ಉತ್ತರ ಪ್ರದೇಶದ ಬದೌನ್ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪ್ರತಿಭಟನೆ
ಮೈಸೂರು

ಉತ್ತರ ಪ್ರದೇಶದ ಬದೌನ್ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪ್ರತಿಭಟನೆ

January 12, 2021

ಮೈಸೂರು,ಜ.11(ಪಿಎಂ)-ಉತ್ತರಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆಗೈದ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬದೌನ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಮಾತ್ರವಲ್ಲದೆ, ಆಕೆಗೆ ಚಿತ್ರಹಿಂಸೆ ನೀಡಿ, ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದ ಅರ್ಚಕ ಸೇರಿದಂತೆ ಮೂವರು ಈ ಕೃತ್ಯ ನಡೆಸಿದ್ದಾರೆ. ಅತ್ಯಾಚಾರ ನಡೆಸಿ, ಆಕೆಯ ಮೇಲೆ ಘೋರ ರೀತಿ ಹಲ್ಲೆ ನಡೆಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಧಾರ್ಮಿಕತೆ ಹೆಸರಿನಲ್ಲಿ ಮತ್ತು ಅವರ ಬಗ್ಗೆ ಹೆಮ್ಮೆಪಡುವ ಆಡಳಿತವಿರುವ ರಾಜ್ಯದಲ್ಲಿ ದೇವಾಲಯಗಳೇ ಅಪರಾಧ ಗಳ ತಾಣವಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆಡಳಿತವನ್ನು ರಕ್ಷಿಸಲು ಎಫ್‍ಐಆರ್ ದಾಖಲಿಸಲು ಹಿಂದೇಟು ಹಾಕಿದ್ದು, ಅಲ್ಲಿನ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತೆಯ ಕುಟುಂಬಸ್ಥರ ಆಗ್ರಹಕ್ಕೆ ಮನ್ನಣೆ ನೀಡದೇ ಅಪರಾಧಿಗಳು ಪರಾರಿಯಾಗಲು ಅವಕಾಶ ನಿಡಲಾಗಿದೆ ಎಂದು ಆರೋಪಿಸಿದರು. ಸಂಘಟನೆ ಮುಖಂಡರಾದ ಡಾ.ರತಿರಾವ್, ಪ್ರೊ.ಲತಾ ಬಿದ್ದಪ್ಪ, ಶ್ರೀದೇವಿ, ಪಿ.ಎಸ್. ಸಂಧ್ಯಾ, ಸೀಮಾ, ಪ್ರೊ.ಕಾಳಚೆನ್ನೇಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Translate »