ನಾನು ಆಸ್ಪತ್ರೆಯಲ್ಲಿ, ಅಮ್ಮ ಒಬ್ಬರೇ ಮನೆಯಲ್ಲಿ… ಯಾರೂ ದಿನಸಿ ತಂದುಕೊಡದೇ ಪರಿತಪಿಸಿದ ತಾಯಿ
ಮೈಸೂರು

ನಾನು ಆಸ್ಪತ್ರೆಯಲ್ಲಿ, ಅಮ್ಮ ಒಬ್ಬರೇ ಮನೆಯಲ್ಲಿ… ಯಾರೂ ದಿನಸಿ ತಂದುಕೊಡದೇ ಪರಿತಪಿಸಿದ ತಾಯಿ

September 1, 2020

ಮೈಸೂರು, ಆ.31(ವೈಡಿಎಸ್)- ಮನೆಯಲ್ಲಿ ಅಮ್ಮ ಮತ್ತು ನಾನು ಇಬ್ಬರೇ ಇದ್ದೇವೆ. ನಂಗೆ ಕೊರೊನಾ ಬಂದು ಆಸ್ಪತ್ರೆಗೆ ಹೋದಾಗ ಕುಟುಂಬಕ್ಕೆ ಯಾರೊಬ್ಬರೂ ದಿನಸಿ ಪದಾರ್ಥಗಳನ್ನು ತಂದುಕೊಡಲಿಲ್ಲ. ಮನೆಯಲ್ಲಿದ್ದ ಅಲ್ಪ-ಸ್ವಲ್ಪ ದಿನಸಿಯಲ್ಲೇ ಅಮ್ಮ ಜೀವನ ಸಾಗಿಸಿದ್ದಾರೆ…

ಇದು ಕೊರೊನಾದಿಂದ ಗುಣಮುಖರಾದ ಬಿಎಂಶ್ರೀ ನಗರದ ನಿವಾಸಿಯ(ರೋಗಿ ಸಂಖ್ಯೆ ಎಂವೈಎಸ್729) ನೋವಿನ ನುಡಿಗಳು.

ಜು.2ರಂದು ಸಮಾರಂಭವೊಂದಕ್ಕೆ ವಿರಾಜಪೇಟೆಗೆ ಹೋಗಿ ಬಂದಾಗ ಜ್ವರ ಬಂತು. ಮಾತ್ರೆ ತಗೊಂಡು ಸುಮ್ಮನಾದೆ. ಮರುದಿನ ಜ್ವರದ ಜತೆಗೆ ಕೆಮ್ಮು ಶುರುವಾಯ್ತು. ನಂತರ ಕ್ಲಿನಿಕ್‍ಗೆ ಹೋಗಿ ಇಂಜೆಕ್ಷನ್ ಮಾಡಿಸ್ಕೊಂಡೆ. ಆದ್ರೂ ಜ್ವರ, ಕೆಮ್ಮು ಕಡಿಮೆ ಆಗಲಿಲ್ಲ. ನಂತ್ರ ಜು.6ರಂದು ಕೆ.ಆರ್.ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸ್ದೆ. ಪಾಸಿಟಿವ್ ಬಂದಿದೆ ಅಂದ್ರು. ಅಮ್ಮ ಮತ್ತು ನಾನು ಇಬ್ಬರೇ ಮನೆಯಲ್ಲಿದ್ದು, ನಾನು ಆಸ್ಪತ್ರೆಗೆ ಹೋದರೆ ಅಮ್ಮನನ್ನು ನೋಡಿಕೊಳ್ಳೋರು ಯಾರೆಂದು ಭಯವಾಯ್ತು. ಅಮ್ಮನೇ ನನಗೆ ಧೈರ್ಯ ತುಂಬಿದ್ರು. ನಂತ್ರ ಮೇಟಗಳ್ಳಿ ಕೋವಿಡ್ ಆಸ್ಪತ್ರೇಲಿ 15 ದಿನ, ಮಂಡಕಳ್ಳಿಯ ಕೋವಿಡ್ ಕೇಂದ್ರದಲ್ಲಿ 10 ದಿನ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದೆ. ಈ ವೇಳೆ ನೆರೆಯ ನಿವಾಸಿಗಳು ಆರೋಗ್ಯ ವಿಚಾರಿಸಿದರು. ನನ್ನಿಂದ ಅಮ್ಮನಿಗೆ ತೊಂದ್ರೆ ಆಗ್ಬಾರ್ದು ಎಂದು ತಟ್ಟೆ, ಲೋಟ ತೆಗೆದ್ಕೊಂಡು ಕೊಠಡಿಯಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿ, 15 ದಿನ ಪೂರೈಸಿದೆ. ಆರೋಗ್ಯವಾಗಿದ್ದು, ಕೆಲಸಕ್ಕೂ ಹೋಗುತ್ತಿದ್ದೇನೆ.

ದಿನಸಿ ನೀಡಲಿಲ್ಲ: ನನಗೆ ಪಾಸಿಟಿವ್ ಬಂದಾಗ ಮನೆಯನ್ನು ಸೀಲ್‍ಡೌನ್ ಮಾಡಿದ್ದರು. ಈ ವೇಳೆ ಯಾರೊಬ್ಬರೂ ಅಮ್ಮನಿಗೆ ದಿನಸಿ ಪದಾರ್ಥಗಳನ್ನು ತಂದು ಕೊಡಲಿಲ್ಲ. ಮನೆಯಲ್ಲಿದ್ದ ಅಲ್ಪ-ಸ್ವಲ್ಪ ದಿನಸಿ ಪದಾರ್ಥಗಳಲ್ಲೇ ಅವರು ದಿನ ದೂಡಿದ್ದಾರೆ ಎಂದು ನೋವಿನಿಂದಲೇ ಮಾತು ಮುಗಿಸಿದರು.

Translate »