ಸಚಿವ ಉಮೇಶ್ ಕತ್ತಿ ಇನ್ನಿಲ್ಲ
News

ಸಚಿವ ಉಮೇಶ್ ಕತ್ತಿ ಇನ್ನಿಲ್ಲ

September 7, 2022

ಬೆಂಗಳೂರು, ಸೆ.6-ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಇಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ಮನೆಯ ಬಾತ್ ರೂಂನಲ್ಲಿ ರಾತ್ರಿ 10.30ಕ್ಕೆ ತೀವ್ರ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದಿದ್ದರು. 10-15 ನಿಮಿಷವಾದರೂ ಹೊರಗೆ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬ ಸದಸ್ಯರು, ಬಾಗಿಲು ಒಡೆದು ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣ ಉಮೇಶ್ ಕತ್ತಿ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11.45ರ ವೇಳೆಗೆ ವೈದ್ಯರು ಉಮೇಶ್ ಕತ್ತಿ ಅವರು ನಿಧನರಾಗಿರುವುದಾಗಿ ಪ್ರಕಟಿಸಿದರು. 61 ವರ್ಷದ ಉಮೇಶ್ ಕತ್ತಿ ರಾಜ್ಯ ವಿಧಾನಸಭೆಗೆ 8 ಬಾರಿ ಆಯ್ಕೆಯಾಗಿ ದ್ದರು. ಜನತಾ ಪಕ್ಷ, ಜನತಾ ದಳ, ಸಂಯುಕ್ತ ಜನತಾ ದಳ, ಜಾತ್ಯಾತೀತ ಜನತಾ ದಳ ನಂತರ ಭಾರತೀಯ ಜನತಾ ಪಕ್ಷದಲ್ಲಿ ರಾಜಕಾರಣ ಮಾಡಿದ್ದರು. 1985ರಲ್ಲಿ ತಮ್ಮ ತಂದೆ ವಿಶ್ವನಾಥ್ ಕತ್ತಿ ನಿಧನದ ನಂತರ ರಾಜ ಕಾರಣ ಪ್ರವೇಶಿಸಿದ್ದರು. ಆಗಾಗ ತಾವು ಮುಖ್ಯಮಂತ್ರಿ ಏಕಾಗಬಾರದು ಎಂದು ಪ್ರಶ್ನಿಸುತ್ತಿದ್ದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಮಾಡುವುದರೊಂದಿಗೆ ಆಗಾಗ ವಿವಾದಕ್ಕೂ ಗುರಿಯಾಗುತ್ತಿದ್ದರು. 1985ರಲ್ಲಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ 1989ರಲ್ಲೂ ಜನತಾ ದಳದಿಂದ ಗೆದ್ದು ಬಂದಿದ್ದರು. 1994ರಲ್ಲಿ ಅದೇ ಪಕ್ಷದಿಂದ ಹ್ಯಾಟ್ರಿಕ್ ಸಾಧಿಸಿದ್ದರು. 1999ರಲ್ಲಿ ಸಂಯುಕ್ತ ಜನತಾ ದಳದಿಂದ ಸ್ಪರ್ಧಿಸಿ ನಾಲ್ಕನೇ ಬಾರಿ ಜಯಭೇರಿ ಬಾರಿಸಿದ್ದರು.

2004ರಲ್ಲಿ ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. 2008ರಲ್ಲಿ ಜೆಡಿಎಸ್ ಸೇರಿ ಮತ್ತೆ ಜಯ ಸಾಧಿಸಿದ್ದರು. 2013 ಮತ್ತು 2018ರಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ ಹುಕ್ಕೇರಿ ಕ್ಷೇತ್ರದಲ್ಲಿ ದಾಖಲೆಯ 8ನೇ ಬಾರಿ ಜಯ ಸಾಧಿಸಿದ್ದರು. ಧರಂ ಸಿಂಗ್ ಮತ್ತು ಮಲ್ಲಿ ಕಾರ್ಜುನ ಖರ್ಗೆ ಅವರ 8ನೇ ವಿಜಯದ ದಾಖಲೆ ಯನ್ನು ಕತ್ತಿ ಸರಿಗಟ್ಟಿದ್ದರು. ಸಕ್ಕರೆ ಕಾರ್ಖಾನೆ ಮಾಲೀಕರೂ ಆದ ಉಮೇಶ್ ಕತ್ತಿ, ಇದುವರೆಗೆ ಸಕ್ಕರೆ, ಲೋಕೋಪ ಯೋಗಿ, ತೋಟಗಾರಿಕೆ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬೆಳಗಾವಿಯ ಕೆಎಲ್‍ಇ ಸೊಸೈಟಿಯ ಲಿಂಗರಾಜ ಕಾಲೇಜಿನಲ್ಲಿ ಪಿಯುಸಿ ಓದಿದ್ದ ಉಮೇಶ್ ಕತ್ತಿ, ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು.

ವಿಷಯ ತಿಳಿದ ಕೂಡಲೇ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ, ಕುಟುಂಬಸ್ಥರು ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಉಮೇಶ್ ಕತ್ತಿಯವರಿಗೆ ಈ ಹಿಂದೆಯೂ ಎರಡು ಬಾರಿ ಹೃದಯಾಘಾತವಾಗಿತ್ತು. ಸ್ಟಂಟ್ ಕೂಡ ಅಳವಡಿಸಲಾಗಿತ್ತು. ಇದೀಗ ಮೂರನೇ ಬಾರಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ.

ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಚಿವರಾದ ಡಾ. ಸುಧಾಕರ್, ಆರ್.ಅಶೋಕ್, ಗೋವಿಂದ ಕಾರಜೋಳ, ಮುನಿರತ್ನ ಸೇರಿದಂತೆ ಶಾಸಕರು, ಅವರ ಅಭಿಮಾನಿಗಳು ಸಾಕಷ್ಟು ಮಂದಿ ಭೇಟಿ ನೀಡಿದ್ದರು. ಮೈಸೂರಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಷಯ ತಿಳಿದು ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾದರು. ನಾಳೆ ಬೆಂಗಳೂರಲ್ಲಿ ಕೆಲ ಕಾಲ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಅವರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಇರಿಸಿದ ನಂತರ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಗೆ ಕೊಂಡೊಯ್ಯಲಾಗುತ್ತದೆ ಹೇಳಲಾಗುತ್ತದೆ.

Translate »