ಜನರ ವಂಚಿಸುತ್ತಿರುವ ಬ್ಲೇಡ್ ಕಂಪನಿಗಳ ಹತ್ತಿಕ್ಕಲು ಪ್ರತ್ಯೇಕ ನಿಗಾ ಘಟಕ ಸ್ಥಾಪನೆ
News

ಜನರ ವಂಚಿಸುತ್ತಿರುವ ಬ್ಲೇಡ್ ಕಂಪನಿಗಳ ಹತ್ತಿಕ್ಕಲು ಪ್ರತ್ಯೇಕ ನಿಗಾ ಘಟಕ ಸ್ಥಾಪನೆ

December 13, 2022

ಬೆಂಗಳೂರು,ಡಿ.12(ಕೆಎಂಶಿ)-ಬಡ ಹಾಗೂ ಮಧ್ಯಮ ವರ್ಗದ ಜನರನ್ನು ವಂಚಿಸುವ ಬ್ಲೇಡ್ ಕಂಪನಿಗಳ ಹತ್ತಿಕ್ಕಲು ತಮಿಳುನಾಡು ಮಾದರಿಯಲ್ಲೇ ಕಾನೂನು ತರುವುದಾಗಿ ಹೇಳಿರುವ ಕಂದಾಯ ಸಚಿವ ಆರ್.ಅಶೋಕ್, ಇದಕ್ಕಾಗಿ ಪ್ರತ್ಯೇಕ ನಿಗಾ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಗಿಯಾದ ಕಾನೂನು ಇದ್ದರೂ, ಒಂದಲ್ಲ ಒಂದು ಮಾರ್ಗದಲ್ಲಿ ಆಸೆಗಳನ್ನು ತೋರಿಸಿ, ಬ್ಲೇಡ್ ಕಂಪನಿಗಳು ಜನರಿಂದ ಕೋಟ್ಯಾಂತರ ರೂ. ಲೂಟಿ ಮಾಡುತ್ತಿವೆ. ಜನಸಾಮಾನ್ಯರಿಗೂ ಕಂಪನಿಗಳ ಬಗ್ಗೆ ತಿಳಿದಿದ್ದರೂ ದುರಾಸೆಯಿಂದ ತಾವು ಕಷ್ಟಪಟ್ಟು ದುಡಿದ ಹಣವನ್ನು ಸುರಿದು ಮೋಸಕ್ಕೆ ಒಳಗಾಗುತ್ತಾರೆ. ರಾಜ್ಯಾ ದ್ಯಂತ ಹೆಚ್ಚಿನ ಬಡ್ಡಿ ದರದ ಆಮಿಷವೊಡ್ಡಿ ಹಣ ಸಂಗ್ರಹಿ ಸುವ ಎಲ್ಲ ರೀತಿಯ ಚಟುವಟಿಕೆಗಳನ್ನು ಹತ್ತಿಕ್ಕುವುದು ಅನಿವಾರ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತ್ಯೇಕ ನಿಗಾ ಘಟಕ ಸ್ಥಾಪನೆಯಾಗಲಿದೆ ಎಂದರು. ಚೈನ್ ಲಿಂಕ್‍ನಂತಹ ವಹಿವಾಟುಗಳ ಮೇಲೂ ಹದ್ದಿನ ಕಣ್ಣಿಡುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದು ಮೋಸವೆಂದು ಗೊತ್ತಿದ್ದರೂ ಇದರಲ್ಲಿ ಭಾಗಿಯಾಗುವುದು ಅನಿವಾರ್ಯವೆನ್ನುವಂತಹ ಪರಿಸ್ಥಿತಿ ಯನ್ನು ಹಲವರು ಅನುಸರಿಸುತ್ತಿದ್ದಾರೆ ಎಂದರು.

ಹೆಚ್ಚಿನ ಬಡ್ಡಿಯ ಆಸೆಗೆ ಬಡ-ಮಧ್ಯಮ ವರ್ಗದವರು ಖಾಸಗಿಯವರ ಬಳಿ ಬಂಡವಾಳ ಹೂಡಿಕೆ ಮಾಡುತ್ತಿದ್ದು ಬಹುತೇಕ ಪ್ರಕರಣಗಳಲ್ಲಿ ಹಾಕಿದ ಬಂಡವಾಳವೂ ಅವರ ಕೈ ಸೇರದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ವಿಷಾದಿಸಿದರು.

ಮನೆ ಕುಸಿತಕ್ಕೆ ಪರಿಹಾರ ಮಾರ್ಗ ಸೂಚಿ ಬದಲು: ಇನ್ನು ಮಳೆಗೆ ಕುಸಿಯುವ ಮನೆಗಳಿಗೆ ಪರಿಹಾರ ನೀಡುವ ವಿಷಯ ದಲ್ಲಿ ಮಾರ್ಗಸೂಚಿಯನ್ನು ಬದಲಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಮಳೆಗೆ ಸಿಲುಕಿ ತಮ್ಮ ಮನೆ ಕುಸಿದಿದೆ ಎಂದು ಹಲವು ತಿಂಗಳುಗಳ ನಂತರ ಹೇಳುವವರು ಹೆಚ್ಚಿದ್ದಾರೆ. ಆದರೆ ಮಳೆಗೆ ಮನೆ ಕುಸಿದ ಕೂಡಲೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಗಮನಕ್ಕೆ ಅದು ಬರಬೇಕು ಮತ್ತು ಮಳೆಯಿಂದ ಮನೆ ಕಳೆದುಕೊಂಡವರು ಗರಿಷ್ಠ ಒಂದು ತಿಂಗಳ ಒಳಗಾಗಿ ಸರ್ಕಾರದ ಗಮನಕ್ಕೆ ತರಬೇಕು. ಹಾಗಾದಾಗ ಮಾತ್ರ ಸರ್ಕಾರ ಪರಿಹಾರ ಧನವನ್ನು ಒದಗಿಸುತ್ತದೆ ಎಂದರು. ಕಬಿನಿ ಅಣೆಕಟ್ಟಿನ ನಿರ್ಮಾಣ ಕಾರ್ಯದಿಂದ ಅರಣ್ಯದಲ್ಲಿದ್ದ ನೂರಾರು ಕುಟುಂಬಗಳು ನಿರಾಶ್ರಿತವಾಗಿದ್ದು, ಈ ಕುಟುಂಬಗಳಿಗೆ ಭೂಮಿ ನೀಡಲು 1070 ಎಕರೆ ಭೂಮಿಯನ್ನು ಅರಣ್ಯ ಪ್ರದೇಶದ ವ್ಯಾಪ್ತಿ ಯಿಂದ ಕಂದಾಯ ಇಲಾಖೆ ವ್ಯಾಪ್ತಿಗೆ ಪಡೆಯಲು ಸರ್ಕಾರ ಬಯಸಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕಬಿನಿ ನಿರಾಶ್ರಿತರಿಗೆ ಭೂಮಿ: ಕಬಿನಿ ಅಣೆಕಟ್ಟು ನಿರ್ಮಾ ಣದ ಸಮಯದಲ್ಲಿ ನಿರಾಶ್ರಿತರಾದವರಿಗೆ ಏಳು ನೂರು ಎಕರೆ ಭೂಮಿಯನ್ನು ಒದಗಿಸಲು ತೀರ್ಮಾನಿಸಲಾಯಿತು. ಆದರೆ ಆ ಭೂಮಿಯನ್ನು ಪಡೆದವರಿಗೆ ಅರಣ್ಯ ಇಲಾಖೆ ಇದುವರೆಗೆ ಪೆÇೀಡಿ ಮಾಡಿಕೊಡಲು ಒಪ್ಪಿಗೆ ನೀಡಿಲ್ಲ.
ಸದರಿ ಭೂಮಿಯನ್ನು ಅರಣ್ಯ ಪ್ರದೇಶದ ವ್ಯಾಪ್ತಿ ಯಿಂದ ಕೈ ಬಿಡದೆ ತಾವು ಪೆÇೀಡಿ ಮಾಡಿಕೊಡಲು ಬರುವುದಿಲ್ಲ ಎಂದು ಅರಣ್ಯ ಇಲಾಖೆ ಪಟ್ಟು ಹಿಡಿದಿದ್ದು, ಇತ್ತೀಚೆಗೆ ಆ ಭಾಗದಲ್ಲಿ ನಡೆಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಈಗಾಗಲೇ ನೀಡಿರುವ ಏಳುನೂರು ಎಕರೆ ಮತ್ತು ಬಾಕಿ ಉಳಿದ 378 ಎಕರೆ ಭೂಮಿಯನ್ನು 211 ಕುಟುಂಬಗಳಿಗೆ ನೀಡಲು ಇರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು. ಈಗಾಗಲೇ ಮಂಜೂರು ಮಾಡಿರುವ ಏಳುನೂರು ಎಕರೆ ಭೂಮಿಯನ್ನು ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಕೈ ಬಿಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಒಪ್ಪಿದ್ದಾರೆ. ಇದೇ ರೀತಿ ಮುನ್ನೂರಾ ಎಪ್ಪತ್ತು ಎಕರೆ ಭೂಮಿಯನ್ನು ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಕೈ ಬಿಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ವಿವರ ನೀಡಿದರು. ಸದರಿ ಭೂಮಿಗಾಗಿ ಜೇನುಕುರುಬರು ಮತ್ತು ಹಾಡಿಯ ಜನ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದು ಇತ್ತೀಚೆಗೆ ಒಬ್ಬಾತನ ಕೊಲೆಯೂ ಆಗಿದೆ ಮತ್ತು ಈ ಸಂಬಂಧ ಸಿಓಡಿ ತನಿಖೆ ನಡೆಸಲಾಗುತ್ತಿದೆ ಎಂದು ನುಡಿದರು.

ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವ ಕುರಿತು ಕಾನೂನಿಗೆ ತಿದ್ದುಪಡಿ ತರಲಾಗಿದ್ದು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಲಂಬಾಣಿ ತಾಂಡ ಕಂದಾಯ ಗ್ರಾಮ: ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದ್ದು,ಈ ಹಿನ್ನೆಲೆಯಲ್ಲಿ ಅವರಿಗೆ ತಾವಿರುವ ಜಾಗದ ಹಕ್ಕನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಸದ್ಯದಲ್ಲೇ ಯಾದಗಿರಿಯಲ್ಲಿ ಲಂಬಾಣಿ ಸಮಾವೇಶ ನಡೆಯಲಿದ್ದು,ಈ ಸಮಾವೇಶದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಕೋರಲಾಗಿದೆ ಎಂದರು.

Translate »