ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಲು ಡಿಸಿಗಳಿಗೆ ಸೂಚನೆ
ಮೈಸೂರು

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಲು ಡಿಸಿಗಳಿಗೆ ಸೂಚನೆ

September 1, 2020

ಮೈಸೂರು,ಆ.31(ಎಸ್‍ಪಿಎನ್)-ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ, ಹಾವು ಕಡಿತ ಹಾಗೂ ಬಣವೆ ನಷ್ಟಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಅವರು ಆಗಸ್ಟ್ 26ರಂದು ಸುತ್ತೋಲೆ ಹೊರಡಿಸಿದ್ದಾರೆ.

2019-20ನೇ ಸಾಲಿಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ, ಹಾವು ಕಡಿತ, ಬಣವೇ ನಷ್ಟಕ್ಕೆ ಪರಿಹಾರ ನೀಡುವ ಯೋಜನೆಗಳನ್ನು ಈ ಸಾಲಿನಲ್ಲಿ ಕಂದಾಯ ಇಲಾಖೆಯಿಂದ ಅನುಷ್ಠಾನಗೊಳಿಸಲು ಈ ಸಾಲಿನ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳನ್ನು ಉಪವಿಭಾಗಾಧಿಕಾರಿಗಳ ಸಮಿತಿಯಲ್ಲಿ ತೀರ್ಮಾನಿಸಿ ಪರಿಹಾರ ಬಿಡುಗಡೆಗೊಳಿಸು ವಂತೆ ಸೂಚಿಸಿದ್ದು, ಒಂದು ವೇಳೆ ಉಪವಿಭಾಗಾಧಿಕಾರಿಗಳ ಸಮಿತಿಯಿಂದ ಪರಿ ಹಾರ ಒದಗಿಸುವ ಸಂಬಂಧ ಸಮಂಜಸವಲ್ಲದ ತೀರ್ಪು ಬಂದಲ್ಲಿ ಜಿಲ್ಲಾಧಿಕಾರಿಗಳ ಮೇಲ್ಮನೆ ಪ್ರಾಧಿಕಾರದಲ್ಲಿ ಅರ್ಜಿದಾರರು ಪ್ರಶ್ನಿಸಬಹುದಾಗಿದೆ.

ಸದರಿ ಯೋಜನೆಯನ್ನು ಕಂದಾಯ ಇಲಾಖೆಯಡಿ ನಿರ್ವಹಿಸುವುದು ಸೂಕ್ತ ವಾಗಿದ್ದು, ಪಿಡಿ ಖಾತೆಯಿಂದ ರೈತ ಕುಟುಂಬಕ್ಕೆ ಪರಿಹಾರಧನ ಪಾವತಿಸಲು ಅವಕಾಶವಿರುತ್ತದೆ. ರೈತರ ಆತ್ಮಹತ್ಯೆ ಪ್ರಕರಣಕ್ಕೆ 5ಲಕ್ಷ ರೂ. ಪರಿಹಾರ. ಹಾವು ಕಡಿತ/ ಆಕಸ್ಮಿಕ ಮರಣ ಹೊಂದಿದ ರೈತರು ಮತ್ತು ಕೃಷಿ ಕಾರ್ಮಿಕ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಬಣವೆ ನಷ್ಟಕ್ಕೆ 20 ಸಾವಿರ ರೂ. ನಿಗದಿಪಡಿಸಲಾಗಿದೆ. ಈ ಸಂಬಂಧ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿ, ಪರಿಹಾರಧನ ಸಕಾಲದಲ್ಲಿ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Translate »