ಮೈಸೂರು, ಜ.23(ಎಂಟಿವೈ)- ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಡವಂತೆ ಆಗ್ರಹಿಸಿ ಯುವಕನೊಬ್ಬ ಸೈಕಲ್ ನಲ್ಲಿಯೇ ದೇಶ ಸುತ್ತುತ್ತಿದ್ದು, ಭಾನುವಾರ ಮೈಸೂರಿಗೆ ಆಗಮಿಸಿ ಜನರಲ್ಲಿ ಸರ್ಕಾರಿ ಶಾಲೆ-ಕಾಲೇಜು ರಕ್ಷಿಸುವ ಅಗತ್ಯತೆ ಬಗ್ಗೆ ಅರಿವು ಮೂಡಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಹನುಮನಹಳ್ಳಿ ನಿವಾಸಿ ಸುದರ್ಶನ್ ಎಂಬ ಯುವಕನೇ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಸಂರಕ್ಷಣೆಗೆ ಸೈಕಲ್‍ನಲ್ಲಿ ಪರ್ಯಟನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ 158 ದಿನಗಳ ಹಿಂದೆ ಸೈಕಲ್‍ನಲ್ಲಿ ದೇಶ ಸುತ್ತಲು ಯಾತ್ರೆ ಆರಂಭಿಸಿದ ದರ್ಶನ್ ಕೇರಳ, ತಮಿಳುನಾಡು ಸುತ್ತಿಕೊಂಡು ಮಂಗಳೂರು, ಕೊಡಗು ಜಿಲ್ಲೆಯ ಮೂಲಕ ಇಂದು ಮೈಸೂರು ತಲುಪಿದರು. ವಿವಿಧೆಡೆ ತೆರಳಿ ಸರ್ಕಾರಿ ಶಾಲೆ-ಕಾಲೇಜುಗಳ ಸಂರಕ್ಷಿಸುವ ಅಗತ್ಯತೆ ಯನ್ನು ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸೈಕಲ್ ಯಾತ್ರಿ ಸುದರ್ಶನ್, ರಾಜ್ಯದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಪರಿಸ್ಥಿತಿ ಹದಗೆಡುತ್ತಿದೆ. ಸರ್ಕಾರವೇ ಶಾಲಾ ಕಾಲೇಜುಗಳನ್ನು ನಿರ್ಲಕ್ಷಿಸುತ್ತಿದೆ. ಅಗತ್ಯ ಮೂಲ ಸೌಲಭ್ಯ ಕಲ್ಪಿಸದೇ ಜನರೇ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಮಕ್ಕಳನ್ನು ಸೇರಿಸದಂತೆ ಮಾಡುವ ಹುನ್ನಾರ ನಡೆಯುತ್ತಿದೆ. ಇದರಿಂದಾಗಿ ಶಾಲೆ, ಕಾಲೇಜು ಅಭಿವೃದ್ಧಿಗೆ ಅನುದಾನವನ್ನೂ ಬಿಡುಗಡೆ ಮಾಡದೇ ನಿರ್ಲಕ್ಷಿಸಲಾಗುತ್ತಿದೆ. ಸಮಾಜದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವವರಲ್ಲಿ ಬಹುಪಾಲು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿಯೇ ಶಿಕ್ಷಣ ಪಡೆದಿರುವವರೇ ಹೆಚ್ಚಾಗಿದ್ದಾರೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳೇ ವಿದ್ಯಾರ್ಥಿಗಳಿಗೆ ಬದುಕು ರೂಪಿಸಿಕೊಳ್ಳುವುದನ್ನು ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೈಸೂರಿನ ಆಗಮಿಸಿದ ಸೈಕಲ್ ಯಾತ್ರಿ ಸುದರ್ಶನ್‍ಗೆ ಸಾಮಾಜಿಕ ಹೋರಾಟಗಾರರಾದ ಪ್ರೇಮ ಬೋಧಿ ಹಾಗೂ ವಿದ್ಯಾರ್ಥಿ ಧುನುಷ್ ಸ್ವಾಗತಿಸಿ, ಶುಭ ಕೋರಿದರು.