ಮೈಸೂರು, ಜು.26(ಆರ್‍ಕೆಬಿ)- ವಿಧಾನ ಪರಿಷತ್ತಿಗೆ ನನ್ನ ನಾಮನಿರ್ದೇಶನದ ಬಗ್ಗೆ ಕಾನೂನು ತೊಡಕಿದ್ದರೆ ಅದಕ್ಕೆ ರಾಜ್ಯಪಾಲರೇ ಉತ್ತರ ಕೊಡುತ್ತಾರೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಆತ ನನ್ನ ಸಮವೂ ಅಲ್ಲ… ಪ್ರತಿಸ್ಪರ್ಧಿಯೂ ಅಲ್ಲ… ಹೀಗಾಗಿ ಆತನ ಬಗ್ಗೆ ನಾನು ಏನೊಂದೂ ಮಾತನಾಡುವುದಿಲ್ಲ ಎಂದು ಹೇಳಿದರು.
ಎಲ್ಲವನ್ನೂ ಟೀಕೆ ಮಾಡುವುದು ಸರಿಯಲ್ಲ. ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಒಂದಾದರೂ ಒಳ್ಳೆಯ ಕೆಲಸ ಮಾಡಿಲ್ಲವೇ? ಎಂದು ಪ್ರಶ್ನಿಸಿದ ಅವರು, ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವುದು ಆತನಿಗೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ವರ್ಷದಲ್ಲಿ ಯಾವೊಂದು ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲವೇ. ಏನಾದರೂ ಒಳ್ಳೆಯ ಕೆಲಸ ಮಾಡಿದ್ದರೆ ಅದನ್ನು ಹೇಳಲಿ. ಅದು ಬಿಟ್ಟು ಟೀಕೆ ಮಾಡಲಿಕ್ಕಾಗಿಯೇ ಟೀಕಿಸುವುದು ಸರಿಯಲ್ಲ. ವಿರೋಧ ಪಕ್ಷಗಳ ನಿಲುವು ದ್ವಂದ್ವದಿಂದ ಕೂಡಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಒಂದು ವರ್ಷ ಪೂರೈಸಿರುವ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೋವಿಡ್-19 ನುಂಗಿ ಹಾಕಿದೆ. ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಇಂತಹ ಒಂದು ಉತ್ತಮ ಸರ್ಕಾರ ಅಧಿಕಾರಕ್ಕೆ ತಂದೆವಲ್ಲ ಎಂಬ ಹೆಮ್ಮೆ ನನಗಿದೆ. ಸರ್ಕಾರದ ವರ್ಷದ ಸಾಧನೆಯ ಸಾರ್ಥಕತೆ ನನಗಿದೆ ಎಂದರು.