ಆಪರೇಷನ್‍ಗೆ ಒಳಗಾಗುವವರಿಗೆ ಟಿಕೆಟ್‍ಗೆ ಶಿಫಾರಸು ಬೇಡ
News

ಆಪರೇಷನ್‍ಗೆ ಒಳಗಾಗುವವರಿಗೆ ಟಿಕೆಟ್‍ಗೆ ಶಿಫಾರಸು ಬೇಡ

December 13, 2022

ಬೆಂಗಳೂರು, ಡಿ.12(ಕೆಎಂಶಿ)-ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆದ್ದ ಬಳಿಕ ಬೇರೆ ಪಕ್ಷಗಳಿಗೆ ಜಿಗಿಯುವಂತಹ ಮಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಬೇಡ. ಗೆದ್ದೇ ಗೆಲ್ಲುತ್ತೇವೆ ಎಂಬ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎಂಬುದನ್ನು ಮೌಖಿಕವಾಗಿ ತಿಳಿಸು ವಂತೆ ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್‍ಸಿಂಗ್ ಸುರ್ಜೇವಾಲ ದೆಹಲಿಯಲ್ಲಿಂದು ಕರ್ನಾ ಟಕ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಮುಖಂಡರೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿ, ಕೆಲವು ಸಲಹೆ-ಸೂಚನೆ ಗಳನ್ನು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯ ವರು ರಾಷ್ಟ್ರೀಯ ಅಧ್ಯಕ್ಷರಾದ ನಂತರ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅರ್ಧ ಯಶಸ್ಸು ಕಂಡಿದ್ದಾರೆ. ಈ ಚುನಾವಣೆಯ ನಂತರ ತಮ್ಮ ಸ್ವಂತ ರಾಜ್ಯ ಕರ್ನಾಟಕ ವಿಧಾನಸಭೆಗೆ ಏಪ್ರಿಲ್-ಮೇ 2023ಕ್ಕೆ ಚುನಾವಣೆ ಜರುಗಲಿದೆ. ಖರ್ಗೆ ಅವರು ತಮ್ಮ ಸ್ವಂತ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ನಾಲ್ಕೈದು ತಿಂಗಳ ಮುನ್ನವೇ ಬಿಜೆಪಿ ವರಿಷ್ಠರ ಮಾದರಿಯಲ್ಲೇ ಚುನಾವಣಾ ತಂತ್ರಗಾರಿಕೆ ಆರಂಭಿಸಿದ್ದಾರೆ. ತಮ್ಮ ಐದು ದಶಕಗಳ ಅನುಭವದ ಆಧಾರದ ಮೇಲೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಹೇಗೆ ಎದುರಿಸಬೇಕು, ನಾವು ಅಧಿಕಾರದ ಚುಕ್ಕಾಣಿ ಹಿಡಿಯಲು ಮಾಡಬೇಕಾದ ಕಾರ್ಯತಂತ್ರ, ರಾಜ್ಯದಲ್ಲಿ ನಮಗಿರುವ ಅವಕಾಶವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಇಲ್ಲಿನ ನಾಯಕರಿಗೆ ಸುದೀರ್ಘ ಪಾಠ ಮಾಡಿದ್ದಾರೆ.

ಖರ್ಗೆ ಅವರ ಮಾತಿಗೆ ರಾಜ್ಯ ಉಸ್ತುವಾರಿ ನೋಡಿಕೊಂಡಿದ್ದ, ಹಾಗೂ ಈಗ ನೋಡಿಕೊಳ್ಳುತ್ತಿರುವ ವೇಣುಗೋಪಾಲ್ ಮತ್ತು ಸುರ್ಜೆವಾಲ್ ಧನಿಗೂಡಿಸಿ,
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒಂದಾಗಿ ಚುನಾವಣೆ ಎದುರಿಸಿದರೆ, ನಾವು ಸುಲಭವಾಗಿ ಅಧಿಕಾರ ಹಿಡಿಯುತ್ತೇವೆ ಎಂಬ ಮಾತನ್ನಾಡಿದ್ದಾರೆ. ಕರ್ನಾಟಕದಲ್ಲಿ ನಮ್ಮ ಪರ ಇರುವ ವಾತಾವರಣವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠಗೊಳಿಸಬೇಕು. ನಾಯಕರುಗಳಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಂಡು ಮುನ್ನೆಡೆದರೆ ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಮುಂದಿನ ಮುಖ್ಯಮಂತ್ರಿ ಯಾರೆಂದು ಚುನಾವಣೆಗೂ ಮುನ್ನ ಬಿಂಬಿಸುವುದು ಬೇಡ, ನೀವೆಲ್ಲರೂ ಸಾಮೂಹಿಕ ನಾಯಕತ್ವ ದಲ್ಲೇ ಪಕ್ಷವನ್ನು ಮುನ್ನೆಡೆಸಿ. ನೆಲ ಕಚ್ಚಿದ್ದ ಕರ್ನಾಟಕ ಕಾಂಗ್ರೆಸ್‍ಗೆ ಶಿವಕುಮಾರ್-ಸಿದ್ದರಾಮಯ್ಯ ಸಾರಥ್ಯದಲ್ಲಿ ನೀವೆಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರುವ ಹಂತಕ್ಕೆ ಬಂದಿದ್ದೀರಿ. ಈ ಹುಮ್ಮಸ್ಸು ಹಾಗೆಯೇ ಮುಂದುವರೆಯಲಿ. ಚುನಾವಣೆ ಸಮೀಪ ವಾಗುತ್ತಿದ್ದಂತೆ ಕೇಂದ್ರದ ಬಿಜೆಪಿ ಸರ್ಕಾರ ನಮ್ಮಲ್ಲಿನ ಕೆಲವು ನಾಯಕರಿಗೆ ಕಾನೂನು ತೊಡಕುಗಳನ್ನು ಮುಂದೊಡ್ಡಿ ನಿಮ್ಮ ಬಲ ಕುಗ್ಗಿಸುವ ಕೆಲಸ ಮಾಡುತ್ತದೆ. ಇದನ್ನು ಎದುರಿಸಲು ನಿಮ್ಮ ಜೊತೆ ನಾವಿದ್ದೇವೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವಂತಹವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ. ಆ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ನೀಡಿ, ಆಮಿಷಗಳಿಗೆ ಬಲಿಯಾಗುವವರಿಗೆ ಅವಕಾಶ ನೀಡಬೇಡಿ.
ಅಧಿಕೃತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಕ್ಕೂ ಮುನ್ನ ಉಳಿದ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅಲ್ಪ ಸಂಖ್ಯಾತರ ಜೊತೆಗೆ ಸಣ್ಣಪುಟ್ಟ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳಿ ಎಂದು ಖರ್ಗೆ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಈ ಚುನಾವಣೆಯಲ್ಲಿ ವೀರಶೈವ ಸಮುದಾಯ ಪೂರ್ಣವಾಗಿ ಬಿಜೆಪಿ ಪರ ನಿಲ್ಲದು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವಂತೆಯು ತಿಳಿ ಹೇಳಿದ್ದಾರೆ. ಅಲ್ಲದೆ, ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯು ಸಭೆಯಲ್ಲಿ ಚರ್ಚೆಯಾಗಿದೆ.

ಎಐಸಿಸಿ ನಾಯಕರು ಕರೆದ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅಲ್ಲದೆ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಂಬಿ ಪಾಟೀಲ್, ಕೆ.ಜೆ. ಜಾರ್ಜ್, ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹಮದ್, ಸತೀಶ್ ಜಾರಕಿಹೋಳಿ, ಧೃವನಾರಾಯಣ, ಈಶ್ವರಖಂಡ್ರೆ ಸೇರಿದಂತೆ ರಾಜ್ಯದ 14 ಮಂದಿ ಭಾಗವಹಿಸಿದ್ದರು.

Translate »