ಕಾರ್ಮಿಕರು ಸಂಘಟಿತರಾಗದಿದ್ದರೆ ಸರ್ಕಾರಿ ಸವಲತ್ತು ಪಡೆಯುವುದು ಅಸಾಧ್ಯ: ರಂಗರಾಜು
ಮೈಸೂರು

ಕಾರ್ಮಿಕರು ಸಂಘಟಿತರಾಗದಿದ್ದರೆ ಸರ್ಕಾರಿ ಸವಲತ್ತು ಪಡೆಯುವುದು ಅಸಾಧ್ಯ: ರಂಗರಾಜು

January 12, 2021

ಮೈಸೂರು, ಜ.11(ಎಸ್‍ಪಿಎನ್)- ಅಸಂಘಟಿತ ವಲಯದ ಕಾರ್ಮಿಕರು ಸಂಘಟಿತರಾಗದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮೈಸೂರು ನಗರದ ಕುಟುಂಬ ಪ್ರಭೋಧನ ಸಂಯೋಜಕ ಎಸ್.ಎಲ್.ರಂಗರಾಜು ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಆರ್‍ಎಸ್‍ಎಸ್ ಕಾರ್ಯಾಲಯ `ಮಾಧವ ಕೃಪ’ದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಮೈಸೂರು ಜಿಲ್ಲಾ ಮತ್ತು ನಗರ ಘಟಕ ಹಾಗೂ ಮೈಸೂರು ಜಿಲ್ಲಾ ಮತ್ತು ನಗರ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ `ಶ್ರೀ ದತ್ತೋಪಂತ್ ಠೇಂಗಡಿ ಜನ್ಮಶತಾಬ್ದಿ ಆಚರಣೆ’ ಮತ್ತು `2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ದತ್ತೋಪಂತ್ ಠೇಂಗಡಿ ಅವರು ಖ್ಯಾತ ವಕೀಲರು, ಸಂಘದ ಹಿರಿಯ ಸದಸ್ಯರಾಗಿ ಅಸಂಘಟಿತ ಕಾರ್ಮಿಕರ ಸಂಘಟನೆಗೆ ಶ್ರಮಿಸಿದರು. ಶಾಲಾ ದಿನಗಳಲ್ಲಿ ಜನರ ನಡುವೆ ಇದ್ದು ಸಂಘಟನಾ ಚತುರತೆ ತೋರಿದ್ದರು. ನಂತರ ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗವಹಿಸಿದ್ದರು. 1936-38ರವರೆಗೆ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸದಸ್ಯರಾಗಿ, 1950-51ನೇ ಸಾಲಿನಲ್ಲಿ ಭಾರತ ರಾಷ್ಟ್ರೀಯ ಟ್ರೇಡ್ ಯೂನಿಯನ್‍ಗೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಂತರ ಅಂಚೆ ಮತ್ತು ರೈಲ್ವೆ ವರ್ಕರ್ಸ್ ಯೂನಿಯನ್‍ನಲ್ಲೂ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಅಸಂಘಟಿತರು, ಬಡವರು, ಕೃಷಿಕರು ಹಾಗೂ ಬಡವರ ಏಳಿಗೆಗಾಗಿ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದ ಠೇಂಗಡಿ, ಭಾರತೀಯ ಮಜ್ದೂರ್ ಸಂಘ (1955), ಭಾರ ತೀಯ ಕಿಸಾನ್ ಸಂಘ (1979), ಸ್ವದೇಶಿ ಜಾಗರಣ್ ಮಂಚ್ (1991), ಸಾಮಾಜಿಕ್ ಸಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್, ಪರ್ಯಾವರಣ್ ಮಂಚ್ ಇತ್ಯಾದಿ ಸಂಸ್ಥೆಗಳ ಮೂಲಕ ಅಸಂಘಟಿತ ಕಾರ್ಮಿಕರು, ಬಡವರ ಅಭಿವೃದ್ಧಿಗೆ ಕೆಲಸ ಶ್ರಮಿಸಿದ್ದರು ಎಂದರು. ಈ ವೇಳೆ ಅಖಿಲ ಭಾರತ ಕನ್ಸ್‍ಟ್ರಕ್ಷನ್ ಮಜ್ದೂರ್ ಮಹಾಸಂಘ ಅಧ್ಯಕ್ಷ ಸಿ.ಟಿ.ಪಾಟೀಲ್, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಮಹಾ ಸಂಘದ ಗೌರವಾಧ್ಯಕ್ಷ ಸಿದ್ದರಾಜು, ಅಧ್ಯಕ್ಷ ಚಿಂತಾ ಮಣಿ ಕೋಡಹಳ್ಳಿ, ಜಿಲ್ಲಾಧ್ಯಕ್ಷ ಎನ್.ಚಂದ್ರು, ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ನಾಗೇಶ್, ನಗರಾಧ್ಯಕ್ಷ ಬಿ.ಜಗದೀಶ್, ನಗರ ಕಾರ್ಯದರ್ಶಿ ಬಿ.ಚಂದನ್ ಉಪಸ್ಥಿತರಿದ್ದರು.

 

 

Translate »