ಸರಳ ವಿಧಾನದಲ್ಲಿ ಆಸ್ತಿ ನೋಂದಣಿ
News

ಸರಳ ವಿಧಾನದಲ್ಲಿ ಆಸ್ತಿ ನೋಂದಣಿ

September 6, 2022

ಬೆಂಗಳೂರು, ಸೆ. 5(ಕೆಎಂಶಿ)-ಆಸ್ತಿ ನೋಂದಣಿಗಾಗಿ ಇನ್ನು ಮುಂದೆ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿಲ್ಲ, ಮಧ್ಯವರ್ತಿಗಳ ಬಳಿ ಕೈಕಟ್ಟಿ ನಿಲ್ಲುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ರಾಜ್ಯ ಸರ್ಕಾರ ಹೊಸದಾಗಿ ಸಿದ್ಧಪಡಿಸಿರುವ ಕಾವೇರಿ-2 ತಂತ್ರಾಂಶದ ಮೂಲಕ ಗ್ರಾಹಕರು ಮನೆಯಲ್ಲೇ ಕುಳಿತು ಆಸ್ತಿ ನೋಂದಣಿಗೆ ದಾಖಲೆ ಸಹಿತ ಅರ್ಜಿ ಸಲ್ಲಿಸಬೇಕು.

ತಾವು ಇಚ್ಛೆಪಡುವ ದಿನಾಂಕದಂದು ನೋಂದಣಿ ಕಚೇರಿಗೆ ತೆರಳಿ 20 ನಿಮಿಷಗಳಲ್ಲಿ ತಮ್ಮ ಕೆಲಸ ಮುಗಿಸಿ, ಹೊರ ಬರುವಂತಹ ಕಾವೇರಿ-2 ತಂತ್ರಾಂಶಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಅಷ್ಟೇ ಅಲ್ಲ, ತಾವು ಖರೀದಿ ಮಾಡುವ ಆಸ್ತಿ ಕ್ರಮವಾಗಿದೆಯೇ ಎಂದು ಪರಿಶೀಲಿಸಲು ಸರ್ಕಾರಿ ಸ್ವಾಮ್ಯದ ಪ್ರತ್ಯೇಕ ಕಚೇರಿಯಲ್ಲಿ ಶುಲ್ಕ ಪಾವತಿಸಿ, ಖರೀದಿಸುವ ಆಸ್ತಿಯ ದಾಖಲೆಗಳನ್ನು ಸರ್ಕಾರದಿಂದಲೇ ಪಡೆಯಬಹುದಾಗಿದೆ. ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಆಸ್ತಿ ನೋಂದಣಿ ಯಲ್ಲಿ ಇನ್ನುಮುಂದೆ ಮಧ್ಯವರ್ತಿಗಳನ್ನು ತಪ್ಪಿಸಿ, ಯಾರಿಗೂ ಲಂಚ ನೀಡದೇ ಸರಳವಾಗಿ ನೋಂದಣಿ ಮಾಡಿಕೊಳ್ಳುವ ಹೊಸ ವ್ಯವಸ್ಥೆ ನವೆಂಬರ್ 1 ರಿಂದ ರಾಜ್ಯಾದ್ಯಂತ ಜಾರಿಗೊಳ್ಳಲಿದೆ ಎಂದರು. ಸರ್ಕಾರದ ಈ ನಿರ್ಧಾರದಿಂದ ಇಲಾಖೆಗಿರುವ ಭ್ರಷ್ಟಾಚಾರವನ್ನು ತೊಲಗಿಸಿ, ಗ್ರಾಹಕರು ಅಲೆದಾಡಿ, ದಿನಗಟ್ಟಲೇ ಕಾಯುವ ವ್ಯವಸ್ಥೆಗೆ ಕೊನೆ ಹಾಡುವುದಲ್ಲದೆ, ದಾಖಲೆಗಳ ನೈಜತೆಗೆ ಇನ್ನು ಮುಂದೆ ಸರ್ಕಾರವೇ ಹೊಣೆಯಾಗಿರುತ್ತದೆ ಎಂದು ವಿವರಿಸಿದರು. ಆಸ್ತಿನೋಂದಣಿಗಾಗಿ ರಾಜ್ಯಾದ್ಯಂತ ಜನರ ಅಲೆದಾಟ ನಡೆಯುತ್ತಲೇ ಇದ್ದು, ಇದನ್ನು ತಪ್ಪಿಸಲು ಕಾವೇರಿ-2 ಕಾರ್ಯಕ್ರಮ ಜಾರಿಗೊಳಿಸುವುದಾಗಿ ನುಡಿದರು. ಇದರಡಿ ಇನ್ನು ಮುಂದೆ ಆಸ್ತಿ ನೋಂದಣಿ ಮಾಡಿಸಲು ಜನ ಉಪನೋಂದಣಾ ಧಿಕಾರಿಗಳ ಕಚೇರಿಗೆ ಅಲೆದಾಡ ಬೇಕಿಲ್ಲ.ಬದಲಿಗೆ ಮನೆಯಲ್ಲಿ ಕುಳಿತೇ ಆನ್‍ಲೈನ್ ಮೂಲಕ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜತೆ ದಾಖಲೆ ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ. ಅದರಲ್ಲಿ ಏನಾದರೂ ಕೊರತೆ ಇದ್ದರೆ,ತಪ್ಪಿದ್ದರೆ ಅರ್ಜಿದಾರರಿಗೆ ತಿಳಿಸುತ್ತಾರೆ. ತದನಂತರ ಸದರಿ ದಾಖಲೆ ಪತ್ರದ ನೋಂದಣಿಗೆ ಸಮಯಾವಕಾಶವನ್ನು ನಿಗದಿಗೊಳಿಸಲಾಗುತ್ತದೆ.ಹೀಗೆ ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಅರ್ಜಿದಾರರು ಹೋದರೆ ಅವರ ಹೆಬ್ಬೆಟ್ಟು ಗುರುತು ಮತ್ತು ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು 20 ನಿಮಿಷಗಳಲ್ಲಿ ಪೂರ್ಣಗೊಳಿಸ ಲಾಗುತ್ತದೆ. ನೋಂದಣಿಯ ನಂತರ ಅದರ ಪ್ರತಿಯನ್ನು ಪಡೆಯಲೂ ಅರ್ಜಿದಾರರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯಬೇಕಿಲ್ಲ.ಬದಲಿಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಅರ್ಜಿದಾರರ ಡಿ.ಜಿ. ಲಾಕರ್‍ಗೆ ಅದರ ಪ್ರತಿ ರವಾನೆಯಾಗುತ್ತದೆ. ಡಿ.ಜಿ.ಲಾಕರ್ ಸುರಕ್ಷಿತವಾಗಿರುವುದರಿಂದ ಈ ನೋಂದಣಿ ದಾಖಲೆಯನ್ನು ಬೇರೆಯವರು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಕಾವೇರಿ-2 ತಂತ್ರಾಂಶವು ಇಲಾಖೆಯ ಬೇರೆ ಬೇರೆ ತಂತ್ರಾಂಶಗಳೊಂದಿಗೆ ಸಂವಹನ ನಡೆಸುವ ಸಾಮಥ್ರ್ಯ ಇರುವುದರಿಂದ ನೋಂದಣಿಗೆ ನಾಗರಿಕರಿಂದ ಪಡೆಯುವ ದಾಖಲೆಗಳನ್ನು ಮಿತಿಗೊಳಿಸಬಹುದಾಗಿದೆ. ಆಸ್ತಿ ನೋಂದಣಿಯಲ್ಲಿ ನಾಗರಿಕರಿಗೆ ಆಗುವ ಅಕ್ರಮ ಮತ್ತು ವಂಚನೆಯನ್ನು ಇದರಿಂದ ತಡೆಯಬಹುದಾಗಿದೆ ಎಂದರು.

ಈ ತಂತ್ರಾಂಶವು ಅಡೆತಡೆ ರಹಿತವಾದ ಸುಗಮ-ಸರಳ, ತಾಂತ್ರಿಕ ದೋಷರಹಿತ ನೋಂದಣಿ ಪ್ರಕ್ರಿಯೆಯನ್ನೊಳಗೊಂಡಿದೆ. ಇನ್ನು ಮುಂದೆ ಸರ್ವರ್ ಡೌನ್ ಎನ್ನುವ ಮಾತೇ ಇರುವುದಿಲ್ಲ. ಕೇಂದ್ರೀಯ ಸರ್ವರ್ ಹೊರತುಪಡಿಸಿ, ಯಾವುದೇ ಸ್ಥಳೀಯ ಸರ್ವರ್‍ಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಂತ್ರಾಂಶಗಳನ್ನು ಸಿಡಿಯಲ್ಲಿ ಸಂಗ್ರಹಿಸುವ ಹಳೆ ಪದ್ಧತಿಯನ್ನು ಕೈಬಿಡಲಾಗಿದೆ. ಇದು ರಾಜ್ಯ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಣೆಯಾಗಿರುವುದರಿಂದ ಇದರ ವೆಚ್ಚವೂ ಕಡಿಮೆಯಾಗುತ್ತದೆ. ಈ ಮಧ್ಯೆ ಮನೆ, ಕಟ್ಟಡ, ನಿವೇಶನ ಮತ್ತು ಭೂಮಿಯ ಖರೀದಿಯಲ್ಲಿ ಯಾರೂ ಮೋಸ ಹೋಗದಂತೆ ತಡೆಯಲು ಸರ್ಕಾರವೇ ಏಜೆನ್ಸಿಗಳನ್ನು ಪ್ರಾರಂಭಿಸಲಿದ್ದು ಇದರ ರೂಪುರೇಷೆಗಳು ಸಿದ್ಧವಾಗುತ್ತಿವೆ ಎಂದರು. ಸಂಬಂಧಿತ ಆಸ್ತಿಯ ಖರೀದಿಯಲ್ಲಿ ಯಾವುದಾದರೂ ಸಮಸ್ಯೆ ಇದೆಯೇ ಅಥವಾ ಸಮಸ್ಯೆ ಇಲ್ಲವೇ ಎಂಬುದನ್ನು ಸರ್ಕಾರದ ಏಜೆನ್ಸಿಯೇ ಪರಿಶೀಲಿಸಿ ಹಸಿರು ನಿಶಾನೆ ನೀಡುತ್ತದೆ.ಆ ಮೂಲಕ ಒಂದೇ ನಿವೇಶನ ಮತ್ತು ಆಸ್ತಿಯನ್ನು ಹಲವು ಕಡೆ ಮಾರುವುದರಿಂದ ಹಿಡಿದು ಹಲವು ಬಗೆಯಲ್ಲಿ ವಂಚಿಸುವ ಜಾಲದಿಂದ ಜನ ಬಚಾವಾಗುತ್ತಾರೆ ಎಂದರು. ಸರ್ಕಾರದ ಏಜೆನ್ಸಿಗೆ ನಿಗದಿತ ಶುಲ್ಕ ಪಾವತಿಸಿ, ಗ್ರಾಹಕರು ತಾವು ಖರೀದಿಸುವ ಆಸ್ತಿಯ ದಾಖಲೆಗಳನ್ನು ಸರ್ಕಾರದಿಂದಲೇ ಪಡೆದು, ಆನಂತರ ನೋಂದಣಿ ಮಾಡಿಸಿಕೊಳ್ಳಬಹುದು. ನವೆಂಬರ್ 1 ರಿಂದ ಹೊಸ ತಂತ್ರಾಂಶ ಕಂದಾಯ ಇಲಾಖೆಯ ಇತರ ತಂತ್ರಾಂಶಗಳಿಗೆ ಸಂಪರ್ಕವಿರುತ್ತದೆ. ಒಂದು ಆಸ್ತಿಯ ಬಗ್ಗೆ ಎಲ್ಲಿಯಾದರೂ, ಮೋಸ, ವಂಚನೆ ಮಾಡಲು ಮುಂದಾದರೆ, ತಕ್ಷಣವೇ ಅದರ ಆಸ್ತಿಯ ವಾರಸುದಾರರ ಪೂರ್ಣ ಮಾಹಿತಿ ನೀಡುತ್ತದೆ. ಇಂತಹ ಸನ್ನಿವೇಶದಲ್ಲಿ ನೋಂದಣಾಧಿಕಾರಿಗಳು ಸಂಬಂಧಪಟ್ಟ ಆಸ್ತಿಯನ್ನು ನೋಂದಾಯಿಸಲು ಮುಂದಾದ ಗ್ರಾಹಕರಿಗೆ ಪೂರ್ಣ ಚಿತ್ರಣವನ್ನು ನೀಡಲಿದ್ದಾರೆ. ಆಸ್ತಿ ನೋಂದಣಿ ಮಾಡಿಸಲು ಶೇಕಡಾ ಹತ್ತರಷ್ಟು ರಿಯಾಯ್ತಿ ನೀಡಿದ ಪರಿಣಾಮವಾಗಿ ಸರ್ಕಾರದ ಆದಾಯ ಹೆಚ್ಚಿದ್ದು ಕಳೆದ ಮೂರು ತಿಂಗಳಲ್ಲಿ 6700 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹವಾಗಿದೆ.

Translate »