಕ್ಷನ್‍ಗಳಡಿ ದೂರನ್ನು ದಾಖಲಿಸದೆ, ಆರೋಪಿಗಳನ್ನು ಬಂಧಿಸದೇ ಇರುವುದರ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರು ಪೊಲೀಸರಿಂದ ಯಾವ ರೀತಿಯ ರಕ್ಷಣೆ ನಿರೀಕ್ಷಿಸಲು ಸಾಧ್ಯ ಎಂದು ‘ಮೈಸೂರು ಮಿತ್ರ’ನಿಗೆ ಕರೆ ಮಾಡಿದ್ದ ನಾಗರಿಕರೊಬ್ಬರು ಪ್ರಶ್ನಿಸಿದ್ದಾರೆ.

Translate »