ವಯಸ್ಸಾದವರಿಗೆ ಸಹಾಯ ಮಾಡುವ ಸೋಗಿನಲ್ಲಿ ಅವರ ಎಟಿಎಂ ಕಾರ್ಡ್ ಕದ್ದು ಭಾರೀ ವಂಚನೆ ಮೈಸೂರು ಖದೀಮ ಚಿಕ್ಕಬಳ್ಳಾಪುರದಲ್ಲಿ ಬಂಧನ
News

ವಯಸ್ಸಾದವರಿಗೆ ಸಹಾಯ ಮಾಡುವ ಸೋಗಿನಲ್ಲಿ ಅವರ ಎಟಿಎಂ ಕಾರ್ಡ್ ಕದ್ದು ಭಾರೀ ವಂಚನೆ ಮೈಸೂರು ಖದೀಮ ಚಿಕ್ಕಬಳ್ಳಾಪುರದಲ್ಲಿ ಬಂಧನ

December 15, 2022

ಚಿಕ್ಕಬಳ್ಳಾಪುರ, ಡಿ. 14- ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಎಟಿಎಂ ಕಾರ್ಡ್ ಲಪಟಾಯಿಸಿ, ಹಣ ಡ್ರಾ ಮಾಡಿ ಕೊಂಡು ವಂಚಿಸುತ್ತಿದ್ದ ಮೈಸೂರು ಮೂಲದ ಖದೀಮನನ್ನು ಬಂಧಿಸಿ, 14 ಎಟಿಎಂ ಕಾರ್ಡ್, ಹಾಗೂ 2.46 ಲಕ್ಷ ರೂ. ವಶಪಡಿಸಿ ಕೊಳ್ಳುವಲ್ಲಿ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಆಲನಹಳ್ಳಿ ಗಿರಿದರ್ಶಿನಿ ಬಡಾವಣೆ ನಿವಾಸಿ ಬಿ.ಕೆ.ಕಿರಣ್‍ಕುಮಾರ್ (32) ಬಂಧಿತ ಖದೀಮನಾಗಿದ್ದು, ಎಟಿಎಂ ಕೇಂದ್ರಗಳಲ್ಲಿ ಅಮಾಯಕರನ್ನು ವಂಚಿಸು ವುದನ್ನೇ ಈತ ವೃತ್ತಿಯಾಗಿಸಿಕೊಂಡಿದ್ದು, ಇಂತಹ ಪ್ರಕರಣಗಳಲ್ಲಿ ಈಗಾಗಲೇ ಕೊಡಗು, ಕುಮಟ, ಶಿರಾಳಕೊಪ್ಪ, ಉಡುಪಿ, ಹಡಿಯಾಲ ಮತ್ತು ಮುಂಗೋಡು ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿ ದ್ದಾನೆ. 8 ವಂಚನೆಗಳು ವಿವಿಧ ನ್ಯಾಯಾ ಲಯಗಳಲ್ಲಿ ಈತನ ವಿರುದ್ಧ ವಿಚಾರಣೆ ಹಂತದಲ್ಲಿದೆ. ಕಳೆದ ಮೇ 27ರಂದು ಚಿಕ್ಕಬಳ್ಳಾಪುರ ತಾಲೂಕು ಸೂಲಿಗುಂಟೆ ಗ್ರಾಮದ ರೆಡ್ಡಪ್ಪ ಎಂಬುವರು ಚಿಕ್ಕಬಳ್ಳಾ ಪುರ ನಗರ ಬಿಬಿ ರಸ್ತೆಯ ಅಯ್ಯಪ್ಪ ದೇವಸ್ಥಾನದ ಎದುರಿನಲ್ಲಿರುವ ಎಸ್‍ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿ ದ್ದಾರೆ. ಅವರಿಗೆ ಸಹಾಯ ಮಾಡುವ ನೆಪದಲ್ಲಿ ಖದೀಮ ಅವರ ಎಟಿಎಂ ಕಾರ್ಡ್ ಬದಲಿಸಿ ಬೇರೆ ಕಾರ್ಡನ್ನು ಅವರಿಗೆ ನೀಡಿದ್ದ. ಅಲ್ಲದೇ ಅವರ ಕಾರ್ಡ್ ಮೂಲಕ 1.60 ಲಕ್ಷ ರೂ.ಗಳನ್ನು ಡ್ರಾ ಮಾಡಿ ಕೊಂಡಿದ್ದ. ಈ ವಿಚಾರ ತಿಳಿದ ನಂತರ ರೆಡ್ಡಪ್ಪ ಅವರು ಜುಲೈ 4ರಂದು ಚಿಕ್ಕ ಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಚಿಕ್ಕಬಳ್ಳಾಪುರ ಡಿವೈಎಸ್ಪಿ ವಿ.ಕೆ. ವಾಸುದೇವ್ ಅವರು ಇನ್ಸ್‍ಪೆಕ್ಟರ್ ಬಿ. ರಾಜು ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು. ಎಟಿಎಂ ಕೇಂದ್ರಗಳ ಬಳಿ ಮಫ್ತಿಯಲ್ಲಿ ಪೊಲೀಸರು ನಿಗಾ ವಹಿಸಿದ್ದರು. ಅಲ್ಲದೇ, ಕೆಲಸ ಹಿರಿಯ ನಾಗರಿಕರು ಹಣ ಡ್ರಾ ಮಾಡಲು ಬಂದಾಗ ಎಟಿಎಂ ಕೇಂದ್ರಕ್ಕೆ ಬೇರೆ ಯಾರಾದರೂ ಹೋಗುತ್ತಾರೆಯೇ ಎಂಬುದರ ಬಗ್ಗೆಯೂ ಗಮನ ಹರಿಸಿದ್ದರು.

ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ರಸ್ತೆಯ ಚಾಮರಾಜಪೇಟೆ ಕ್ರಾಸ್‍ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಹಿರಿಯ ನಾಗರಿಕರೊಬ್ಬರು ಹಣ ಡ್ರಾ ಮಾಡಲು ಹೋದಾಗ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮೈಸೂರಿನ ಬಿ.ಕೆ. ಕಿರಣ್‍ಕುಮಾರ್‍ನನ್ನು ವಶಕ್ಕೆ ಪಡೆದು ಶೋಧಿಸಿದಾಗ ಆತನ ಬಳಿ ವಿವಿಧ ಬ್ಯಾಂಕ್‍ಗಳ 14 ಎಟಿಎಂ ಕಾರ್ಡ್‍ಗಳು ದೊರೆತಿವೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಎಟಿಎಂ ಕಾರ್ಡ್ ಲಪಟಾಯಿಸಿ, ವಂಚಿಸಿರುವ 8 ಪ್ರಕರಣಗಳು ಆತನ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವುದು ಗೊತ್ತಾಗಿದೆ.

ಈತ ಚಿಕ್ಕಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ 2, ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ 2, ದಾವಣಗೆರೆ ಜಿಲ್ಲೆ ಬಸವನಗರ ಠಾಣೆ, ರಾಮನಗರದ ಐಗೂರು, ಯಾದಗಿರಿ, ಕೊಳ್ಳೇಗಾಲ, ಜಗಳೂರು, ಗದಗ ಮತ್ತು ಜಮಖಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳನ್ನು ಎಸಗಿರುವುದು ಗೊತ್ತಾಗಿದೆ. ಈತ ಹಿರಿಯ ನಾಗರಿಕರು ಹಾಗೂ ಅಮಾಯಕರನ್ನೇ ಗುರಿಯನ್ನಾಗಿಟ್ಟುಕೊಂಡು ಕೃತ್ಯ ಎಸಗುತ್ತಿದ್ದ, ಯಾರಾದರೂ ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಹೋದರೆ ಈತನೂ ಒಳಹೊಕ್ಕಿ ಅವರು ಎಟಿಎಂ ಪಿನ್ ನಮೂದಿ ಸುವಾಗ ಅದನ್ನು ತನ್ನ ಮೊಬೈಲ್‍ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಎಲ್ಲಾ ಬ್ಯಾಂಕ್‍ಗಳ ಎಟಿಎಂ ಕಾರ್ಡ್‍ಗಳನ್ನು ಹೊಂದಿದ್ದ ಈತ ಕ್ಷಣಮಾತ್ರದಲ್ಲಿ ಅವರು ಬಳಸುವಂತಹ ಕಾರ್ಡ್ ಅನ್ನು ಜೇಬಿನಿಂದ ತೆಗೆದುಕೊಂಡು, ಅವರು ಎಟಿಎಂನಿಂದ ಹಣ ಡ್ರಾ ಮಾಡಿ ಎಣಿಸುತ್ತಿದ್ದ ವೇಳೆ ಕಾರ್ಡ್ ಅನ್ನು ಬದಲಾಯಿಸಿ ಬಿಡುತ್ತಿದ್ದ. ನಂತರ ಆ ಕಾರ್ಡ್ ಅನ್ನು ಬಳಸಿ ಹಣ ಡ್ರಾ ಮಾಡಿಕೊಂಡು ಸದರಿ ಕಾರ್ಡ್ ಬ್ಲಾಕ್ ಆದ ಬಳಿಕ ಅದೇ ಕಾರ್ಡ್ ಅನ್ನು ಬೇರೆಯವರನ್ನು ವಂಚಿಸಲು ಉಪಯೋಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಎಟಿಎಂನಲ್ಲಿ ಹಣ ಡ್ರಾ ಮಾಡಲು ಗೊತ್ತಿಲ್ಲದ ಅಮಾಯಕರು ಹಾಗೂ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಕಾರ್ಡ್‍ಗಳನ್ನು ಎಗರಿಸಿ, ಬೇರೆ ಕಾರ್ಡ್ ಅವರಿಗೆ ಕೊಟ್ಟು ನಂತರ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ಎಟಿಎಂ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಇರುವುದರಿಂದ ಈತ ಒಂದು ಊರಿನಲ್ಲಿ ಒಂದು ಅಥವಾ ಎರಡು ಕೃತ್ಯ ಎಸಗಿದ ನಂತರ ಅಲ್ಲಿಂದ ಜಾಗ ಖಾಲಿ ಮಾಡಿ ಬೇರೆ ಊರಿಗೆ ಹೋಗಿ ತನ್ನ ಕೃತ್ಯ ಮುಂದುವರೆಸುತ್ತಿದ್ದ ನಾಲ್ಕೈದು ತಿಂಗಳ ನಂತರ ಮತ್ತೆ ಅದೇ ಊರಿಗೆ ಬರುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಸೇರಿದರೆ ಸುಲಭವಾಗಿ ಜಾಮೀನು ಪಡೆದು ಮತ್ತೆ ಎಟಿಎಂ ಕೇಂದ್ರಗಳಲ್ಲಿ ಕೈವರಸೆ ತೋರಿಸುತ್ತಿದ್ದ ಎಂಬುದು ವಿಚಾರಣೆಗ ವೇಳೆ ತಿಳಿದುಬಂದಿದೆ. ಖದೀಮ ಕಿರಣ್‍ಕುಮಾರ್ ಬಂಧನ ಕಾರ್ಯಾಚರಣೆಯಲ್ಲಿ ಚಿಕ್ಕಬಳ್ಳಾಪುರ ಡಿವೈಎಸ್ಪಿ ವಿ.ಕೆ. ವಾಸುದೇವ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಬಿ. ರಾಜು, ಸಬ್‍ಇನ್ಸ್‍ಪೆಕ್ಟರ್ ಕೆ. ಪ್ರದೀಪ್ ಪೂಜಾರಿ, ಸಿಬ್ಬಂದಿಗಳಾದ ರವಿಕುಮಾರ್, ವಿಜಯಕುಮಾರ್, ಮಧುಕುಮಾರ್, ರಾಮ-ಲಕ್ಷ್ಮಣ್, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

Translate »