ಮೈಸೂರು,ಮೇ 23(ಎಂಟಿವೈ)- ಮುಂಗಾರು ಇನ್ನೇನು ಆರಂಭವಾಗಲಿದ್ದು, ಜಿಲ್ಲಾದ್ಯಂತ ಕೃಷಿ ಚಟುವಟಿಕೆ ನಿಧಾನ ವಾಗಿ ಗರಿಗೆದರುತ್ತಿದೆ. ಆಧುನಿಕ ತಂತ್ರಜ್ಞಾನ ದೊಟ್ಟಿಗೆ ಹಂತಹಂತವಾಗಿ ನಂಟು ಸಾಧಿಸಿ ಕೊಳ್ಳುತ್ತಿರುವ ರೈತರು, ಈಗ `ಆನ್‍ಲೈನ್ ಲೈವ್’ಗೆ ಬಂದು ಕೃಷಿ ಸಂಶೋಧನಾ ಕೇಂದ್ರದೊಟ್ಟಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಬೀಜೋಪಚಾರದ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡಿದ್ದಾರೆ!
ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಸಾವಯವ ಕೃಷಿ ಸಂಶೋಧನಾ ಕೇಂದ್ರವು ರೈತರಿಗೆ ಕ್ರಮಬದ್ಧ ಬೀಜೋ ಪಚಾರ ಮಾಡುವ ತರಬೇತಿ ಕಾರ್ಯ ಕ್ರಮವನ್ನು ಶನಿವಾರ ಆನ್‍ಲೈನ್‍ನಲ್ಲಿ ಆಯೋಜಿಸಿತ್ತು. ಆಸಕ್ತ 30 ರೈತರು ನೇರ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.
ಆನ್‍ಲೈನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಕೃಷಿ ವಿವಿ ಕುಲ ಪತಿ ರಾಜೇಂದ್ರ ಪ್ರಸಾದ್, ಕೊರೊನಾ ವಿಶ್ವದ ಅನೇಕ ರಾಷ್ಟ್ರಗಳನ್ನು ಕಾಡುತ್ತಿದೆ. ರೈತರು ಭಯಪಟ್ಟು ಕೃಷಿ ಚಟುವಟಿಕೆ ನಿಲ್ಲಿಸ ಬಾರದು. ಕೊರೊನಾ ವೈರಾಣು ಹರಡ ದಂತೆ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಎಲ್ಲರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡೇ ಕೃಷಿ ಚಟುವಟಿಕೆ ಮುಂದು ವರೆಸಬೇಕು ಎಂದು ಉತ್ತೇಜಿಸಿದರು. ಇಂಥ ಸಂಕಷ್ಟ ಕಾಲದಲ್ಲೂ ಆನ್‍ಲೈನ್ ಮೂಲಕ ಬೀಜೋಪಚಾರ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸಂಶೋಧನಾ ಕೇಂದ್ರದ ಸಸ್ಯ ಸಂರಕ್ಷಣೆ ವಿಭಾಗದ ಪ್ರಾಧ್ಯಾಪಕ ಸಿ.ಗೋವಿಂದ ರಾಜು ಬೀಜೋಪಚಾರದ ಕ್ರಮ, ಮಹತ್ವ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಏಕದಳ, ದ್ವಿದಳ, ತರಕಾರಿ ಸೇರಿದಂತೆ ಯಾವುದೇ ಕೃಷಿ ಮಾಡುವಾಗ ತಪ್ಪದೇ ರಾಸಾಯನಿಕ, ಜೈವಿಕ ಕೀಟನಾಶಕ ಬಳಸಿ ಬೀಜೋಪ ಚಾರ ನಡೆಸಬೇಕು. ಇದರಿಂದ ಫಸಲಿನಲ್ಲಿ ಹುಳುಬಾಧೆ ನಿಯಂತ್ರಣವಾಗಲಿದೆ ಎಂದರು. ಸಿ.ರಾಮಚಂದ್ರ ವಿಸ್ತರಣಾ ಮುಂದಾಳು ಕಾರ್ಯಾಗಾರ ನಿರೂಪಿಸಿದರು.
ಬೀಜೋಪಚಾರ ಹೇಗೆ?…
ಎಲ್ಲಾ ಬಗೆಯ ಬಿತ್ತನೆ ಬೀಜಗಳಿಗೂ ಮೊದಲು ಶಿಲೀಂಧ್ರ ನಾಶಕದಿಂದ ಅರ್ಧ ಗಂಟೆ ಬೀಜೋಪಚಾರ ಮಾಡಿ, 4-5 ಗಂಟೆ ನೆರಳಲ್ಲಿ ಒಣಗಿಸಬೇಕು. ನಂತರ ಕೀಟ ನಾಶಕದಿಂದ ಬೀಜೋಪಚಾರ ಮಾಡಿ 2-3 ಗಂಟೆ ನೆರಳಲ್ಲಿ ಒಣಗಿಸಿ, ಬಳಿಕ ಜೈವಿಕ ಗೊಬ್ಬರ ಲೇಪನ ಮಾಡಬೇಕು. ಇದರಿಂದ ಬಿತ್ತನೆಬೀಜ ಮಣ್ಣೊಳಗೆ ಉತ್ತಮ ವಾಗಿ ಸಂರಕ್ಷಿಸಲ್ಪಡುತ್ತದೆ. ಒಂದೇ ಬಾರಿಗೆ ಸಮಾನಾಂತರವಾಗಿ ಮೊಳಕೆಯೊಡೆಯು ತ್ತದೆ. ಭತ್ತಕ್ಕೆ ಕಾರ್ಬನ್ ಡೈಜಿಂ, ಮ್ಯಾಂಕೊಜೆಬ್ ಇರುವ ಸಂಯುಕ್ತ ಶಿಲೀಂಧ್ರನಾಶಕ ದೊಂದಿಗೆ ಜೀವಾಣು ಗೊಬ್ಬರವಾದ ಅಜಟೋಬ್ಯಾಕ್ಟರ್ ಅಥವಾ ಅಜೋಸ್ಪೈರಿಲಂ ನೊಂದಿಗೆ ಪಿಎಸ್‍ಬಿ ಬಳಸಬೇಕು. ರಾಗಿ, ಜೋಳಕ್ಕೆ ಕಾರ್ಬನ್ ಡೈಜಿಂ, ಮುಸುಕಿನ ಜೋಳಕ್ಕೆ ಮೆಟಲಾಕ್ಸಿಲ್ ರಾಸಾಯನಿಕ ಬೆರೆಸಬೇಕು. ನೆಲಗಡಲೆ, ಕಡಲೆ, ಹೆಸರು, ಅಲಸಂದೆ, ತೊಗರಿ, ಉದ್ದು, ಸೂರ್ಯಕಾಂತಿಗೆ ಇಮಿಡಾಕ್ಲೋ ಪ್ರಿಡ್ ರಾಸಾಯನಿಕದೊಂದಿಗೆ ಜೈವಿಕ ಗೊಬ್ಬರ ರೈಜೋಬಿಯಂ, ಪಿಎಸ್‍ಬಿ ಹಾಗೂ ಟ್ರೈಕೋಡರ್ಮ್ ಹಾಗೂ ಕಬ್ಬಿಗೆ ಕ್ಲೋರೋಫೈರಿಪಾಸ್ ರಾಸಾಯನಿಕದೊಂದಿಗೆ ಜೈವಿಕ ಗೊಬ್ಬರ ಅಜಟೋಬ್ಯಾಕ್ಟರ್ ಅಥವಾ ಅಜೋಸ್ಪೈರಿಲಂನೊಂದಿಗೆ ಪಿಎಸ್‍ಬಿ ಹಾಗೂ ಟ್ರೈಕೋಡರ್ಮ್ ಬಳಸಬೇಕು. ಬೀಜೋಪಚಾರದ ಪರಿಣಾಮ ಶಿಲೀಂದ್ರ, ದುಂಡಾಣು ರೋಗ ಆರಂಭದಲ್ಲೇ ಹತೋಟಿಗೆ ಬರುತ್ತವೆ. ಬಿತ್ತನೆ ಬೀಜಕ್ಕೆ ಜೀವಾಣು ಗೊಬ್ಬರ ಲೇಪಿಸುವುದರಿಂದ ಸಾರಜನಕ, ರಂಜಕಯುಕ್ತ ರಸಗೊಬ್ಬರ ಬಳಕೆ ತಗ್ಗಿಸ ಬಹುದು. ಬೀಜೋಪಚಾರ ವೇಳೆ ನೆರಳಲ್ಲಿ ಒಣಗಿಸುವುದರಿಂದ ಬೀಜದಲ್ಲಿ ಬರ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೀಟ ಮತ್ತು ಸುಳಿನೊಣಗಳಿಂದ 30-45 ದಿನಗಳವರೆಗೆ ಬೆಳೆ ಕಾಪಾಡಿಕೊಳ್ಳಬಹುದು.