ಮೇಕೆದಾಟು ಯೋಜನೆ ಅನುಷ್ಠಾನಕ್ಕೆ  ಮೂರು ಪಕ್ಷಗಳಲ್ಲೂ ಬದ್ಧತೆ ಇಲ್ಲ
ಮೈಸೂರು

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮೂರು ಪಕ್ಷಗಳಲ್ಲೂ ಬದ್ಧತೆ ಇಲ್ಲ

January 24, 2022

ಮೈಸೂರು,ಜ.23(ಪಿಎಂ)- ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಅನುಷ್ಠಾನ ಸಂಬಂಧ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಬದ್ಧತೆ ಹೊಂದಿಲ್ಲ. ಮೂರು ಪಕ್ಷಗಳು ಈ ವಿಚಾರದಲ್ಲಿ ನಾಟಕ ದಲ್ಲಿ ನಿರತವಾಗಿವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಟೀಕಿಸಿದರು.

ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಮೇಕೆದಾಟು ಯೋಜನೆ ವಿಚಾರದಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳು ರಾಜಕೀಯ ಮಾಡು ತ್ತಿವೆ. ಕಾಂಗ್ರೆಸ್‍ನವರಂತೂ ಪಾದಯಾತ್ರೆ ಎಂಬ ದೊಡ್ಡ ನಾಟಕ ನಡೆಸುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಯವರೂ ನಾಟಕವಾಡುತ್ತಿದ್ದು, ಇವರೆಲ್ಲರೂ ಈ ವಿಚಾರ ದಲ್ಲಿ ನಾಟಕದಲ್ಲಿ ನಿರತರಾಗಿದ್ದಾರೆಯೇ ಹೊರತು, ಬದ್ಧತೆ ಹೊಂದಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‍ನವರು 6 ವರ್ಷ ಆಡಳಿತ ನಡೆಸಿ ದರೂ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಇವರಿಗೆ ನಿಜವಾದ ಬದ್ಧತೆ ಇದ್ದರೆ ಎಲ್ಲಾ ಶಾಸಕರು, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ನಡೆಸಲಿ ಎಂದು ಒತ್ತಾಯಿಸಿದರು.

ಮಹದಾಯಿ ಮತ್ತು ಮೇಕೆದಾಟು ಯೋಜನೆ ಅನು ಷ್ಠಾನ ಮತ್ತು ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ರಾಜೀನಾಮೆ ನೀಡಲಿ. ಆಗ ಇವರ ಹೋರಾಟಕ್ಕೆ ಶಕ್ತಿ ಬರಲಿದೆ. ಕಾಂಗ್ರೆಸ್ ಪಾದಯಾತ್ರೆ ಶೋಕಿಯಾಗಿದೆ. ಇವರ ಪಾದಯಾತ್ರೆಯನ್ನು ಬಿಜೆಪಿಯವರು ತಡೆದರೆ, ಜೆಡಿಎಸ್ ನವರು ಮತ್ತೊಂದು ಜಾಥಾ ನಡೆಸುತ್ತಾರೆ. ಇದೆಲ್ಲಾ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೇಕೆದಾಟು ಬಗ್ಗೆ ಸ್ಪಷ್ಟ ನಿಲುವು ತಿಳಿಸಿ: ಮೇಕೆದಾಟು ಯೋಜನೆ ಅನುಷ್ಠಾನ ಸಂಬಂಧ ಕೇಂದ್ರದಲ್ಲೂ ತಮ್ಮದೇ ಸರ್ಕಾರ ಹೊಂದಿರುವ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸರ್ಕಾರದ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಕನ್ನಡ ಚಳವಳಿ ಹೋರಾಟಗಾರರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ. ಈವರೆಗೂ ಕಾವೇರಿ ನಿರ್ವ ಹಣಾ ಮಂಡಳಿಯಲ್ಲಿ ಮೇಕೆದಾಟು ಬಗ್ಗೆ ತೀರ್ಮಾನವೇ ಆಗಿಲ್ಲ. ಇದಕ್ಕೆ ಕಾರಣವೇನು? ಕೇಂದ್ರ ಸರ್ಕಾರ ರಾಜ್ಯ ಕಡೆಗಣಿಸಿದೆ. ರಾಜ್ಯದಲ್ಲಿ ಸಂಸದರು ಏನು ಮಾಡು ತ್ತಿದ್ದಾರೆ. ಇವರು ದನ ಕಾಯುವುದೇ ಸೂಕ್ತ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದು ಯಾವಾಗ? ಎಂದು ಪ್ರಶ್ನಿಸಿದರು.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೊಗೇನಕಲ್ ಯೋಜನೆಯ 2ನೇ ಹಂತ ಕಾಮಗಾರಿ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು. ಪುಂಡಾಟ ನಡೆಸಿದ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಕೂಡಲೇ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಯೋಜನೆ ಕೈಗೆತ್ತಿಕೊಳ್ಳಿ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೂಡಲೇ ಮುಂದಾಗಬೇಕು. ಈ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಾತ್ರವಲ್ಲದೆ, ಆಡ ಳಿತ ಪಕ್ಷ ಬಿಜೆಪಿ ತನ್ನಯೂ ನಿಲುವು ತಿಳಿಸಬೇಕು. ಈ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿ ದರು. ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠ್ಠಲಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »