ಮೂಲ ಸೌಕರ್ಯಕ್ಕೆ ಕೂಡಲೇ 500 ಕೋಟಿ ಬಿಡುಗಡೆ
News

ಮೂಲ ಸೌಕರ್ಯಕ್ಕೆ ಕೂಡಲೇ 500 ಕೋಟಿ ಬಿಡುಗಡೆ

July 14, 2022

ಬೆಂಗಳೂರು ಜು.13(ಕೆಎಂಶಿ)- ಅತಿವೃಷ್ಟಿ, ಪ್ರವಾಹದಿಂದ ಸಂಭ ವಿಸಿದ ಹಾನಿಯ ಕುರಿತು ಎಲ್ಲಾ ಜಿಲ್ಲೆಗಳಿಂದ ವರದಿ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಇಂತಹ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ 500 ಕೋಟಿ ರೂ.ಗಳನ್ನು ಬಿಡು ಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರವಾಹವನ್ನು ಸಮರೋಪಾದಿಯಲ್ಲಿ ಎದುರಿಸಲು ಅಧಿಕಾರಿ ಗಳು, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಜಿಲ್ಲಾಡಳಿತ ಹಾಗೂ ಶಾಸಕರು ಸನ್ನದ್ಧರಾಗಿದ್ದೇವೆ. ಜನರ ಸಂಕಷ್ಟ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಕಳೆದ ವರ್ಷ 14 ಲಕ್ಷ ಹೆಕ್ಟೇರ್‍ಗೆ 1600 ಕೋಟಿ ರೂ.ಗಳನ್ನು ರೈತರ ಬೆಳೆಗಳಿಗೆ ಪರಿಹಾರವನ್ನು ಒಂದು ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಅದೇ ರೀತಿ ಈ ವರ್ಷವೂ ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ಈ ವರ್ಷ ಜುಲೈ ಮಾಹೆಯಲ್ಲಿಯೇ ಅತಿವೃಷ್ಟಿಯಾಗಿದೆ. ಕರಾ ವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜೂನ್‍ವರೆಗೂ ಸಾಮಾನ್ಯವಾಗಿದ್ದ ಮಳೆ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಗಿ, ಮೈಸೂರು, ಕೊಡಗು, ಉಡುಪಿ, ಕಾರವಾರ ಭಾಗದಲ್ಲಿ ಬಿದ್ದಿದೆ. ಇಡೀ ರಾಜ್ಯದಲ್ಲಿ ಇದುವರೆಗೂ 32 ಜೀವ ಹಾನಿ, ಐದು ಜನರ ಕಣ್ಮರೆ, 34 ಜನರಿಗೆ ಗಾಯ ಗಳಾಗಿವೆ ಹಾಗೂ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಿ ಜೀವ ಉಳಿಸಲಾಗಿದೆ. 14 ಕಾಳಜಿ ಕೇಂದ್ರಗಳಿವೆ ಹಾಗೂ 4 ಎನ್‍ಡಿಆರ್‍ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಲ್ಲಿ ಈ ತಂಡಗಳು ಕೆಲಸ ಮಾಡುತ್ತಿವೆ. 4 ಎಸ್‍ಡಿಆರ್‍ಎಫ್ ತಂಡಗಳು ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಜನ ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 216 ಹೆಕ್ಟೇರ್ ಬೆಳೆ ಹಾನಿಯಾಗಿದೆ. 129 ಹೆಕ್ಟೇರ್ ಉಡುಪಿಯಲ್ಲಿ, ಉತ್ತರ ಕನ್ನಡದಲ್ಲಿ ಅಲ್ಪಪ್ರಮಾಣ ದಲ್ಲಿ ಆಗಿದೆ. ಕೃಷಿ ಮತ್ತು ತೋಟಗಾರಿಕೆಯ ಒಟ್ಟು 355 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ 429 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 437 ಮನೆಗಳು, ಉಡುಪಿಯಲ್ಲಿ 196 ಮನೆಗಳು ಹಾನಿಯಾಗಿವೆ. 1062 ಮನೆಗಳು ಹಾನಿಗೊಳಗಾಗಿವೆ. ಎ, ಬಿ, ಸಿ ವರ್ಗಗಳಿವೆ. ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ 58 ಮನೆಗಳು, 26 ತೀವ್ರ ಹಾನಿಗೊಳಗಾಗಿದ್ದು, ಅಲ್ಪ ಪ್ರಮಾಣದಲ್ಲಿ 1062 ಮನೆಗಳು ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ರಸ್ತೆಗಳು ಸೇರಿ ದಕ್ಷಿಣ ಕನ್ನಡ- 727 ಕಿ.ಮೀ., ಉತ್ತರ ಕನ್ನಡ 500 ಕಿ.ಮೀ., ಉಡುಪಿ 960 ಕಿ.ಮೀ. 2187 ಕಿ.ಮೀ. ರಸ್ತೆ ಹಾನಿಗೊಳಗಾಗಿವೆ. ಮೂರು ಜಿಲ್ಲೆಗಳಲ್ಲಿ 5595 ವಿದ್ಯುತ್ ಕಂಬಗಳು ಬಿದ್ದಿವೆ. ಇವುಗಳನ್ನು ಪುನರ್ ಸ್ಥಾಪಿಸುವ ಕೆಲಸ ಭಾರದಿಂದ ಸಾಗಿದೆ. 422 ಟ್ರಾನ್ಸ್‍ಫಾರ್ಮರ್‍ಗಳ ದುರಸ್ತಿ ಕೆಲಸ ನಡೆದಿದೆ. 168 ಸೇತುವೆ ಮತ್ತು ಕನ್ವಲ್ಟ್‍ಗಳು ಹಾನಿಯಾಗಿವೆ.

ಮನೆ ಬಿದ್ದ ತಕ್ಷಣ ಎನ್‍ಡಿಆರ್‍ಎಫ್ ಪ್ರಕಾರ 3200 ರೂ.ಗಳನ್ನು ನೀಡಬೇಕಿತ್ತು. ರಾಜ್ಯ ಸರ್ಕಾರ 6800 ಅಧಿಕವಾಗಿ ನೀಡಿ 10 ಸಾವಿರ ರೂ.ಗಳನ್ನು ಹಾನಿಯಾದ ಮನೆಗಳಿಗೆ ತಕ್ಷಣ ನೀಡಬೇಕೆಂದು ಆದೇಶ ಹೊರಡಿಸಿದೆ. ಮನೆಹಾನಿಗೆ ಎ,ಬಿ,ಸಿ ವರ್ಗೀಕರಣ ಮಾಡಿ `ಎ’ ವರ್ಗಕ್ಕೆ ರೂ. 5 ಲಕ್ಷ, `ಬಿ’ ವರ್ಗಕ್ಕೆ ರೂ. 3 ಲಕ್ಷ ರೂ.ಗಳು, ಅಲ್ಪ ಹಾನಿಯಾಗಿರುವ ಮನೆಗಳಿಗೆ 50 ಸಾವಿರ ರೂ.ಗಳನ್ನು ನೀಡಲಾಗುವುದು.

ಕೇಂದ್ರ ಸರ್ಕಾರ ಎ ವರ್ಗಕ್ಕೆ 95 ಸಾವಿರ ನೀಡಿದರೆ, ರಾಜ್ಯ ಸರ್ಕಾರ 4 ಲಕ್ಷ ಹೆಚ್ಚುವರಿಯಾಗಿ ನೀಡುತ್ತೇವೆ. ಬಿ ವರ್ಗಕ್ಕೆ 95 ಸಾವಿರ ನೀಡಿದರೆ ರಾಜ್ಯ ಸರ್ಕಾರ 3 ಲಕ್ಷ ಹೆಚ್ಚಿಗೆ ನೀಡುತ್ತಿದ್ದೇವೆ. ಅಲ್ಪ ಹಾನಿಗೆ 5 ಸಾವಿರ ನೀಡಿದರೆ ನಾವು 50 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ ಎಂದರು. ಬೆಳೆ ಹಾನಿಗೆ ಕೃಷಿ ಇನ್‍ಪುಟ್ ಸಹಾಯಧನವನ್ನು ಒಣ ಬೇಸಾಯಕ್ಕೆ 6800 ಎನ್‍ಡಿಆರ್‍ಎಫ್ ಅಡಿ ನೀಡಲಾಗುತ್ತದೆ. ರಾಜ್ಯ ಸರ್ಕಾರ 6800 ಸೇರಿಸಿ 13 ಸಾವಿರ ನೀಡುತ್ತಿದೆ. ಈ ವರ್ಷವೂ ಒಂದು ಹೆಕ್ಟೇರ್‍ಗೆ 13,600 ರೂ.ಗಳ ಪರಿಹಾರ ಮುಂದುವರೆಸುತ್ತಿದ್ದೇವೆ. ನೀರಾವರಿ ಬೆಳೆಗಳಿಗೆ ಕೇಂದ್ರ ಸರ್ಕಾರ 13,500 ನೀಡಿದರೆ ರಾಜ್ಯ ಸರ್ಕಾರ 25 ಸಾವಿರ ನೀಡುತ್ತದೆ. ತೋಟಗಾರಿಕಾ ಬೆಳೆಗಳಿಗೆ ಕೇಂದ್ರ 18 ಸಾವಿರ ರೂ. ನೀಡಿದರೆ, ನಾವು 28 ಸಾವಿರ ನೀಡುತ್ತಿದ್ದೇವೆ. ಇದು ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಬೊಕ್ಕಸದಿಂದ ಹೆಚ್ಚುವರಿ ಯಾಗಿ ನೀಡುತ್ತಿದ್ದೇವೆ ಎಂದರು. ಕೊಡಗು ಹಾಗೂ ಕರಾವಳಿಯಲ್ಲಿ ವಿಶೇಷ ಸಮಸ್ಯೆಗಳಿವೆ. ಭೂಕಂಪನದ ಅಧ್ಯಯನ ಮಾಡಲು ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ, ಬೆಂಗಳೂರು, ಮೈಸೂರು ವಿವಿ ಇಂದ ಸುದೀರ್ಘ ಅಧ್ಯಯನ ಮಾಡಿ, ಪರಿಹಾರ ಸೂಚಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಪರಿಹಾರವಾಗಿ ರೆಟ್ರೋ ಫಿಟ್ಟಿಂಗ್ ಮಾಡಲು ಸಲಹೆ ನೀಡಿದ್ದಾರೆ. ಅದರ ಅಂತಿಮ ವರದಿ ನೀಡಲು ಆದೇಶಿಸಲಾಗಿದೆ. ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಅಮೃತ ವಿವಿಯವರು ಕೊಡಗು ಭಾಗದಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಪಶ್ಚಿಮ ಘಟ್ಟಗಳಲ್ಲಿಯೂ ಅಧ್ಯಯನ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ವರದಿಯಲ್ಲಿ ಹೇಳಿರುವ ಪರಿಹಾರಗಳ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಿದೆ ಎಂದರು.

Translate »