ಸಚಿವರು, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಪುರಾವೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ
News

ಸಚಿವರು, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಪುರಾವೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ

August 25, 2022

ಬೆಂಗಳೂರು, ಆ.24(ಕೆಎಂಶಿ)- ಭ್ರಷ್ಟಾಚಾರದ ಪುರಾವೆ, ದಾಖಲೆಗಳಿದ್ದರೆ, ಸಂಬಂಧಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, 40% ಕಮಿಷನ್ ಆರೋಪಕ್ಕೆ ಸಂಬಂಧಿ ಸಿದಂತೆ ಚರ್ಚೆ ನಡೆಸಿ, ಹೇಳಿಕೆ ನೀಡಿದ ನಂತರ ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರು ಶಾಸನಬದ್ಧವಾದ ತನಿಖಾ ಸಂಸ್ಥೆಗೆ ಯಾವುದೇ ಆರೋಪಗಳಿದ್ದರೂ, ದೂರು ನೀಡಬಹುದು.

ಹೈಕೋರ್ಟ್ ಆದೇಶದ ನಂತರ ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಅಧಿಕಾರ ನೀಡಲಾಗಿದೆ. ಅದೊಂದು ಸ್ವಾಯತ್ತ ಸಂಸ್ಥೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪುರಾವೆಗಳಿದ್ದರೆ ದೂರು ನೀಡಿ, ತಪ್ಪಿತಸ್ಥರಾಗಿದ್ದರೆ ಅಂತಹವರಿಗೆ ಶಿಕ್ಷೆ ಖಚಿತ ಎಂದರು. ಕೆಂಪಣ್ಣ ಅವರ ಬಗ್ಗೆ ಕಿಡಿಕಾರಿದ ಮುಖ್ಯಮಂತ್ರಿಗಳು, ಇವರು ಗುತ್ತಿಗೆದಾರರ ಒಂದು ಸಂಘದ ಅಧ್ಯಕ್ಷರು, ಇಂತಹ ಹಲವು ಸಂಘಗಳಿವೆ. ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ನೀಡಿರುವ ಹೇಳಿಕೆಗೆ ನಾವು ಏನು ಅನ್ನುವುದು.

ಅವರು ಈಗಾಗಲೇ ನಮ್ಮನ್ನು ಭೇಟಿ ಮಾಡಿ, ಪರ್ಸೆಂಟೇಜ್‍ಗೆ ಕಡಿವಾಣ ಹಾಕುವುದಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಗಳನ್ನು ಜಾರಿಗೆ ತರಲಾಗಿದೆ. ಇನ್ನೂ ಯಾವುದಾದರೂ ಸಲಹೆಗಳಿದ್ದರೆ ನೀಡಲಿ. ಅದನ್ನೂ ಸರಿಪಡಿಸುತ್ತೇವೆ.

ರಾಜಕೀಯ ಪ್ರೇರಿತ, ಉದ್ದೇಶಪೂರ್ವಕವಾಗಿ ಆರೋಪ ಮಾಡಿದರೆ ಅದಕ್ಕೆ ಬೆಲೆ ಇಲ್ಲ. ಅವರ ಬಳಿ ಪುರಾವೆ ಮತ್ತು ದಾಖಲೆಗಳಿದ್ದರೆ, ಈಗ ಎಸಿಬಿ ಮುಂದೆ ಅಲ್ಲ, ಲೋಕಾಯುಕ್ತದ ಮುಂದೆ ದೂರು ನೀಡಲಿ ಎಂದರು. ಈ ಹಿಂದೆ ಗುತ್ತಿಗೆದಾರ ರಿಂದ ಆರೋಪ ಕೇಳಿ ಬಂದ ನಂತರ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು ಹೀಗಾಗಿ ಎಲ್ಲಾ ವ್ಯವಹಾರಗಳನ್ನು ಅದು ಪರಿಶೀಲಿಸಲಿದೆ ಎಂದು ವಿವರ ನೀಡಿದರು. ಈ ರೀತಿ ವಿನಾಕಾರಣ ಆರೋಪ ಮಾಡುವ ಬದಲು ನಿರ್ದಿಷ್ಟ ಪ್ರಕರಣಗಳಿದ್ದರೆ ಹೇಳಲಿ,ಅದನ್ನು ಬಿಟ್ಟು ಏನೋ ಹೇಳಿದರೆ ಅದಕ್ಕೆ ತೂಕ ಬರುವುದಿಲ್ಲ ಎಂದರು. ಕಮಿಷನ್ ಆರೋಪ ಕುರಿತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಗುತ್ತಿಗೆದಾರರ ಸಂಘ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು,ದೇಶದ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ.ಆದರೆ ದೂರು ನೀಡುವಾಗ ಸಾಮಾನ್ಯ ಹೇಳಿಕೆ ಸಾಲದು,ನಿರ್ದಿಷ್ಟ ಪ್ರಕರಣದ ದಾಖಲೆ ಬೇಕು ಎಂದರು.

Translate »