ಚಾಮರಾಜನಗರ, ಸೆ.6- ಸಿಡಿಲು ಬಡಿದು ಇಬ್ಬರು ರೈತರು ಸೇರಿದಂತೆ 6 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ರೇವಣ್ಣ(45) ಹಾಗೂ ಹನೂರು ತಾಲೂಕಿನ ಮೀಣ್ಯಂ ಗ್ರಾಮದ ನಿವಾಸಿ ಎಸ್.ಮಾದಪ್ಪ(64) ಮೃತಪಟ್ಟವರು. ಕೆಸ್ತೂರು ಗ್ರಾಮದ ರೈತ ರೇವಣ್ಣ ಅವರು ತಮ್ಮ ಜಮೀನಿನಲ್ಲಿ ಭತ್ತ ನಾಟಿ ಮಾಡು ತ್ತಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಣ್ಯಂ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಮಾದಪ್ಪ ಎಂದಿನಂತೆ ಕುರಿ ಮೇಯಿಸುತ್ತಿದ್ದರು. ಸಂಜೆ ವೇಳೆ ಸಿಡಿಲು ಬಡಿದ ಪರಿಣಾಮ ಮಾದಪ್ಪ ಅಸುನೀಗಿದ್ದು, 6 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಮೃತರ ಸಂಬಂಧಿಕರ ರೋಧನೆ ಮುಗಿಲು ಮುಟ್ಟಿದ್ದು, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಲೊಕ್ಕನಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕ ಮಾದೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ರಾತ್ರಿಗೆ ಮಳೆಗೆ ಗೋಡೆ ಕುಸಿದು ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದ ಮೂರ್ತಿ ಎಂಬುವವರು ಮೃತಪಟ್ಟಿದ್ದರು. ಮಂಗಳವಾರ ಸಿಡಿಲಿಗೆ ಇಬ್ಬರು ಮೃತಟ್ಟಿದ್ದು, ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಂತಾಗಿದೆ.