ಚಾಮರಾಜನಗರ, ಜು.13(ಎಸ್‍ಎಸ್)- ಇತಿಹಾಸ ಪ್ರಸಿದ್ಧ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರು ಗಿತು. ಐದು ವರ್ಷಗಳಿಂದ ರಥೋ ತ್ಸವವು ಸ್ಥಗಿತಗೊಂಡಿದ್ದ ಕಾರಣ ಈ ಬಾರಿಯ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಬೆಳಗ್ಗೆ 11ರಿಂದ 11.30ರವರೆಗಿನ ಶುಭ ಕನ್ಯಾ ಲಗ್ನದಲ್ಲಿ ಅಲಂಕೃತ ಶ್ರೀ ಚಾಮ ರಾಜೇಶ್ವರ ಉತ್ಸವಮೂರ್ತಿಯನ್ನು ನೂತನ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಲಾಯಿತು. ಬಳಿಕ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಥದ ಮುಂದೆ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ರಥವು ರಥಬೀದಿ, ಮಹಾವೀರ ವೃತ್ತ, ಶ್ರೀವೀರಭದ್ರೇಶ್ವರಸ್ವಾಮಿ ದೇವ ಸ್ಥಾನ, ಹಳೇ ಖಾಸಗಿ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ನೃಪತುಂಗ ವೃತ್ತದ ಮೂಲಕ ದೇಗುಲಕ್ಕೆ ಮರಳಿತು. ಮಧ್ಯಾಹ್ನ 12 ಗಂಟೆಗೆ ಚಾಮರಾಜೇಶ್ವರ ಉತ್ಸವ ಮೂರ್ತಿ ಹೊತ್ತು ಸಾಗಿದ ರಥ ಮಧ್ಯಾಹ್ನ 3 ಗಂಟೆಗೆ ಸ್ವಸ್ಥಾನ ತಲುಪಿತು. 3 ಗಂಟೆ ಗಳ ಕಾಲ ಅದ್ಧೂರಿಯಾಗಿ ನಡೆದ ರಥೋತ್ಸವಕ್ಕೆ ನವದಂಪತಿಗಳು ಹಣ್ಣ-ದವನ ಎಸೆದು ತಮ್ಮ ಇಷ್ಟಾರ್ಥಗಳು ಈಡೇರಲೆಂದು ಪ್ರಾರ್ಥಿಸಿದರು. ರಥಕ್ಕೆ ಬೆಂಕಿ ಹಚ್ಚಿದ್ದ ಕಾರಣ 2017ರಿಂದ ರಥೋತ್ಸವ ನಡೆಯದ ಕಾರಣ ಈ ಬಾರಿ ನಡೆದ ರಥೋತ್ಸವಕ್ಕೆ ಹಲವು ದಂಪತಿಗಳು ಮಗುವಿನೊಟ್ಟಿಗೆ ಆಗಮಿಸಿ ರಥಕ್ಕೆ ಹಣ್ಣು-ದವನ ಎಸೆದದ್ದು, ವಿಶೇಷವಾಗಿತ್ತು. ಅಸಂಖ್ಯಾತ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಈ ವೇಳೆ ಶ್ರೀ ಚಾಮರಾಜೇಶ್ವರನಿಗೆ ಜೈ, ಜೈ ಎಂಬ ಹರ್ಷೋದ್ಘಾರ ಮೊಳಗಿತು. ರಥ ಸಾಗಿದ ಬೀದಿಗಳಲ್ಲಿ ಜನಜಂಗುಳಿ ಕಂಡು ಬಂತು. ರಥಬೀದಿಯ ಇಕ್ಕೆಲಗಳು ಹಾಗೂ ಅಂಗಡಿ- ಮುಂಗಟ್ಟು ಸೇರಿದಂತೆ ತಾರಸಿ ಮನೆಗಳ ಮೇಲೆ ನಿಂತು ಜನರು ರಥೋತ್ಸವ ವೀಕ್ಷಿಸಿದರು.
ಶ್ರೀಚಾಮರಾಜೇಶ್ವರಸ್ವಾಮಿ ರಥದ ಮುಂದೆ ಮಹಾರಾಜರ ಉತ್ಸವ ಮೂರ್ತಿ, ಗಣ ಪತಿಯ ಚಿಕ್ಕರಥ ತೆರಳಿತು. ಹಿಂಭಾಗದಲ್ಲಿ ಕೆಂಪ ನಂಜಾಂಬ(ಪಾರ್ವತಿ) ದೇವರ ರಥ ಸಾಗಿತು.
ನವದಂಪತಿಗಳ ಕಲರವ:ಶ್ರೀ ಚಾಮರಾಜೇ ಶ್ವರ ರಥೋತ್ಸವದಲ್ಲಿ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಅದರಂತೆ ಈ ಬಾರಿಯೂ ರಥೋತ್ಸವದಲ್ಲಿ ಸಹ ಸಹಸ್ರಾರು ನವಜೋಡಿಗಳು ಪಾಲ್ಗೊಂಡು ರಥಕ್ಕೆ ಹಣ್ಣು-ದವನ ಎಸೆದರು. ರಥ ಹಾಗೂ ಶ್ರೀಚಾಮರಾಜೇಶ್ವರ ದೇಗುಲದ ಮುಂದೆ ನೆರೆದಿದ್ದ ಜನಸ್ತೋಮದ ನಡುವೆ ನಿಂತು ಮೊಬೈಲ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ನಗರದ ಎಲ್ಲೆಂದರಲ್ಲಿ ನವ ಜೋಡಿಗಳ ಕಲರವ ಕಂಡು ಬಂತು.
ಮುಂಜಾಗ್ರತಾ ಕ್ರಮ: ರಥೋತ್ಸವದಲ್ಲಿ ಯಾವುದೇ ರೀತಿಯ ಅವಘಡಗಳಿಗೆ ಆಸ್ಪದ ಇಲ್ಲದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.
ಗಣ್ಯರ ದಂಡು: ಇಂದಿನ ರಥೋತ್ಸವ ದಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದಲ್ಲದೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸಿ.ಎಸ್.ನಿರಂಜನಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಡಿಸಿ ಕಾತ್ಯಾಯಿನಿದೇವಿ, ಎಸ್ಪಿ ಟಿ.ಪಿ.ಶಿವ ಕುಮಾರ್, ಎಎಸ್ಪಿ ಸುಂದರ್‍ರಾಜ್, ನಗರಸಭೆ ಆಯುಕ್ತ ಕರಿಬಸವಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಸ್ವಾಮಿ, ತಹಸೀ ಲ್ದಾರ್ ಬಸವರಾಜು, ರಾಜಣ್ಣ ಇತ ರರು ಪಾಲ್ಗೊಂಡಿದ್ದರು.