ವಲಸೆ ಕಾರ್ಮಿಕರು ತವರಿನತ್ತ ಪಯಣ
ಮೈಸೂರು

ವಲಸೆ ಕಾರ್ಮಿಕರು ತವರಿನತ್ತ ಪಯಣ

May 17, 2020

ಮೈಸೂರು,ಮೇ 16(ಆರ್‍ಕೆ)- ಕೋವಿಡ್ -19 ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲು ಕಿದ್ದ 1,600 ವಲಸೆ ಕಾರ್ಮಿಕರು ತವರಿ ನತ್ತ ಪಯಣ ಬೆಳೆಸಿದ್ದಾರೆ. ಲಾಕ್‍ಡೌನ್ ಸಡಿಲ ಗೊಂಡಿರುವುದರಿಂದ ದೇಶದ ಬೇರೆ ಬೇರೆ ರಾಜ್ಯಗಳಿಂದ ಕಟ್ಟಡ ನಿರ್ಮಾಣ, ಮರಗೆಲಸ, ಟೈಲ್ಸ್ ಅಳವಡಿಕೆ ಕೆಲಸಕ್ಕಾಗಿ ಮೈಸೂರಿಗೆ ಬಂದು ನೆಲೆಸಿದ್ದ ಕಾರ್ಮಿಕರನ್ನು ಅವರ ಊರುಗಳಿಗೆ ಹೋಗಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.

ವಲಸೆ ಕಾರ್ಮಿಕರ ಕೋರಿಕೆಯಂತೆ ಉತ್ತರಪ್ರದೇಶ, ಬಿಹಾರ ಸೇರಿದಂತೆ ಇತರ ಪ್ರದೇಶಗಳಿಗೆ ವಾಪಸ್ ಹೋಗಲು ಅವಕಾಶ ಕಲ್ಪಿಸಿದ ಕಾರಣ ಶ್ರಮಿಕ್ ರೈಲಿನಲ್ಲಿ ಇಂದು ಸಂಜೆ 4 ಗಂಟೆಗೆ 1,600 ಮಂದಿಯನ್ನು ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಿಂದ ಕಳುಹಿಸಿಕೊಡಲಾಯಿತು.

ಮೈಸೂರಿನ ವಿವಿಧ ಭಾಗದ ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದ್ದ ವಲಸೆ ಕಾರ್ಮಿಕರನ್ನು ಆಯಾ ಠಾಣೆಗಳ ಇನ್ ಸ್ಪೆಕ್ಟರ್, ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೆಎಸ್‍ಆರ್‍ಟಿಸಿ ಬಸ್ಸುಗಳ ಮೂಲಕ ಅಶೋಕಪುರಂ ರೈಲ್ವೇ ಸ್ಟೇಷನ್‍ಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದರು.

ರೈಲ್ವೆ ನಿಲ್ದಾಣದ ಬಳಿಯ ಮೈದಾನ ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಬೆಳೆಸುವ ಎಲ್ಲಾ ವಲಸೆ ಕಾರ್ಮಿಕರಿಗೂ ಥರ್ಮಲ್ ಸ್ಕ್ರೀನಿಂಗ್, ಆರೋಗ್ಯ ತಪಾಸಣೆ ನಡೆಸಿ ಸಂಪೂರ್ಣ ಸ್ಯಾನಿಟೈಸ್ ಮಾಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ವೈದ್ಯಕೀಯ ಪರೀಕ್ಷೆ ಮಾಡಿ ಸೋಂಕು ಇಲ್ಲ ಎಂಬು ದನ್ನು ದೃಢಪಡಿಸಿದರು.

ಅದಕ್ಕೂ ಮೊದಲೇ ಅಶೋಕಪುರಂ ರೈಲು ನಿಲ್ದಾಣದಲ್ಲಿ ಶ್ರಮಿಕ್ ರೈಲಿನ ಎಲ್ಲಾ 20 ಬೋಗಿಗಳನ್ನು ಕೋವಿಡ್-19 ಮಾರ್ಗ ಸೂಚಿಯಂತೆ ಔಷಧ ದ್ರಾವಣ ಸಿಂಪಡಿಸಿ ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದ ರೈಲ್ವೇ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿದ್ದರು.

ವಲಸೆ ಕಾರ್ಮಿಕರು ತಮ್ಮ ಮಕ್ಕಳು, ಲಗೇಜ್‍ನೊಂದಿಗೆ ಮುಖಕ್ಕೆ ಮಾಸ್ಕ್ ಧರಿಸಿ ಶ್ರಮಿಕ್ ಟ್ರೇನಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮೈಸೂರಿನಿಂದ ಗೋರಖ್ ಪುರದತ್ತ ಪ್ರಯಾಣ ಬೆಳೆಸಿದರು.

ಅಶೋಕಪುರಂ ರೈಲು ನಿಲ್ದಾಣಕ್ಕೆ ಸಾರಿಗೆ ಬಸ್ಸಿನಲ್ಲಿ ಬರಲು ಪ್ರತಿಯೊಬ್ಬರಿಂದ 40 ರೂ. ಹಾಗೂ ಮೈಸೂರಿಂದ ಗೋರಖ್‍ಪುರ್‍ಗೆ ಪ್ರಯಾಣಿಸಲು 895 ರೂ. ನಂತೆ ಶುಲ್ಕ ಪಡೆಯಲಾಯಿತು.

ಇದರಿಂದಾಗಿ ಹಣಕ್ಕಾಗಿ ಕೆಲವರು ಪರದಾಡುತ್ತಿದ್ದರು. ಆದರೆ ಕೆಲ ಸಂಘ-ಸಂಸ್ಥೆ ಹಾಗೂ ಕೆಲಸ ನೀಡಿದ್ದ ಮಾಲೀ ಕರು ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡಿ ಕಳುಹಿಸಿಕೊಟ್ಟರು. ಇಂದು ಸಂಜೆ ಮೈಸೂರಿಂದ ಹೊರಟ ಶ್ರಮಿಕ್ ರೈಲು ಗಾಡಿಯು ಬೆಂಗಳೂರು, ಧರ್ಮಾವರಂ, ನಾಗಪುರ, ಶಾಂಜಿ, ಲಕ್ನೋ ಮಾರ್ಗ ವಾಗಿ ಸೋಮವಾರ ಮಧ್ಯಾಹ್ನ ಉತ್ತರ ಪ್ರದೇಶದ ಗೋರಖ್‍ಪುರ ನಿಲ್ದಾಣ ತಲುಪಲಿದೆ. ಅಲ್ಲಿಗೆ ತಲುಪುವವರೆಗೆ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್ (Iಖಛಿಣಛಿ) ವತಿಯಿಂದ ಪ್ರಯಾಣಿಕರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಲಿದೆ.

ರೈಲ್ವೇ ಪ್ರೊಡಕ್ಷನ್ ಫೋರ್ಸ್ (ಖPಈ)ನ 6 ಮಂದಿ ಅಧಿಕಾರಿಗಳು ಈ ಟ್ರೇನಿನಲ್ಲಿ ಪ್ರಯಾಣಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ನಾಳೆ(ಮೇ 17) ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಶ್ರಮಿಕ್ ರೈಲು ಮೈಸೂರಿನಿಂದ ಗೋರಖ್‍ಪುರ್‍ಗೆ ಪ್ರಯಾಣ ಬೆಳೆಸಲಿದ್ದು, ಭಾನುವಾರ 1,400 ಮಂದಿ ವಲಸೆ ಕಾರ್ಮಿಕರು ಅದ ರಲ್ಲಿ ತವರಿಗೆ ಹಿಂದಿರುಗುವರು.

Translate »