ಕೆಆರ್‍ಎಸ್‍ನಲ್ಲಿ ಸುರಕ್ಷತೆ ಅನುಮಾನ; ಸಿಸಿ ಟಿವಿ ಕ್ಯಾಮರಾಗಳು ಕೆಟ್ಟಿವೆ, ಲೈಟ್‍ಗಳು, ಮೆಟಲ್  ಡಿಟೆಕ್ಟರ್‍ಗಳು, ಲಗೇಜ್ ಸ್ಕ್ಯಾನರ್‍ಗಳು ಹಾಳಾಗಿವೆ
ಮಂಡ್ಯ

ಕೆಆರ್‍ಎಸ್‍ನಲ್ಲಿ ಸುರಕ್ಷತೆ ಅನುಮಾನ; ಸಿಸಿ ಟಿವಿ ಕ್ಯಾಮರಾಗಳು ಕೆಟ್ಟಿವೆ, ಲೈಟ್‍ಗಳು, ಮೆಟಲ್ ಡಿಟೆಕ್ಟರ್‍ಗಳು, ಲಗೇಜ್ ಸ್ಕ್ಯಾನರ್‍ಗಳು ಹಾಳಾಗಿವೆ

August 26, 2022

ಶ್ರೀರಂಗಪಟ್ಟಣ, ಆ.25(ವಿನಯ್ ಕಾರೇಕುರ)- ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ತಾಲೂ ಕಿನ ಪ್ರಸಿದ್ಧ ಕೆಆರ್‍ಎಸ್ ಜಲಾಶಯಕ್ಕೆ ಸೂಕ್ತ ಭದ್ರತೆ ಇಲ್ಲದಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಮಂಡ್ಯ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಪೂರೈಸುವ ಮೂಲಕ ಕೋಟ್ಯಾಂತರ ಜನರಿಗೆ ಆಸರೆಯಾಗಿರುವ ಕೆಆರ್‍ಎಸ್ ಜಲಾ ಶಯದಲ್ಲಿ ಇತ್ತೀಚಿನ ದಿನಗಳಲ್ಲಿ ಭದ್ರತೆ ಮರೀಚಿಕೆ ಯಾಗಿದ್ದು, ಆಡಳಿತ ವರ್ಗ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

1994ರಲ್ಲಿ ಶ್ರೀಲಂಕಾದ ಉಗ್ರ ಸಂಘಟನೆ ಎಲ್‍ಟಿಟಿಇ ಜಲಾಶಯ ಸ್ಫೋಟಿಸುವುದಾಗಿ ಬೆದರಿಕೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಅತೀ ಸೂಕ್ಷ್ಮ ಪ್ರದೇಶ ವೆಂದು ಘೋಷಿಸಿ, ಸರ್ಕಾರ ಜಲಾಶಯಕ್ಕೆ ಭಾರೀ ಭದ್ರತೆ ಒದಗಿಸಿತ್ತು. ಅಲ್ಲದೇ ರಾಜ್ಯದಲ್ಲಿ ಎಲ್ಲೇ ಬೆದರಿಕೆ ಎದುರಾದರೂ ಜಲಾಶಯದÀಲ್ಲಿ ಕಟ್ಟೆಚ್ಚರ ವಹಿಸಲಾ ಗುತ್ತಿತ್ತು. ಅಲ್ಲದೇ ಕಳೆದ 4 ವರ್ಷಗಳ ಹಿಂದೆ ಜಲಾ ಶಯದ ಭದ್ರತೆಗಾಗಿ ಸಿ.ಸಿ.ಕ್ಯಾಮರಾ ಕೂಡ ಅಳವಡಿ ಸಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನರ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಅವುಗಳೆಲ್ಲಾ ಈಗ ಕೆಲಸಕ್ಕೆ ಬಾರದವುಗಳಾಗಿವೆ.

ಸಿ.ಸಿ.ಕ್ಯಾಮರಾ, ಮೆಟಲ್ ಡಿಟೆಕ್ಟರ್ ಸ್ಥಗಿತ: ಭದ್ರತಾ ದೃಷ್ಟಿಯಿಂದ ಜಲಾಶಯದಲ್ಲಿ ಅಳವಡಿ ಸಿದ್ದ 80 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಕಳೆದ 6 ತಿಂಗಳಿಂದ ಕೆಟ್ಟು ನಿಂತಿವೆ. ಅಲ್ಲದೇ ಇವುಗಳ ಕಾರ್ಯ ನಿರ್ವಹಣೆಗಾಗಿ ಅಳವಡಿಸಲಾಗಿದ್ದ ಬ್ಯಾಟರಿಗಳು ಸಿಡಿಲು ಬಡಿದು ಸುಟ್ಟು ಹೋಗಿ ದ್ದರೂ, ನೀರಾವರಿ ಇಲಾಖೆ
ಅಧಿಕಾರಿಗಳು ದುರಸ್ಥಿಗೆ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ. ಜಲಾಶಯದ ಭದ್ರತೆಗಾಗಿ ಕಾವೇರಿ ನೀರಾವರಿ ನಿಗಮದಿಂದ ನೀಡಲಾಗಿದ್ದ 19 ಮೆಟಲ್ ಡಿಟೆಕ್ಟರ್‍ಗಳ ಪೈಕಿ ಪ್ರಸ್ತುತ ಒಂದೇ ಒಂದು ಸುಸ್ಥಿತಿಯಲ್ಲಿದ್ದು, ಉಳಿದ 18 ಮೆಟಲ್ ಡಿಟೆಕ್ಟರ್‍ಗಳು ಕೆಟ್ಟು ಹೋಗಿವೆ. ಪ್ರಸ್ತುತ ಕೃಷ್ಣರಾಜಸಾಗರ ಅಣೆಕಟ್ಟೆ ಭದ್ರತೆ ಸ್ಥಿತಿ ನೋಡಿದರೆ ಆತಂಕವಾಗುತ್ತದೆ. ತುರ್ತಾಗಿ ಸಿಸಿ ಕ್ಯಾಮರಾ ರಿಪೇರಿ, ನೂತನ ಮೆಟಲ್ ಡಿಟೆಕ್ಟರ್ ಒದಗಿಸುವಂತೆ ಮನವಿ ಮಾಡಿದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಕಗ್ಗತ್ತಲಲ್ಲಿ ಕೆಆರ್‍ಎಸ್ ಜಲಾಶಯ: ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಕೆಆರ್‍ಎಸ್ ಜಲಾಶಯದಲ್ಲಿ ಅಲ್ಲಲ್ಲಿ ಕಗ್ಗತ್ತಲಿದೆ. ಜಲಾಶಯದ ಮೇಲ್ಬಾಗದಲ್ಲಿ ಅಳವಡಿಸಿದ್ದ ಕೆಲ ಬಲ್ಬ್‍ಗಳು ಒಡೆದು ಹಾಳಾಗಿ ಹೋಗಿವೆ. ನಾರ್ಥ್ ಗಾರ್ಡನ್ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳು ಕೆಟ್ಟು ನಿಂತಿವೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಜಲಾಶಯದ ಭದ್ರತಾ ಸಿಬ್ಬಂದಿ ಒಂದೆಡೆ ಕೈಕಟ್ಟಿ ಕೂರುವಂತಾಗಿದೆ.

ಉಗ್ರ ಸಂಘಟನೆಗಳ ಟಾರ್ಗೆಟ್ ಆಗಿರುವ ಕೆಆರ್‍ಎಸ್‍ಗೆ 3 ಪ್ರವೇಶ ದ್ವಾರಗಳಿದ್ದು, 2016 ರವರೆಗೆ ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿತ್ತು. ಬಳಿಕ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ(ಕೆಎಸ್‍ಐಎಸ್‍ಎಫ್)ಯ 74 ಮಂದಿ ಸಿಬ್ಬಂದಿ ಹಾಕಲಾಗಿದೆ. ಈ ಪೈಕಿ 68 ಮಂದಿ ಜಲಾಶಯದ ವಿವಿಧೆಡೆ ಎಸ್‍ಎಲ್‍ಆರ್ ಗನ್ ಹಿಡಿದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗೆ 3ರಿಂದ 4 ಬುಲೆಟ್ ಪ್ರೂಫ್ ಜಾಕೆಟ್ ನೀಡಲಾಗಿದೆ. ಒಂದೇ ಒಂದು ಮೆಟಲ್ ಡಿಟೆಕ್ಟರ್ ಕಾರ್ಯ ನಿರ್ವಹಿಸುತ್ತಿದ್ದು, ಲಗೇಜ್ ಸ್ಕ್ಯಾನರ್ ಕೂಡ ದುರಸ್ಥಿಗೆ ಬಂದಿರುವುದರಿಂದ ಜಲಾಶಯದ ಭದ್ರತೆಗೆ ಸಾಕಷ್ಟು ಸಿಬ್ಬಂದಿಗಳಿದ್ದರೂ ಸಮರ್ಪಕ ಅತ್ಯಾಧುನಿಕ ಉಪಕರಣ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.

ರಾತ್ರಿ ಅನಧಿಕೃತ ಸೈಲಿಂಗ್: ಇಷ್ಟೆಲ್ಲಾ ಭದ್ರತಾ ಲೋಪಗಳಿದ್ದರೂ, ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಕೆಆರ್‍ಎಸ್ ಹಿನ್ನೀರಿನಲ್ಲಿ ರಾತ್ರಿ ವೇಳೆ ಅನಧಿಕೃತ ಸೈಲಿಂಗ್‍ಗೆ ಅವಕಾಶ ಮಾಡಿಕೊಡಲಾಗಿದೆ. ಇದೊಂದು ರೀತಿ ಭದ್ರತೆಗೆ ಆತಂಕ ತಂದೊಡ್ಡಿದೆ. ಈ ಬಗ್ಗೆ ಜಲಾಶಯದ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಲಾಶಯದ ಭದ್ರತಾ ಸಿಬ್ಬಂದಿಗೆ ಬೋಟ್ ವ್ಯವಸ್ಥೆ ಮಾಡಿ ಗಸ್ತು ತಿರುಗಲು ಅವಕಾಶ ಮಾಡಿಕೊಟ್ಟರೆ ಜಲಾಶಯಕ್ಕೆ ಸಾಕಷ್ಟು ಭದ್ರತೆ ನೀಡಿದಂತಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಭಾರೀ ಜನರ ನಿರೀಕ್ಷೆ: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಳೆದ 2 ವರ್ಷಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿತ್ತು. ಈ ಬಾರಿ ಅದ್ದೂರಿಯಾಗಿ ಆಚರಿಸಲು ತೀರ್ಮಾನ ಕೈಗೊಂಡಿದೆ. ಹೀಗಾಗಿ ಮೈಸೂರಿಗೆ ಲಕ್ಷಾಂತರ ಜನ ಬರಲಿದ್ದು, ಈ ವೇಳೆ ಪ್ರಸಿದ್ಧ ಕೆಆರ್‍ಎಸ್ ಜಲಾಶಯವನ್ನು ಕಣ್ತುಂಬಿಕೊಳ್ಳಲು ಭಾರೀ ಜನ ಆಗಮಿಸುವುದರಿಂದ ಕೂಡಲೇ ಸರ್ಕಾರ ಕೆಟ್ಟು ನಿಂತಿರುವ ಸಿಸಿಟಿವಿ, ಮೆಟಲ್ ಡಿಟೆಕ್ಟರ್‍ಗಳು ಹಾಗೂ ಲಗೇಜ್ ಸ್ಕ್ಯಾನರ್‍ಗಳ ದುರಸ್ಥಿಗೆ ಮುಂದಾಗಬೇಕು. ಅಲ್ಲದೇ ಇಲ್ಲಿಗೆ ಭದ್ರತಾ ಪಡೆಗೆ ಅತ್ಯಾಧುನಿಕ ಸಾಧನ-ಸಲಕರಣೆ ನೀಡುವ ಮೂಲಕ ಜಲಾಶಯಕ್ಕೆ ಮತ್ತಷ್ಟು ಭದ್ರತೆ ಒದಗಿಸಬೇಕೆಂದು ಈ ಭಾಗದ ಜನರ ಒತ್ತಾಯವಾಗಿದೆ.

Translate »