ಭಾರತೀಯ ಜನತಾ ಪಕ್ಷಕ್ಕೆ ಡಬಲ್ ಧಮಾಕಾ ಮೈಸೂರು ನೂತನ ಮೇಯರ್ ಶಿವಕುಮಾರ್
ಮೈಸೂರು

ಭಾರತೀಯ ಜನತಾ ಪಕ್ಷಕ್ಕೆ ಡಬಲ್ ಧಮಾಕಾ ಮೈಸೂರು ನೂತನ ಮೇಯರ್ ಶಿವಕುಮಾರ್

September 7, 2022

ಮೈಸೂರು ನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ಶಿವಕುಮಾರ್ ಮತ್ತು ಡಾ. ರೂಪ ಅವರನ್ನು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಇತರರು ಆತ್ಮೀಯವಾಗಿ ಅಭಿನಂದಿಸಿದರು.

ಮೈಸೂರು, ಸೆ. 6 (ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯ 24ನೇ ಮೇಯರ್ ಆಗಿ ಭಾರತೀಯ ಜನತಾ ಪಕ್ಷದ ಶಿವಕುಮಾರ್ ಆಯ್ಕೆಯಾಗಿದ್ದು, ಅಂತಿಮ ಕ್ಷಣದ ಕ್ಷಿಪ್ರ ಬೆಳವಣಿಗೆಯಲ್ಲಿ ಅದೇ ಪಕ್ಷದ ಡಾ.ಜಿ.ರೂಪಾ ಅವರಿಗೆ ಉಪಮೇಯರ್ ಸ್ಥಾನ ಒಲಿದಿದೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿಯ ನಾಲ್ವಡಿ ಕೃಷ್ಣರಾಜ ಒಡೆ ಯರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಂತಿಮ ಘಳಿಗೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಏರ್ಪಟ್ಟಿದ್ದರಿಂದ ಬಿಜೆಪಿಯ ಶಿವಕುಮಾರ್ (47ನೇ ವಾರ್ಡ್) ಮೇಯರ್ ಆಗಿ ಆಯ್ಕೆಗೊಂಡರು. ಅವರಿಗೆ 47 ಮತ ಗಳು ಲಭಿಸಿದವು. ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಸದಸ್ಯೆ ರೇಷ್ಮಾ ಬಾನು (17ನೇ ವಾರ್ಡ್) ಅವರ ನಾಮಪತ್ರ ತಿರಸ್ಕøತಗೊಂಡ ಹಿನ್ನೆಲೆಯಲ್ಲಿ ಅನಿ ವಾರ್ಯವಾಗಿ ಬಿಜೆಪಿಯ ಡಾ.ಜಿ.ರೂಪಾ (53ನೇ ವಾರ್ಡ್) ಅವರ ಆಯ್ಕೆಗೆ ಅವಕಾಶ ಮಾಡಿಕೊಡಲಾಯಿತು. ಡಾ. ರೂಪಾ ಅವರು 45 ಮತಗಳನ್ನು ಪಡೆದರು. ಇಂದು ಬೆಳಗ್ಗೆವರೆಗೂ ಸ್ವತಂತ್ರವಾಗಿಯೇ ಸ್ಪರ್ಧೆಗಿಳಿ ಯುತ್ತೇವೆಂಬ ನಿಲುವಿಗೆ ಬದ್ಧ ರಾಗಿದ್ದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೇಯರ್, ಉಪಮೇಯರ್ ಸ್ಥಾನಗಳಿಗೆ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅದರಂತೆ ಕಾಂಗ್ರೆಸ್ಸಿನ ಜೆ.ಗೋಪಿ. ಸೈಯದ್ ಹಸ್ರತ್ ಉಲ್ಲಾ, ಬಿಜೆಪಿಯ ಶಿವಕುಮಾರ್, ಜೆಡಿಎಸ್‍ನ ಕೆ.ವಿ.ಶ್ರೀಧರ್ ಹಾಗೂ ಜೆಡಿಎಸ್‍ನ ಬಂಡಾಯ ಅಭ್ಯರ್ಥಿಯಾಗಿ ಕೆ. ನಿರ್ಮಲ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ದ್ದರು. ಉಪಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್‍ನಿಂದ ಶೋಭಾ, ಬಿಜೆಪಿಯಿಂದ ಡಾ.ಜಿ.ರೂಪಾ ಹಾಗೂ ಜೆಡಿಎಸ್ ನಿಂದ ರೇಷ್ಮಾಬಾನು ಉಮೇದುವಾರಿಕೆ ಸಲ್ಲಿಸಿದ್ದರು. ಬೆಳಗ್ಗೆ 8ರಿಂದ 10 ಗಂಟೆ ಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು. ಮಧ್ಯಾಹ್ನ 12 ಗಂಟೆಗೆ ಚುನಾ ವಣಾ ಪ್ರಕ್ರಿಯೆ ಆರಂಭಿಸಿದ ಚುನಾ ವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್, ಮೊದಲು ಮೇಯರ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನಿಡಿದರು. ಮೇಯರ್ ಸ್ಥಾನಕ್ಕೆ ಸಲ್ಲಿಸಿದ್ದ ಎಲ್ಲಾ ನಾಮಪತ್ರಗಳೂ ಊರ್ಜಿತವಾಗಿವೆ ಎಂದು ಘೋಷಿಸುತ್ತಿದ್ದಂತೆಯೇ, ಕಾಂಗ್ರೆಸ್ ತಂತ್ರಗಾರಿಕೆಯಿಂದ ಎಚ್ಚೆತ್ತ ಬಿಜೆಪಿ, ಜೆಡಿಎಸ್ ಮೈತ್ರಿ ನಿರ್ಧಾರಕ್ಕೆ ಬಂದವು. ಹಾಗಾಗಿ ಜೆಡಿಎಸ್‍ನ ಕೆ.ವಿ. ಶ್ರೀಧರ್ ತಮ್ಮ ನಾಮಪತ್ರ ವಾಪಸ್ ಪಡೆದರೆ, ಕಾಂಗ್ರೆಸ್‍ನ ಗೋಪಿ ಸಹ ಉಮೇದುವಾರಿಕೆ ಹಿಂಪಡೆದರು. ಅಂತಿಮವಾಗಿ ಕಾಂಗ್ರೆಸ್ಸಿನ ಸೈಯದ್ ಹಸ್ರತ್ ಉಲ್ಲಾ ಮತ್ತು ಬಿಜೆಪಿಯ ಶಿವಕುಮಾರ್ ಕಣದಲ್ಲಿ ಉಳಿದಿದ್ದರು. ಮತದಾನ ನಡೆದಾಗ ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‍ನ ಒಟ್ಟು 47 ಮಂದಿ ಶಿವಕುಮಾರ್ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಹಾಗಾಗಿ ಪ್ರಸಕ್ತ ಅವಧಿಯ 4ನೇ ಮೇಯರ್ ಆಗಿ ಶಿವಕುಮಾರ್ ಆಯ್ಕೆಯಾದರು.

ಜೆಡಿಎಸ್‍ನ ನಿರ್ಮಲ ಅಡ್ಡ ಮತದಾನವೂ ಸೇರಿ ಕಾಂಗ್ರೆಸ್‍ನ ಸೈಯದ್ ಹಸ್ರತ್ ಉಲ್ಲಾ ಅವರಿಗೆ ಕೇವಲ 28 ಮತಗಳು ಲಭಿಸಿ, ಪರಾಭವಗೊಂಡರು.
ಅದೇ ರೀತಿ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನ ಶೋಭಾ, ಬಿಜೆಪಿಯ ಡಾ. ರೂಪಾ, ಜೆಡಿಎಸ್‍ನ ರೇಷ್ಮಬಾನು ಹಾಗೂ ಸ್ವತಂತ್ರವಾಗಿ ನಿರ್ಮಲಾ ಸ್ಪರ್ಧಿಸಿದ್ದರು. ಪರಿಶೀಲನೆ ವೇಳೆ ಬಿಸಿಎ ಪ್ರಮಾಣ ಪತ್ರ ಸಲ್ಲಿಸದ ಕಾರಣ ಜೆಡಿಎಸ್ ಅಭ್ಯರ್ಥಿ ರೇಷ್ಮಬಾನು ಅವರ ನಾಮಪತ್ರ ತಿರಸ್ಕøತಗೊಂಡಿತು. ಇದರಿಂದಾಗಿ 45 ಮತಗಳನ್ನು ಪಡೆದು ಡಾ. ಜಿ. ರೂಪಾ ಉಪಮೇಯರ್ ಆಗಿ ಆಯ್ಕೆಯಾದರು.

ಇಂದು ನಡೆದ ಮೇಯರ್, ಉಪ ಮೇಯರ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 65 ಮಂದಿ ಪಾಲಿಕೆ ಸದಸ್ಯರ ಜೊತೆಗೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ, ಕಾಂಗ್ರೆಸ್‍ನಿಂದ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ದಿನೇಶ್ ಗೂಳಿಗೌಡ, ಜಿ. ಮಧುಮಾದೇಗೌಡ, ಬಿಜೆಪಿಯ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್ ಅವರು ಪಾಲ್ಗೊಂಡು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

ಆಂಬುಲೆನ್ಸ್‍ನಲ್ಲಿ ಬಂದ ಅಶ್ವಿನಿ: ಅನಾರೋಗ್ಯದಿಂದ ಬಳಲುತ್ತಿರುವ 28ನೇ ವಾರ್ಡ್‍ನ ಪಾಲಿಕೆ ಸದಸ್ಯೆ ಡಾ. ಅಶ್ವಿನಿ ಶರತ್ ಅವರು ಆಂಬುಲೆನ್ಸ್‍ನಲ್ಲಿ ಪಾಲಿಕೆ ಕಚೇರಿಗೆ ಬಂದು ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪರ ಮತ ಚಲಾಯಿಸಿ ಹಿಂದಿರುಗಿದ್ದು ವಿಶೇಷವಾಗಿತ್ತು. ಶಾಸಕ ಎಸ್.ಎ. ರಾಮದಾಸ್ ಅವರೇ ಡಾ. ಅಶ್ವಿನಿ ಶರತ್ ಅವರನ್ನು ಕರೆಸಿಕೊಂಡು, ಸುರಕ್ಷಿತವಾಗಿ ಆಸ್ಪತ್ರೆಗೆ ಕಳುಹಿಸುವ ಮುತುವರ್ಜಿ ವಹಿಸಿದ್ದರು.

ಆಯ್ಕೆಯಾದವರಿಗೆ ಅರಿವಿಲ್ಲ: ಅಂತಿಮ ಕ್ಷಣದಲ್ಲಿ ಮೈತ್ರಿಗೆ ಮುಂದಾದರೂ, ತಾಂತ್ರಿಕ ಕಾರಣದಿಂದ ರೇಷ್ಮಾಬಾನು ಅವರ ಉಮೇದುವಾರಿಕೆ ತಿರಸ್ಕøತಗೊಂಡು ಉಪಮೇಯರ್ ಸ್ಥಾನ ಕೈತಪ್ಪಿದ್ದರಿಂದ ನಿರಾಸೆಗೊಂಡ ಜೆಡಿಎಸ್ ಪಾಲಿಕೆ ಸದಸ್ಯರು, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರು, ನಾಮಪತ್ರ ಸಲ್ಲಿಸಿದಾಗಲೇ ಬಿಸಿಎ ಸರ್ಟಿಫಿಕೇಟ್ ಕೇಳಿ ಪಡೆಯಬಹುದಿತ್ತು. ಈಗಲೂ ಸಲ್ಲಿಕೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರಾದರೂ, ಸಭೆಯಲ್ಲೇ ನಾಮಪತ್ರಗಳ ಪರಿಶೀಲನೆ ನಡೆಸಿದ್ದೇವೆ. ಪಾಲಿಕೆ ಚುನಾವಣೆಯಲ್ಲಿ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿ ಆಯ್ಕೆಯಾಗಿರುವ ರೇಷ್ಮಬಾನು ಅವರು, ಬಿಸಿಎ ವರ್ಗಕ್ಕೆ ಮೀಸಲಾಗಿರುವ ಉಪಮೇಯರ್ ಚುನಾವಣೆಗೆ ಸ್ಪರ್ಧಿಸುವಾಗ ಮೀಸಲಾತಿ ಪ್ರಮಾಣ ಪತ್ರ ಸಲ್ಲಿಸುವುದು ಅವರ ಜವಾಬ್ದಾರಿಯಾಗಿರುವುದರಿಂದ ಈ ಹಂತದಲ್ಲಿ ಸರ್ಟಿಫಿಕೇಟ್ ಪಡೆಯಲು ಸಾಧ್ಯವಿಲ್ಲ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಸ್ಪಷ್ಟಪಡಿಸಿದರು.

ಕಮಲದಲ್ಲಿ ಕಲರವ: ಕಳೆದ ಭಾರಿ ಪ್ರಥಮ ಬಾರಿ ಮೇಯರ್ ಗದ್ದುಗೆ ಗಿಟ್ಟಿಸಿಕೊಂಡಿದ್ದ ಬಿಜೆಪಿಯು, ಮತ್ತೊಮ್ಮೆ ಮೇಯರ್ ಸ್ಥಾನ ಪಡೆದಿರುವುದಲ್ಲದೇ, ಜೆಡಿಎಸ್ ಪಾಲಿನ ಉಪಮೇಯರ್ ಸ್ಥಾನವನ್ನೂ ತನ್ನದಾಗಿಸಿಕೊಂಡಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಜೆಪಿ ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದ್ದು, ಹರ್ಷೋದ್ಘಾರ ಮೊಳಗಿತು. ನಾಮಪತ್ರ ಸಲ್ಲಿಸುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ, ಮೈತ್ರಿ ಬೆಳೆಸಿದರೂ ಉಪಮೇಯರ್ ಸ್ಥಾನ ತಾನಾಗಿಯೇ ಕಳೆದುಕೊಂಡ ಜೆಡಿಎಸ್ ಮುಖಂಡರು ಹಾಗೂ ಪಾಲಿಕೆ ಸದಸ್ಯರು ನಿರಾಸೆಯಿಂದ ಹಿಂದಿರುಗಿದರು. ಕೆ.ಆರ್. ಉಪ ವಿಭಾಗದ ಎಸಿಪಿ ಎಸ್.ಇ. ಗಂಗಾಧರಸ್ವಾಮಿ ನೇತೃತ್ವದಲ್ಲಿ ಇಂದು ಮೇಯರ್, ಉಪಮೇಯರ್ ಚುನಾವಣೆಗೆ ಪಾಲಿಕೆ ಕಚೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ಗುರುತಿನ ಚೀಟಿ ಹೊಂದಿದ್ದ ಮತದಾರರು ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿ, ಬೇರೆಯವರು ಕಚೇರಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

Translate »