ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಕ್ರಮ ಕುಡಿಯುವ ನೀರು ಸಂಪರ್ಕ ಸಕ್ರಮ
ಮೈಸೂರು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಕ್ರಮ ಕುಡಿಯುವ ನೀರು ಸಂಪರ್ಕ ಸಕ್ರಮ

June 16, 2022

ಆಧಾರ್ ನಕಲು, ಸ್ವಯಂಪ್ರೇರಿತ ಪ್ರಮಾಣ ಪತ್ರನೀಡಿದಲ್ಲಿ ಕಾನೂನುಬದ್ಧ

ಕೇಂದ್ರದ 24*7 ಕುಡಿಯುವ ನೀರು ಯೋಜನೆ ಜಾರಿಗೆ ನಿರ್ಧಾರ

ಬೆಂಗಳೂರು, ಜೂ.೧೫(ಕೆಎಂಶಿ)-ನಗರಪಾಲಿಕೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ ಕುಡಿಯುವ ನೀರು ಸಂಪರ್ಕ ಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಕ್ರಮ ಕೊಳಾಯಿ ಸಂಪರ್ಕ ಹೊಂದಿರು ವವರು ತಮ್ಮ ಆಧಾರ್ ನಕಲು ಪ್ರತಿ ಹಾಗೂ ಸ್ವಯಂಪ್ರೇರಿತ ಪ್ರಮಾಣ ಪತ್ರವನ್ನು ತಮ್ಮ ಸ್ಥಳೀಯ ಸಂಸ್ಥೆಗಳಿಗೆ ದಾಖಲಿಸಿದಲ್ಲಿ ಸಕ್ರಮಗೊಳಿಸಲಾಗುವುದು. ಸಕ್ರಮಗೊಳಿಸಿದ ನಂತರ ಸಂಪರ್ಕಕ್ಕೆ ಮೀಟರ್ ಅಳವಡಿಸಿ, ಪ್ರತಿ ಮಾಸಿಕ ಹಣವನ್ನು ಸಂಬAಧಪಟ್ಟ ಸಂಸ್ಥೆಗಳಿಗೆ ನಾಗರಿಕರು ಪಾವತಿಸಬೇಕು. ಕೆಲವು ರಾಜ್ಯಗಳಲ್ಲಿ ಅಕ್ರಮ ಕೊಳಾಯಿ ಸಂಪರ್ಕಗಳನ್ನು ಸಕ್ರಮಗೊಳಿಸಿ, ಸ್ಥಳೀಯ ಸಂಸ್ಥೆಗಳು ಆದಾಯ ಮೂಲ ಹೆಚ್ಚಿಸಿಕೊಂಡಿವೆ. ಅದನ್ನೇ ಕರ್ನಾಟಕದ ಎಲ್ಲ ಮಹಾ ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳನ್ನು ದಾಹ ಮುಕ್ತವನ್ನಾಗಿ ಮಾಡಲು ೯೪೦೦ ಕೋಟಿ ರೂ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು. ಎಲ್ಲ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ೨೪ಘಿ೭ ಕುಡಿಯುವ ನೀರು ಸಂಪರ್ಕವನ್ನು ಕಲ್ಪಿಸಲು ಕೇಂದ್ರ ಸರ್ಕಾರ ತಂದಿರುವ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು.

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಜಲಮೂಲಗಳಿಂದ ನೀರನ್ನು ಪ್ರತಿ ಮನೆಗೂ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲದಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು. ಜಲಮೂಲಗಳು ಇಲ್ಲದ ಕಡೆ ಏನು ಮಾಡಬೇಕು, ಯಾವ ರೀತಿ ಪರಿಹಾರ ಒದಗಿಸಬೇಕು ಎಂದು ಚಿಂತನೆ ನಡೆದಿದೆ ಎಂದ ಅವರು, ಒಟ್ಟಿನಲ್ಲಿ ಕರ್ನಾಟಕ ದಾಹಮುಕ್ತ ರಾಜ್ಯವಾಗಬೇಕು ಎಂಬುದು ನಮ್ಮ ಗುರಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

Translate »