ಚಿತ್ರದುರ್ಗದಲ್ಲಿ ಜ.8ರಂದು ಕಾಂಗ್ರೆಸ್‍ನಿಂದ ಪರಿಶಿಷ್ಟರ ಐಕ್ಯತಾ ಸಮಾವೇಶ
News

ಚಿತ್ರದುರ್ಗದಲ್ಲಿ ಜ.8ರಂದು ಕಾಂಗ್ರೆಸ್‍ನಿಂದ ಪರಿಶಿಷ್ಟರ ಐಕ್ಯತಾ ಸಮಾವೇಶ

December 15, 2022

ಮೈಸೂರು, ಡಿ.14(ಆರ್‍ಕೆಬಿ)- ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜ.8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್‍ಸಿ-ಎಸ್‍ಟಿ ಬೃಹತ್ ಐಕ್ಯತಾ ಸಮಾವೇಶ ಆಯೋಜಿಸಲಾಗುವುದು. ಸಮಾವೇಶ ದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 5 ಲಕ್ಷಕ್ಕೂ ಅಧಿಕ ಜನರನ್ನು ಸಂಘಟಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಮಾವೇಶ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್ ಇಂದಿಲ್ಲಿ ತಿಳಿಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಐಕ್ಯತಾ ಸಮಾ ವೇಶ ನಡೆಸುವ ಸಂಬಂಧ ಈಗಾಗಲೇ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಬಹಳ ವರ್ಷಗಳ ನಂತರ ಇಂತಹ ಸಮಾವೇಶ ನಡೆಸಲಾಗುತ್ತಿದೆ. ಸಮಾ ವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆ ವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ಹಿರಿಯರಾದ ಬಿ.ಕೆ.ಹರಿಪ್ರಸಾದ್, ಎಂ.ಬಿ. ಪಾಟೀಲ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಅಲ್ಲದೆ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಅವರನ್ನು ಸಹ ಆಹ್ವಾನಿ ಸಲಾಗಿದ್ದು, ಈ ಮೂವರಲ್ಲಿ ಯಾರಾದರೂ ಒಬ್ಬರು ಸಮಾವೇಶದಲ್ಲಿ ಭಾಗವಹಿಸು ವಂತೆ ಕೋರಲಾಗಿದೆ.

ಪರಿಶಿಷ್ಟ ಸಮುದಾಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ದೃಷ್ಟಿಯಿಂದ ಈ ಸಮಾವೇಶ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಸಮಾವೇಶಕ್ಕೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಂದಲೂ ಜನರನ್ನು ಆಹ್ವಾನಿಸಿದ್ದೇವೆ. ಆಯಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ಮುಖಂಡರು ಎಸ್‍ಸಿ-ಎಸ್‍ಟಿ ಸಮುದಾಯದ ಹೆಚ್ಚು ಜನರನ್ನು ಕರೆತರುವ ಮೂಲಕ ಸಮಾವೇಶದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದರು. ಬರೀ ಜನ ಸೇರಿಸುವುದಷ್ಟೇ ಅಲ್ಲ, ಈ ಸಮಾವೇಶದಲ್ಲಿ ಪರಿಶಿಷ್ಟರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಪರಿಶಿಷ್ಟರಿಗೆ ಯಾವ ಸೌಲಭ್ಯ, ಯೋಜನೆಗಳನ್ನು ನೀಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಪರಿಶಿಷ್ಟರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ಸಮುದಾಯಗಳಿಗೆ 2018ರಲ್ಲಿ ಕಾಂಗ್ರೆಸ್ ಸರ್ಕಾರದ ಬಜೆಟ್‍ನಲ್ಲಿ 30,000 ಕೋಟಿ ತೆಗೆದಿಟ್ಟಿತ್ತು. ಆ ಹಣವನ್ನು ಖರ್ಚು ಮಾಡಿದ್ದಲ್ಲದೆ, ಹಣ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿದ್ದೆವು. ಅದರ ಪ್ರಕಾರ ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣವನ್ನು ಕಾರ್ಯಕ್ರಮಗಳಿಗೆ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ 3 ವರ್ಷದಲ್ಲಿ ಪರಿಶಿಷ್ಟರಿಗೆ ಬಜೆಟ್‍ನಲ್ಲಿ ಕಡಿಮೆ ಮಾಡಿದ್ದಾರೆ. ಈ ಸಮುದಾಯಗಳಿಗೆ ಬಜೆಟ್‍ನಲ್ಲಿ ನೀಡಬೇಕಾದ ಶೇ.24.1 ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಡಿಮೆ ಮಾಡಿದ್ದಾರೆ. ಪರಿಶಿಷ್ಟರ ಯೋಜನೆ, ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸಿ, 42,000 ಕೋಟಿ ಕೊಡಬೇಕಾದ ಕಡೆ 28,000 ಕೋಟಿ ಕೊಟ್ಟಿದ್ದಾರೆ. ಅಲ್ಲದೆ ಈ ಹಣವನ್ನು ಇತರೆ ಕಾರ್ಯಕ್ರಮಗಳಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ಸ್ಥಗಿತಗೊಳಿಸಿದ ಬಿಜೆಪಿ ಸರ್ಕಾರ: ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ನಿಲ್ಲಿಸಿದ್ದಾರೆ. ಪರಿಶಿಷ್ಟ 60 ಲಕ್ಷ ಶಾಲಾ ಮಕ್ಕಳಿಗೆ 14 ರಾಜ್ಯಗಳಲ್ಲಿ ಸ್ಕಾಲರ್ ಶಿಪ್ ಸ್ಥಗಿತಗೊಳಿಸಿದ್ದಾರೆ. ಮುಖ್ಯಮಂತ್ರಿ, ಇತ್ತೀಚೆಗೆ ಮೀಸಲಾತಿಗೆ ಸೇರ್ಪಡೆಯಾದ ಸಮುದಾಯಗಳಿಗೆ ಸ್ಕಾಲರ್‍ಶಿಪ್ ಕೊಡುತ್ತಿದ್ದಾರೆ. ಆದರೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಶಿಷ್ಟರಿಗೆ ನೀಡದೇ ವಂಚಿಸುತ್ತಿದ್ದಾರೆ ಎಂದು ದೂರಿದರು.

ಈ ಎಲ್ಲಾ ವಿಚಾರಗಳನ್ನು ಚಿತ್ರದುರ್ಗದಲ್ಲಿ ನಡೆಯುವ ಐಕ್ಯತಾ ಸಮಾವೇಶದಲ್ಲಿ ಸುದೀರ್ಘವಾಗಿ ಚರ್ಚಿಸಿ, ಬಿಜೆಪಿ ಸರ್ಕಾರದಿಂದ ಪರಿಶಿಷ್ಟರು ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಸಂದೇಶ ರವಾನಿಸಲಾಗುವುದು. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಎಲ್ಲಾ ಪರಿಶಿಷ್ಟರು ಒಗ್ಗಟ್ಟಾಗಬೇಕಿದೆ. ನಾವೆಲ್ಲಾ ಒಂದೆಡೆ ನಿಲ್ಲಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಬೇಕಾಗಿದೆ. ಪರಿಶಿಷ್ಟರಿಗೆ ಧೈರ್ಯ ತುಂಬುವ ಕೆಲಸ ನಾವು ಮಾಡಲಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪರ ನಿಲ್ಲಲು ಪರಿಶಿಷ್ಟರಿಗೆ ಮುನಿಯಪ್ಪ ಮನವಿ: ಮಾಜಿ ಸಚಿವ ಹಾಗೂ ಸಮಾವೇಶದ ಉಪಾಧ್ಯಕ್ಷ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಹೇಳಿದಂತೆ ಸಂವಿಧಾನಾತ್ಮಕವಾಗಿ ಈ ಸಮುದಾಯಗಳಿಗೆ ಸಮನಾಗಿ ಅನುದಾನ ಸದ್ವಿನಿಯೋಗ ಆಗಬೇಕು. ಯಾವ ಪಕ್ಷ ಪರಿಶಿಷ್ಟರಿಗಾಗಿ ಕೆಲಸ ಮಾಡುತ್ತದೆಯೋ ಆ ಪಕ್ಷದವರಿಗೆ ಈ ಸಮುದಾಯ ಬೆಂಬಲವಾಗಿ ನಿಲ್ಲುವ ಮೂಲಕ ತಮ್ಮ ಅಭಿವೃದ್ಧಿ ಕಾಣಬೇಕಾಗಿದೆ ಎಂದರು.

ಪರಿಶಿಷ್ಟರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಪರಿಶಿಷ್ಟರ ಐಕ್ಯತಾ ಸಮಾವೇಶಕ್ಕೆ ಐದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಈ ಸಮುದಾಯಗಳ ಹೆಚ್ಚು ಜನರು ಭಾಗವಹಿಸಬೇಕು. ಕಾಂಗ್ರೆಸ್ ಪಕ್ಷ ಪರಿಶಿಷ್ಟ ಸಮುದಾಯಗಳಿಗೆ ರೂಪಿಸಿರುವ ಯೋಜನೆಗಳು ಹಾಗೂ ಬಿಜೆಪಿ ಸರ್ಕಾರ ಪರಿಶಿಷ್ಟರಿಗೆ ವಂಚಿಸುತ್ತಿರುವ ಬಗ್ಗೆ ಸಮಾವೇಶದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಬಿಜೆಪಿಯವರು ಪರಿಶಿಷ್ಟರಿಗೆ ಮೀಸಲಾತಿ ನೀಡಿದ್ದು ನಾವೇ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ನಿಜಸ್ಥಿತಿ ಎಂದರೆ ಮೀಸಲಾತಿಗೆ ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್. ಇದನ್ನು ಬಿಜೆಪಿ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಪರಿಶಿಷ್ಟರ ಹಾದಿ ತಪ್ಪಿಸುವ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಚಿವೆ ಮಲ್ಲಾಜಮ್ಮ, ಕಾಂಗ್ರೆಸ್ ಎಸ್‍ಸಿ ಘಟಕದ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರ್‍ನಾಥ್, ಶಾಸಕರಾದ ಹೆಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮ ಶೇಖರ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »