ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ; ಪರಿಶೀಲನೆ
News

ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ; ಪರಿಶೀಲನೆ

September 8, 2022

ಡಿಕೇರಿ, ಸೆ.7- ಮುಂಗಾರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿ ಬಗ್ಗೆ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮಡಿಕೇರಿ ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂ ಕುಸಿತ, ಕಾಫಿ ಬೆಳೆ ಹಾನಿ, ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ, ಕೊಯನಾಡು ಶಾಲೆ ಬಳಿ ಭೂ ಕುಸಿತ ಹಾಗೂ ಕಿಂಡಿ ಅಣೆಕಟ್ಟು ಪ್ರದೇಶವನ್ನು ವೀಕ್ಷಿಸಿದರು.

ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಶೀಸ್ ಕುಮಾರ್ ನೇತೃತ್ವದ ತಂಡದಲ್ಲಿ ಕೇಂದ್ರ ಹಣಕಾಸು ಮಂತ್ರಾಲಯದ ಉಪ ನಿರ್ದೇಶಕಾರಾದ ಮಹೇಶ್ ಕುಮಾರ್, ಕೇಂದ್ರ ಇಂಧನ ಮಂತ್ರಾಲಯದ ಸಹಾಯಕ ನಿರ್ದೇಶಕ ರಾದ ಭವ್ಯ ಪಾಂಡೆ ತಂಡವು ಜಿಲ್ಲೆಯ ಭೂಕುಸಿತ, ಬೆಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶವನ್ನು ವಿಕ್ಷೀಸಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಸೀಮೆಹುಲ್ಲು ಕಜೆ ಬಳಿ ಬರೆ ಕುಸಿತ, ಕಾಫಿ ಬೆಳೆಹಾನಿ, ಕೊಯಿನಾಡು ಶಾಲೆ ಬಳಿಯ ಭೂ ಕುಸಿತ, ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಪ್ರವಾಹ ಮತ್ತಿತರ ಬಗ್ಗೆ ಅಧ್ಯಯನ ಕೇಂದ್ರ ತಂಡಕ್ಕೆ ಸವಿವರವಾಗಿ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ರಾಜನ್ ಅವರು ಸುದ್ದಿಗಾರರ ಜೊತೆ ಮಾತ ನಾಡಿ, ರಾಜ್ಯದಲ್ಲಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಭೂಕುಸಿತ, ಬೆಳೆಹಾನಿ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾ ಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು, ಅದರಂತೆ ಮಳೆಹಾನಿ ಅಧ್ಯಯನ ಕೇಂದ್ರ ತಂಡವು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶ ಗಳಿಗೆ ವೀಕ್ಷಣೆ ಕೈಗೊಂಡಿದೆ ಎಂದರು.
ಕೇಂದ್ರದಿಂದ ಮೂರು ತಂಡ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಅಧ್ಯಯನ ಕೇಂದ್ರ ತಂಡವು ಮಳೆ ಹಾನಿ ಸಂಬಂಧ ಚರ್ಚಿಸಿದ್ದಾರೆ ಎಂದು ಮನೋಜ್ ರಾಜನ್ ಅವರು ತಿಳಿಸಿದರು.

ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಉಪ ವಿಭಾಗಾ ಧಿಕಾರಿ ಯತೀಶ್ ಉಲ್ಲಾಳ್, ತಹಸೀಲ್ದಾರ್ ಮಹೇಶ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Translate »