ಮಳವಳ್ಳಿ ಬಳಿ ಪಂಪ್‍ಹೌಸ್‍ಗೆ ನುಗ್ಗಿದ ನೀರು ಬೆಂಗಳೂರಿಗೆ ಸದ್ಯಕ್ಕೆಕಾವೇರಿ ನೀರು ಬಂದ್
ಮಂಡ್ಯ

ಮಳವಳ್ಳಿ ಬಳಿ ಪಂಪ್‍ಹೌಸ್‍ಗೆ ನುಗ್ಗಿದ ನೀರು ಬೆಂಗಳೂರಿಗೆ ಸದ್ಯಕ್ಕೆಕಾವೇರಿ ನೀರು ಬಂದ್

September 6, 2022

ಮಂಡ್ಯ, ಸೆ.5- ಕಳೆದ 15 ದಿನಗಳಿಂದ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಯಿಂದ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಭೀಮೇಶ್ವರಿ ನದಿ ಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನದಿ ನೀರು ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ) ಯಲ್ಲಿರುವ ಜಲಮಂಡಳಿಯ ಜಲರೇಚಕ ಯಂತ್ರಾಗಾರಕ್ಕೆ (ಪಂಪ್‍ಸ್ಟೇಷನ್) ನುಗ್ಗಿದ ಪರಿಣಾಮ ಬೆಂಗಳೂರಿಗೆ ಕಾವೇರಿ ನೀರು ಕಲ್ಪಿಸುವ ಎರಡು ಪಂಪ್‍ಹೌಸ್ ಸಂಪೂರ್ಣ ಜಲಾವೃತವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ 80 ಕಿ.ಮೀ. ದೂರದಲ್ಲಿರುವ ಟಿ.ಕೆ.ಹಳ್ಳಿಯ ಈ ಪಂಪ್‍ಸ್ಟೇಷನ್‍ನಿಂದ ಪ್ರತಿದಿನ ಬೆಂಗ ಳೂರಿನ ಬಹುತೇಕ ಭಾಗಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಎರಡು ಪಂಪ್‍ಹೌಸ್ ಜಲಾವೃತಗೊಂಡ ಹಿನ್ನೆಲೆ ಯಲ್ಲಿ ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಜಲರೇಚಕ ಯಂತ್ರ ಘಟಕದ ಸ್ಟೇಜ್ 4 ಪಂಪ್‍ಹೌಸ್‍ನಲ್ಲಿ 23 ಅಡಿ ನೀರು ತುಂಬಿಕೊಂಡಿದ್ದು, ಈ ಪೈಕಿ 12 ಅಡಿ ನೀರನ್ನು ಹೊರ ತೆಗೆಯಲಾಗಿದೆ. ಉಳಿದ 11 ಅಡಿ ನೀರನ್ನು ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಹೊರ ತೆಗೆಯುವ ಸಾಧ್ಯತೆ ಇದ್ದು, ನಂತರವಷ್ಟೇ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸಿಎಂ ದೌಡು: ಸೋಮವಾರ ಬೆಳಗ್ಗೆಯಿಂದಲೇ ಬೆಂಗಳೂರಿನ ಹಲವು ಭಾಗಗಳಲ್ಲಿ ಕುಡಿಯುವ ನೀರು ಸರಬರಾಜಾಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಸಭೆ ನಡೆಸಿ ಬಳಿಕ ಮಳವಳ್ಳಿಯ ಟಿ.ಕೆ.ಹಳ್ಳಿಯತ್ತ ದೌಡಾಯಿಸಿದರು.

ನೀರಿನಿಂದ ಜಲಾವೃತ್ತಗೊಂಡಿದ್ದ ಪಂಪ್‍ಹೌಸ್‍ಗಳನ್ನು ಸಚಿವ ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಭೈರತಿ ಬಸವರಾಜು, ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಸಚಿವ ಬಿ.ಸೋಮಶೇಖರ್, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಎಸ್‍ಪಿ ಯತೀಶ್ ಅವ ರೊಂದಿಗೆ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಭಾನುವಾರ ರಾತ್ರಿ ಸುರಿದ ಬಾರೀ ಮಳೆಯಿಂದ ಭೀಮೇಶ್ವರ ನದಿ ನೀರು ಪಂಪ್ ಸ್ಟೇಷನ್‍ಗೆ ನುಗ್ಗಿದ ಪರಿಣಾಮ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ. ಮಂಗಳವಾರ (ಸೆ.6) ಮಧ್ಯಾಹ್ನದೊಳಗೆ ನೀರಿನ ಘಟಕಗಳನ್ನು ಸರಿಪಡಿಸಿ, ಬೆಂಗಳೂರಿಗೆ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಜನವರಿಯಿಂದ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮ ರಾಜ್ಯದ ಎಲ್ಲಾ ಕೆರೆ, ಕಟ್ಟೆ ಭರ್ತಿಯಾಗಿದ್ದು, ಮಳೆ ನೀರು- ಕೆರೆ ನೀರಿನಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಜಾಗೃತಿ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಬೆಂಗಳೂರಿಗೆ ನೀರಿನ ಕೊರತೆಯಾಗದಂತೆ ಕ್ರಮ ವಹಿಸಲಾಗುತ್ತಿದೆ. ಬೋರ್ವೆಲ್ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಬೋರ್ವೆಲ್ ಇಲ್ಲದ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದರು.

Translate »